Advertisement

ಅಡಿಕೆ ಬೆಳೆ ವಿಸ್ತರಣೆಗೆ ಸರಕಾರ ಸೂಕ್ತ ನೀತಿ ಜಾರಿಗೊಳಿಸಲಿ- ಡಾ| K.ಬಾಲಚಂದ್ರ ಹೆಬ್ಟಾರ್‌

11:46 PM Aug 09, 2023 | Team Udayavani |

ಮಂಗಳೂರು: ಅಡಿಕೆಯನ್ನು ಎಲ್ಲೆಂದರಲ್ಲಿ ಬೆಳೆಯುವುದು ಸೂಕ್ತವಲ್ಲ, ಕರಾವಳಿ, ಮಲೆನಾಡು ಮುಂತಾದ ಸಾಂಪ್ರದಾಯಿಕ ಅಡಿಕೆ ಬೆಳೆಯುವ ಭೂಪ್ರದೇಶಕ್ಕೆ ಅನ್ವಯವಾಗುವಂತೆ ಹಲವು ಅಡಿಕೆ ತಳಿಗಳನ್ನು ಅಧ್ಯಯನ ನಡೆಸಿ ಅಭಿವೃದ್ಧಿ ಪಡಿಸಲಾಗಿದೆ. ಇದನ್ನು ಚಿತ್ರದುರ್ಗ, ಬೆಳಗಾವಿಯಂತಹ ಪ್ರದೇಶದಲ್ಲೂ ಬೆಳೆಸಲು ಮುಂದಾದರೆ ಅಲ್ಲಿನ ಭೂಪ್ರದೇಶಕ್ಕೆ ಅದು ಹೊಂದಾಣಿಕೆಯಾಗುತ್ತದೆಯೇ ಎನ್ನುವುದು ಹೇಳಲಾಗದು.

Advertisement

ಇದು ಸಿಪಿಸಿಆರ್‌ಐ (ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋ ಧನ ಕೇಂದ್ರ) ಕಾಸರಗೋಡು ಇದರ ನಿರ್ದೇಶಕ ಡಾ| ಕೆ.ಬಾಲಚಂದ್ರ ಹೆಬ್ಟಾರ್‌ ಅವರ ಅಭಿಮತ. ಅವರು ಬುಧವಾರ ಅವರು “ಉದಯವಾಣಿ”ಯ ಮಂಗಳೂರು ಕಚೇರಿಯಲ್ಲಿ ಆಯೋಜಿಸಲಾದ ಫೋನ್‌ಇನ್‌ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಡಿಕೆ ಮತ್ತು ತೆಂಗು ಬೆಳೆಗಳು ಕಾಡುವ ರೋಗಗಳ ನಿವಾರಣ ಕ್ರಮಗಳ ಬಗೆಗೆ ಮಾಹಿತಿ ನೀಡಿದರು.

ಈಗಾಗಲೇ ಹಲವಾರು ಜಿಲ್ಲೆಗಳಲ್ಲಿ ಕೃಷಿಕರು ಅಡಿಕೆಯನ್ನು ಬೆಳೆಯಲು ಮುಂದಾಗಿದ್ದಾರೆ. ಯಾವ ಪ್ರದೇಶಕ್ಕೆ ಅದು ಸೂಕ್ತ ಎಂಬ ನಿಟ್ಟಿನಲ್ಲಿ ಅಧ್ಯಯನ ನಡೆಸಿ, ಸರಕಾರ ಈ ಕುರಿತ ಸ್ಪಷ್ಟ ನೀತಿ ಜಾರಿಗೆ ತರುವುದು ಶ್ರೇಯಸ್ಕರ ಎಂದು ತಿಳಿಸಿದರು.

