Advertisement

ಕೋಟೆ ಕಡೆಗೆ ಸರ್ಕಾರ ಕಣ್ಣೆತ್ತಿ ನೋಡಲಿ

01:53 PM May 27, 2019 | Team Udayavani |

ಮಾಗಡಿ: ನಾಡ ಪ್ರಭು ಕೆಂಪೇಗೌಡರ ಜಯಂತಿ ಬಂತೆಂದರೆ ಇಡೀ ರಾಜ್ಯವೇ ಸಂಭ್ರಮ-ಸಡಗರದಲ್ಲಿ ಮುಳುಗಿ ಹೋಗುತ್ತದೆ… ಎಲ್ಲೆಲ್ಲೂ ನಾಡಪ್ರಭುವಿನ ಬಾವುಟಗಳು ರಾರಾಜಿಸುತ್ತವೆ…ಹಲವು ಕಾರ್ಯಕ್ರಮ, ವೇದಿಕೆಗಳಿಗೆ ನಾಡಪ್ರಭು ವಿನ ಹೆಸರನ್ನಿಡಲಾಗುತ್ತದೆ. ಕೆಂಪೇಗೌಡರ ಬಗ್ಗೆ ತತ್ವಾದರ್ಶ ಪಾಲಿಸಲು ಜನಪ್ರತಿನಿಧಿ ಗಳು ಉದ್ದುದ್ದ ಭಾಷಣವಂತೂ ಇದ್ದೇ ಇರುತ್ತದೆ… ಆದರೆ, ದುಸ್ಥಿತಿಯಲ್ಲಿರುವ ಕೆಂಪೇಗೌಡರ ಕೋಟೆ ಕಟ್ಟಲು ಇಂದಿಗೂ ಯಾರೂ ಮುಂದಾಗದೇ ಇರುವುದು ಬೇಸರದ ಸಂಗತಿ. ಸುಮಾರು 12 ವರ್ಷ ದಿಂದ ಕಾಮಗಾರಿ ಕುಂಟುತ್ತಾ ಸಾಗುತ್ತಿದ್ದು ಸ್ಥಳೀಯರೇ ಜನಪ್ರತಿನಿಧಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

Advertisement

ಕೋಟೆ ಹೆಬ್ಟಾಗಿಲಲ್ಲಿ ನಾಡಪ್ರಭುವನ್ನು ಪ್ರತಿಷ್ಠಾಪಿಸಿದರೆ ಮಾತ್ರ ಮಾಗಡಿ ಬೆಂಗಳೂರಿನಂತೆ ಅಭಿವೃದ್ಧಿ ಹೊಂದಲಿದೆ. ಶೀಘ ಇದಕ್ಕೊಂದು ಸುಂದರ ರೂಪ ಕೊಟ್ಟು ಪ್ರವಾಸಿ ತಾಣವನ್ನಾಗಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಕೋಟೆ ಗೋಡೆ ಮೇಲೆ ಕುರುಚಲು ಗಿಡ: ವಿಶ್ವ ವಿಖ್ಯಾತಿ ಮಾಗಡಿಯ ಕೆಂಪೇಗೌಡರಿಗೆ ಸಲ್ಲುತ್ತದೆ. ಆದರೆ,ಕೆಂಪೇಗೌಡರ ಕೋಟೆ ಜೀರ್ಣೋದ್ಧಾರದ ಕಾಮಗಾರಿ ಕಳೆದ 15 ವರ್ಷದಿಂದ ಕುಂಟುತ್ತಿದೆ. ಕೋಟೆ ಗೋಡೆ ಮೇಲೆ ಕುರುಚಲು ಗಿಡಗಂಟಿಗಳು ಬೆಳೆ ಯಲಾರಂಭಿಸಿದೆ. ಕೆಂಪೇಗೌಡರ ಕೋಟೆ ಜೀರ್ಣೋ ದ್ಧಾರಗೊಳಿಸುವ ಮೂಲಕ ಸಂರಕ್ಷಣೆ ಮಾಡುವುದಾಗಿ ಕೆಂಪೇಗೌಡರ ಹೆಸರಿನಲ್ಲಿ ಅಭಿವೃದ್ಧಿ ಪ್ರಾಧಿಕಾರ ರಚನೆ ಯಾಗಿ 3 ವರ್ಷ ಕಳೆದಿದ್ದು ಕೋಟ್ಯಂತರ ರೂ., ಅನುದಾನವೂ ಮಂಜೂರಾಗಿದೆ.

ವಿಪರ್ಯಾಸ: ಇತಿಹಾಸ ಸಾರುವ ಕೆಂಪೇ ಗೌಡರ ಕಾಲದ‌ ಕೋಟೆ, ಕೊತ್ತಲು, ಗುಡಿ, ಗೋಪುರ, ಕೆರೆ ಕಟ್ಟೆ,ಬಾವಿಗಳು, ಕಲ್ಯಾಣಿ, ಕೆಂಪಾಪುರದ ಹಿರಿಯ ಕೆಂಪೇಗೌಡರ ಸಮಾಧಿಯ ಜೀರ್ಣೋ ದ್ಧಾರಕ್ಕೆ ಬಿಡಿ ಗಾಸು ಬಳಸದೆ ಇರುವುದು ವಿಪರ್ಯಾಸ.

