ಸಿದ್ದಾಪುರ: ಎರಡು ಗ್ರಾಮಗಳನ್ನು ಒಳಗೊಂಡ ಸಿದ್ದಾಪುರ ಸಹಕಾರಿ ಸಂಘವು, 2 ಕೋಟಿ ರೂ. ವೆಚ್ಚದಲ್ಲಿ 2 ಅಂತಸ್ತಿನ ನೂತನ ಕಟ್ಟಡ ನಿರ್ಮಿಸಿರುವುದು ದೊಡ್ಡ ಸಾಧನೆಯಾಗಿದೆ. ಈ ಬಾರಿಯ ಸಾಲ ಮನ್ನಾ ಯೋಜನೆಯ ವ್ಯವಸ್ಥೆ ಸರಿ ಇಲ್ಲ. ಸರಕಾರದ ಸಾಲ ಮನ್ನಾ ಯೋಜನೆ ಸಮಾನಾಂತರವಾಗಿ ಎಲ್ಲ ರೈತರಿಗೆ ಸಿಗುವಂತಾಗಬೇಕು ಎಂದು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ| ಎಂ. ಎನ್. ರಾಜೇಂದ್ರಕುಮಾರ್ ಅವರು ಹೇಳಿದರು.
ಶತಮಾನೋತ್ಸವ ಸಂಭ್ರಮಾಚರಣೆ ಸನಿಹದಲ್ಲಿರುವ ಸಿದ್ದಾಪುರ ವ್ಯವಸಾಯ ಸೇವಾ ಸಹಕಾರಿ ಸಂಘವು ನಿರ್ಮಿಸಿದ ಪ್ರಧಾನ ಕಚೇರಿಯ ನೂತನ ಕಟ್ಟಡ ಕದಿರು ಅನ್ನು ಬುಧವಾರ ಅವರು ಉದ್ಘಾಟಿಸಿದರು.
ಕಳೆದ 9 ದಶಕಗಳಿಂದ ಸಿದ್ದಾಪುರ ಸಹಕಾರಿ ಸಂಘವು ಗ್ರಾಮಾಂತರ ಜನರಿಗೆ ನಿರಂತರ ಕೃಷಿ ಹಾಗೂ ಇನ್ನಿತರ ಸಾಲ ಸೌಲಭ್ಯಗಳನ್ನು ನೀಡುತ್ತ ಗ್ರಾಹಕರ ವಿಶ್ವಾಸ ಗಳಿಸುವ ಮೂಲಕ ಸಂಘದ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದು ತಿಳಿಸಿದರು.
ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಬ್ಯಾಂಕಿಂಗ್ ವಿಭಾಗ ಮತ್ತು ಸಭಾ ಭವನ, ಸರಕಾರದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಭಾಸ್ಕರ ರಾವ್ ಐಪಿಎಸ್ ಅವರು ಭದ್ರತಾ ಕೊಠಡಿ ಹಾಗೂ ಭದ್ರತಾಕೋಶ ಹಾಗೂ ದ. ಕ. ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೊಡವೂರು ರವಿರಾಜ್ ಹೆಗ್ಡೆ ಗೋದಾಮು ಅನ್ನು ಉದ್ಘಾಟಿಸಿದರು.
ಸಂಘದ ಅಧ್ಯಕ್ಷ ಎ. ಜಯರಾಮ ಭಂಡಾರಿ ಅವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿ. ಪಂ. ಸದಸ್ಯ ರೋಹಿತ್ ಕುಮಾರ್ ಶೆಟ್ಟಿ, ತಾ. ಪಂ. ಸದಸ್ಯರಾದ ಎಸ್. ಕೆ. ವಾಸುದೇವ ಪೈ ಸಿದ್ದಾಪುರ, ಪೂರ್ಣಿಮಾ ನಾಯ್ಕ ಹಳ್ಳಿಹೊಳೆ, ಸಿದ್ದಾಪುರ ಗ್ರಾ. ಪಂ. ಅಧ್ಯಕ್ಷೆ ಸರೋಜಿನಿ ಶೆಟ್ಟಿ, ಹೊಸಂಗಡಿ ಗ್ರಾ. ಪಂ. ಅಧ್ಯಕ್ಷೆ ಯಶೋಧಾ ಶೆಟ್ಟಿ, ಕೇಂದ್ರ ಸಹಕಾರಿ ಬ್ಯಾಂಕಿನ ವಲಯ ಮೇಲ್ವಿಚಾರಕ ಅಶೋಕ್ ಕುಮಾರ್ ಶೆಟ್ಟಿ ಹಾಗೂ ಸಂಘದ ಉಪಾಧ್ಯಕ್ಷ ಜಯರಾಮ ಗಾಣಿಗ, ನಿರ್ದೇಶಕರಾದ ಚಂದ್ರಪ್ರಕಾಶ ಶೆಟ್ಟಿ, ಕೆ. ಸತೀಶ್ ಕುಮಾರ್ ಶೆಟ್ಟಿ ಕಡ್ರಿ, ಬಿ. ಆನಂದ ಶೆಟ್ಟಿ ಭಾಗೀಮನೆ, ಶಂಕರ ಶೆಟ್ಟಿ ನಳಾಲು, ರಾಘವ ನಾಯ್ಕ, ರೇವತಿ ಶೆಟ್ಟಿ, ರತ್ನ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
ಸಮ್ಮಾನ
ಈ ಸಂದರ್ಭ ಎಸ್‌ಸಿಡಿಸಿಸಿ ಅಧ್ಯಕ್ಷ ಡಾ| ಎಂ. ಎನ್. ರಾಜೇಂದ್ರಕುಮಾರ್ ಮತ್ತು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಭಾಸ್ಕರ ರಾವ್ ಅವರನ್ನು ಸಂಘದ ವತಿಯಿಂದ ಸಮ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಎ. ಜಯರಾಮ ಭಂಡಾರಿ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ್ ಗಾಣಿಗ ಅವರನ್ನು ಸಂಘದ ಸದಸ್ಯರು ಸಮ್ಮಾನಿಸಿದರು.
ನಿರ್ದೇಶಕ ಡಿ. ಗೋಪಾಲಕೃಷ್ಣ ಕಾಮತ್ ಸ್ವಾಗತಿಸಿದರು. ಸಿಇಒ ರಮೇಶ್ ಗಾಣಿಗ ಪ್ರಾಸ್ತವಿಕವಾಗಿ ಮಾತನಾಡಿದರು. ಪತ್ರಕರ್ತ ಸುಬ್ರಮಣ್ಯ ಪಡುಕೋಣೆ ಕಾರ್ಯಕ್ರಮ ನಿರೂಪಿಸಿದರು. ಸಂಘದ ಸಿಬಂದಿ ಸದಾನಂದ ಶೆಟ್ಟಿ ವಂದಿಸಿದರು.