ಹವಾಮಾನ ವೈಪರೀತ್ಯ ರೋಗಕ್ಕೆ ಮೂಲ
ಕಳೆದ 10 ವರ್ಷಗಳಲ್ಲಿ ನೋಡಿದರೆ ಹವಾಮಾನದಲ್ಲಿ ಸಾಕಷ್ಟು ವೈಪರೀತ್ಯ ಕಾಣುತ್ತಿದೆ. ಮಣ್ಣು, ಗಿಡ, ಹವಾಮಾನ ಈ ಮೂರು ತೋಟದ ನಿರ್ವಹಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. 25ರಿಂದ 30 ಡಿಗ್ರಿ ಸೆಲ್ಸಿಯಸ್‌ ಒಳಗಿನ ತಾಪಮಾನ ಹಾಗೂ ಶೇ.70ಕ್ಕಿಂತ ಹೆಚ್ಚಿನ ತೇವಾಂಶ ವಾತಾವರಣದಲ್ಲಿ ಇದ್ದಾಗ ಎಲೆ ಚುಕ್ಕಿ ರೋಗ ಸಾಕಷ್ಟು ಕ್ಷಿಪ್ರವಾಗಿ ಹರಡುತ್ತಿರುವುದು ನಮ್ಮ ಲ್ಯಾಬ್‌ ಟೆಸ್ಟಲ್ಲಿ ಕಂಡುಕೊಂಡಿದ್ದೇವೆ. 35 ಡಿಗ್ರಿ ಸೆಲ್ಸಿಯಸ್‌ ದಾಟಿ, ತೇವಾಂಶ ಇಳಿಕೆಯಾದಾಗ ರೋಗ ಹರಡುವಿಕೆ ಕಡಿಮೆಯಾಗುತ್ತಿದೆ.

ಡ್ರೋನ್‌ ಬಳಸಿ ಔಷಧ ಸಿಂಪಡಣೆ ಸೂಕ್ತ
ಎಲೆಚುಕ್ಕಿ ರೋಗ ಇದ್ದಾಗ ಎಲೆಗೆ ನೇರವಾಗಿ ಸಿಂಪಡಣೆ ಬೇಕಾಗುತ್ತದೆ, ಇದಕ್ಕೆ ಡ್ರೋನ್‌ ಮೂಲಕ ಹತ್ತಿರದಿಂದ ಔಷಧ ಸಿಂಪಡಣೆ ಸೂಕ್ತ. ಇದಕ್ಕೆ ಬೇಕಾದ ನಿಯಮಾವಳಿ ಈಗಾಗಲೇ ಸಿದ್ಧವಿದೆ. ಸದ್ಯಕ್ಕೆ ಪ್ರೊಪಿಕಾನ್‌ಜೋಲ್‌ ಔಷಧ ಬಳಕೆ ಮಾಡಲಾಗುತ್ತಿದೆ. ಇದು ತತ್‌ಕ್ಷಣದ ರೋಗ ತಡೆ ಕ್ರಮ. ದೂರಗಾಮಿ ರೋಗ ತಡೆ ಯೋಜನೆಗೆ ಅಧ್ಯಯನ ನಡೆಸುತ್ತಿದ್ದೇವೆ.

Advertisement

ತೆಂಗಿನ ಉತ್ಪಾದನ ವೆಚ್ಚ ತಗ್ಗಿಸುವ ಯೋಜನೆ
ತೆಂಗಿನ ಬೆಳೆಗಾರರಲ್ಲಿ ಬೆಲೆ ಕುಸಿತದಿಂದ ತೊಂದರೆ ಆಗಿದೆ. ತೆಂಗಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸುವ ಬದಲು ಉತ್ಪಾದನ ವೆಚ್ಚ ಕುಗ್ಗಿಸುವ ಬಗ್ಗೆ ಸರಕಾರವೂ ಸೂಚಿಸಿದೆ. ಅದರಂತೆ ತೆಂಗಿಗೆ ಹಾಕುವ ದುಬಾರಿ ಗೊಬ್ಬರ ಗಳನ್ನು ಕ್ಯಾಪ್ಸೂಲ್‌ ರೂಪದಲ್ಲಿ ನೀಡುವುದು, ತೆಂಗಿನ ತ್ಯಾಜ್ಯ ಪುನರ್‌ಬಳಕೆ, ಮಣ್ಣಿನಲ್ಲಿರುವ ಗೊಬ್ಬರವನ್ನು ಮರ ಸರಿಯಾಗಿ ಹೀರಿಕೊಳ್ಳುವಂತಹ ಮೈಕ್ರೋಬ್‌ಗಳ ಪೂರೈಕೆ ಇತ್ಯಾದಿ ಕುರಿತು ಸಂಶೋಧನೆ ನಡೆಸುತ್ತಿದ್ದೇವೆ.