ಸ್ಥಳೀಯರ ಮನವಿ:ದೂರದೃಷ್ಟಿಯುಳ್ಳ ಕೆಂಪೇಗೌಡರು ಬೃಹತ್‌ ಬೆಂಗಳೂರು ನಗರ ಕಟ್ಟಿದ್ದಲ್ಲದೆ ಅನೇಕ ಜನೋಪಯೋಗಿ ಪೇಟೆಗಳನ್ನು ನಿರ್ಮಿಸಿ ಎಲ್ಲಾ ವರ್ಗಗಳಿಗೂ ಸಾಮಾಜಿಕ ನ್ಯಾಯ ಒದಗಿಸಿದ್ದ ಕೀರ್ತಿಗೆ ಭಾಜನರಾಗಿದ್ದಾರೆ. ಅದನ್ನು ಉಳಿಸಿ ಸಂಕ್ಷಿಸುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯವೂ ಆಗಿದೆ ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.

Advertisement

ನಾಡಪ್ರಭು ಕೆಂಪೇಗೌಡರ ಕೋಟೆ ಈಗ ಕುರಿ, ಮೇಕೆ ಸಂತೆ ಮೈದಾನ: ನಾಡಪ್ರಭು ಕೆಂಪೇಗೌಡರ ಅರಮನೆಯ ಈ ಕೋಟೆ ಮೈದಾನ ಈಗ ಕೇವಲ ಕುರಿ, ಮೇಕೆ ಸಂತೆಯ ಸ್ಥಳವಾಗಿದೆ. ಜೊತೆಗೆ ರಾಜಕೀಯ ಪಕ್ಷಗಳು ಸಮಾರಂಭ ನಡೆಸಲು ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ ಮೈದಾನ ವಾಗಿ ಬಳಸಿಕೊಳ್ಳಲಾಗುತ್ತಿದೆ. ಕೋಟೆ ಯೊಳಗೆ ವಿದ್ಯುತ್‌ ದೀಪದ ಬೆಳಕಿಲ್ಲದಿರು ವುದರಿಂದ ಸಂಜೆಯಾ ಗುತ್ತಿದ್ದಂತೆ ಅನೈತಿಕ ಚಟುವಟಿಕೆಗಳ ತಾಣವಾಗುತ್ತಿದೆ.

ದಾಖಲೆ ಬರೆಯಿರಿ: ಈ ಬೃಹತ್‌ ಕೋಟೆ ಪೂರ್ಣಗೊಳಿಸಿ ವಿನೂತನ ರೂಪ ನೀಡಿ ಪ್ರವಾಸಿ ತಾಣವನ್ನಾಗಿಸಿದರೆ ಪಟ್ಟಣದ ಹೃದಯಭಾಗದ ಮಾಗಡಿ ಪಟ್ಟಣದ ಸೌಂದರ್ಯವೂ ಹೆಚ್ಚುತ್ತದೆ. ಕೋಟೆ ಕಟ್ಟಿದ ಕೀರ್ತಿ ಎ‍ಚ್ಡಿಕೆಗೆ ಹಾಗೂ ಸ್ಥಳೀಯ ಶಾಸಕರಿಗೂ ಸಲ್ಲುತ್ತದೆ. ಇದೊಂದು ಇತಿಹಾಸದ ದಾಖಲೆಯಾಗುತ್ತದೆ ಎಂಬ ಆಶಯ ನಾಗರಿಕರದ್ದಾಗಿದೆ. ಇನ್ನಾದರೂ ಸರ್ಕಾರ ಎಚ್ಚೆತ್ತು ಇತಿಹಾಸ ಸಾರುವ ನಾಡಪ್ರಭು ಕೆಂಪೇಗೌಡರ ಗತಕಾಲದ ಕೋಟೆ ಜೀರ್ಣೋದ್ಧಾರಗೊಳಿಸಲು ಮುಂದಾಗುವುದೇ ಎಂಬುದನ್ನು ಕಾದು ನೋಡಬೇಕಾಗಿದೆ.

15 ವರ್ಷಗಳ ಹಿಂದೆಯೇ ಮಂಜೂರಾತಿ ಸಿಕ್ಕಿದೆ:

ಕಳೆದ 15 ವರ್ಷಗಳ ಹಿಂದೆ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ ಮಾಗಡಿ ಕೆಂಪೇಗೌಡ ಕೋಟೆ ಜೀರ್ಣೋದ್ಧಾರಕ್ಕೆ 18 ಕೋಟಿ ರೂ., ಮಂಜೂರಾತಿ ನೀಡಿದ್ದರು. ಅಂದಿನ ಶಾಸಕರಾಗಿದ್ದ ಎಚ್.ಸಿ.ಬಾಲಕೃಷ್ಣ ಕೋಟೆ ಜೀರ್ಣೋದ್ಧಾರಕ್ಕೆ ಎ‍ಚ್ಡಿಕೆಯಿಂದಲೇ ಶಂಕುಸ್ಥಾಪನೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದ್ದರು. ಆದರೆ, ಇಲ್ಲಿಯವರೆಗೂ ಕೆಂಪೇಗೌಡರ ಕೋಟೆ ಕಾಮಗಾರಿ ಪೂರ್ಣ ಗೊಳ್ಳಲಿಲ್ಲ. ಇದಕ್ಕೆಲ್ಲಾ ಅನುದಾನದ ಕೊರತೆಯೋ ಅಥವಾ ಇಚ್ಚಾಶಕ್ತಿ ಕೊರತೆಯೋ ಕಂಡು ಬರುತ್ತಿಲ್ಲ. ಆದರೆ, ಕಾಮಗಾರಿ ಕುಂಟುತ್ತಾ ಸಾಗಿರುವುದಂತೂ ಸತ್ಯ.
● ತಿರುಮಲೆ ಶ್ರೀನಿವಾಸ್‌
Advertisement

Udayavani is now on Telegram. Click here to join our channel and stay updated with the latest news.

Next