ಜತೆಗೆ ತೆಂಗಿನ ಮೌಲ್ಯವರ್ಧನೆ ಆಗಬೇಕಿದೆ, ತೆಂಗಿನಕಾಯಿ ತಿರುಳಿನ ಚಿಪ್ಸ್‌, ತೆಂಗಿನ ಟ್ಯಾಪಿಂಗ್‌ ನಡೆಸಿ ಕಲ್ಪರಸ ಉತ್ತಮ ಉದ್ಯಮ ಆಗಬ ಲ್ಲದು. ಈ ಕಲ್ಪರಸದಿಂದ ಸಿಗುವ ಸಕ್ಕರೆ ರಕ್ತದಲ್ಲಿ ಗುಕೋಸ್‌ ಮಟ್ಟ ಹೆಚ್ಚಿಸ ದಿರುವುದರಿಂದ ಇದರ ಸೇವನೆ ನಮ್ಮ ಆರೋಗ್ಯಕ್ಕೆ ಸೂಕ್ತವಾದುದಾಗಿದೆ.
ಸಿಪಿಸಿಆರ್‌ಐ ವಿಜ್ಞಾನಿಗಳಾದ ಡಾ| ವಿನಾಯಕ ಹೆಗ್ಡೆ, ಡಾ| ರವಿ ಭಟ್‌ ಪೂರಕ ಮಾಹಿತಿ ಹಂಚಿಕೊಂಡರು.

ಅಂಬುಜಾಲಕ್ಷ್ಮೀ, ಪುಣಚ
ಮಂಗಳಾ ಅಡಿಕೆ ಗಿಡವನ್ನು ಗುಡ್ಡ ಪ್ರದೇಶದಲ್ಲಿ ನೆಟ್ಟಿದ್ದೇವೆ. ಆದರೆ ತುಂಬಾ ಗಿಡಗಳು ಮುರುಟು ಕಟ್ಟಿಕೊಂಡು ಬಿದ್ದಿವೆ.
ಗುಡ್ಡದ ಜಾಗದಲ್ಲಿ ಮಣ್ಣು ಸ್ವಲ್ಪ ಗಟ್ಟಿಯಾಗಿರುವುದರಿಂದ ಅಡಿಕೆ ಗಿಡ ನೆಟ್ಟಾಗ ಪೋಷಕಾಂಶ ಸಿಗದೆ ಎಲೆ ಬೆಳವಣಿಗೆ ಆಗುವುದಿಲ್ಲ. ಎಲ್ಲದಕ್ಕಿಂತ ಮೊದಲು ಅಲ್ಲಿನ ಮಣ್ಣು ಪರೀಕ್ಷೆ ಮಾಡಿ ಆ ಬಳಿಕ ಪರಿಹಾರ ಕಂಡು ಕೊಳ್ಳಬಹುದು.

ಹಮೀದ್‌ ವಿಟ್ಲ
ಅಡಿಕೆ, ತೆಂಗುವಿಗೆ ಬಂದ ರೋಗ ಒಂದರಿಂದ ಇನ್ನೊಂದಕ್ಕೆ ಹರಡುತ್ತದೆ. ಇದನ್ನು ತಡೆಯುವುದು ಹೇಗೆ?
ಕೆಲವು ಶಿಲೀಂಧ್ರದಿಂದ ರೋಗ ಬರುವುದರಿಂದ ಅವು ಗಾಳಿಯಲ್ಲಿ ಒಂದು ಮರದಿಂದ ಇನ್ನೊಂದು ಮರಕ್ಕೆ ಹರಡುತ್ತದೆ. ಯಾವ ಗಿಡಕ್ಕೆ ಯಾವ ಕೀಟ ಬಂದಿದೆ ಎಂಬುದನ್ನು ಮೊದಲು ಪತ್ತೆ ಹಚ್ಚಿ ಆ ಬಳಿಕ ಔಷಧ ಸಿಂಪಡಣೆ ಮಾಡ ಬೇಕಾಗುತ್ತದೆ.

ಪ್ರಕಾಶ್‌ ಹೆಬ್ರಿ ಮುದ್ರಾಡಿ
ಬೋರ್ಡೋ ದ್ರಾವಣ ಮಿಶ್ರಣ ಪ್ರಮಾಣ ಹೇಗಿರಬೇಕು?
ಸುಣ್ಣ ಜಾಸ್ತಿಯಾದರೆ ಪ್ರಯೋಜನ ಸಿಗದು. 2 ರೀತಿಯ ಸುಣ್ಣ ಬರುತ್ತದೆ. ಹಿಂದೆ ಸಿಗುತ್ತಿದ್ದ ಸುಣ್ಣದ ಪ್ರಕಾರ ಸುಮಾರು 100 ಲೀ.ನೀರಿಗೆ 1 ಕೆ.ಜಿ. ಸುಣ್ಣ ಹಾಗೂ 1 ಕೆ.ಜಿ. ಕೋ ಕೊ ಸಲ್ಫೆಡ್‌ ಹಾಕಿ ಸಿಂಪಡಣೆ ಮಾಡಲಾಗುತ್ತಿತ್ತು. ಆದರೆ ಈಗ ಹೈಡ್ರೆಟ್‌ಲೆಮ್‌ ಸಂಬಂಧಿತ ಪೌಡರ್‌ ಸುಣ್ಣವನ್ನು 500 ಗ್ರಾಂ. ಹಾಕಿದರೆ “ಪಿಎಚ್‌ ಪೇಪರ್‌” ಮೂಲಕ ಪರಿಶೀಲಿಸಬಹುದು.

ಕೃಷ್ಣಾನಂದ ಶೆಟ್ಟಿ ಐಕಳ
ತೆಂಗಿನ ಗರಿಗಳು ಕಪ್ಪಾಗುತ್ತಿದೆ. ಇದಕ್ಕೆ ಏನು ಪರಿಹಾರ?
ಕಳೆದ 6-7 ವರ್ಷದಿಂದ ಬಿಳಿ ನೊಣದ ಕಾಟ ಎದುರಾಗಿದೆ. ನೊಣ ಕೆಳಭಾಗದಿಂದ ರಸವನ್ನು ಹೀರಿ, ಮೇಲ್ಭಾಗದಲ್ಲಿ ಫಂಗಸ್‌ ಉಂಟಾಗುತ್ತದೆ. ಹೀಗಾಗಿ ಎಲೆ ಕಪ್ಪಾಗಿ ಕಾಣುತ್ತದೆ. ಇದಕ್ಕಾಗಿ 1 ಲೀ. ನೀರಿಗೆ 5 ಎಂ.ಎಲ್‌ ಬೇ ವಿನ ಎಣ್ಣೆ ಹಾಕಿ ಸಿಂಪಡಣೆ ಮಾಡಬಹುದು. ಬೇಸಗೆಯಲ್ಲಿ 2-3 ಸಲ ಹೀಗೆ ಮಾಡಬೇಕು. ಗಂಜಿ ನೀರನ್ನು ಕೂಡ ಸಿಂಪಡಣೆ ಮಾಡಬಹುದು. ಮರಕ್ಕೆ ಪೊಟಾಶ್‌ ಹಾಕುವುದನ್ನು ಮರೆಯಬಾರದು.

ಜಗದೀಶ್‌ ಬಂಟ್ವಾಳ
ಅಡಿಕೆ ತೋಟಕ್ಕೆ ಎಲೆಚುಕ್ಕಿ ರೋಗ ಬಂದಿದೆ. ಏನು ಮಾಡಬೇಕು?
ಶಿಲೀಂಧ್ರದಿಂದ ಗಾಳಿಯ ಮೂಲಕ ಇದು ಹರಡುವ ರೋಗ. ರೋಗಬಾಧಿತ ಗರಿಗಳನ್ನು ದೋಟಿಯ ಸಹಾಯದಿಂದ ಕತ್ತರಿಸಿ ಸುಟ್ಟು ಬಿಡಬೇಕು. ಮಳೆ ಮುಗಿದ ಅನಂತರ ಕ್ರೊಪಿಕಲೊಜೊಲ ಸಿಂಪಡಣೆ ಮಾಡಬೇಕು. 25 ದಿನ ಬಿಟ್ಟ ಬಳಿಕ ಪ್ರೊಬಿನಬ್‌ ಎಂಬ ಔಷಧವನ್ನು ಸಿಂಪಡಣೆ ಮಾಡಬೇಕಿದೆ. ಸಮರ್ಪಕ ನೀರಿನ ನಿರ್ವಹಣೆ ಹಾಗೂ ಪೋಷಕಾಂಶ ಅಗತ್ಯ ಪ್ರಮಾಣದಲ್ಲಿ ಗಿಡಕ್ಕೆ ಸಿಕ್ಕರೆ ಉತ್ತಮ.

ರಾಮಕೃಷ್ಣ ಭಟ್‌ ಕೆಂಜೂರು, ಉಡುಪಿ
ತೆಂಗಿನ ಕಾಯಿ ಕಡಿಮೆ ಆಗುತ್ತಿದೆ. ಇದಕ್ಕೆ ಪರಿಹಾರ ಏನು?
ತೋಟದಲ್ಲಿ ಪೋಷಕಾಂಶ ಕೊರತೆ ಆಗದಂತೆ ನೋಡಬೇಕು ಹಾಗೂ ಅಲ್ಲಿನ ಮಣ್ಣು ಪರೀಕ್ಷೆ ಮಾಡಬೇಕು. ಈ ಮೂಲಕ ತೆಂಗಿನ ಬೆಳೆಗೆ ಹೆಚ್ಚು ಅನುಕೂಲ ಒದಗಿಸಲು ಸಾಧ್ಯ.

ರೊನಾಲ್ಡ್‌ ವಾಮದಪದವು
ಅಡಿಕೆ ದೊಡ್ಡದಾಗಿ ಎರಡು ಭಾಗವಾಗಿ ಉದುರುತ್ತಿದೆ. ಇದು ಯಾವ ಸಮಸ್ಯೆ?
ಮಣ್ಣಿನಲ್ಲಿ ಪೊಟಾಶಿಯಂ ಕೊರತೆ ಆದರೆ ಕಾಯಿ ಬೀಳುವ ಪ್ರಮೇಯ ಇರುತ್ತದೆ. ಇದಕ್ಕಾಗಿ ಅಲ್ಲಿನ ಮಣ್ಣು ಪರೀಕ್ಷೆ ಮಾಡಬೇಕು. ಕೃಷಿ/ತೋಟಗಾರಿಕಾ ಇಲಾಖೆಯಲ್ಲಿ ಇದರ ಬಗ್ಗೆ ಪರೀಕ್ಷೆ ನಡೆಸಲಾಗುತ್ತದೆ.

ಶಾಲಿನಿ, ಸಾಸ್ತಾನ
ತೆಂಗಿನ ಮರದಲ್ಲಿ ಸಣ್ಣ ಸಣ್ಣ ಬೊಂಡ ಉದುರುತ್ತಿದೆ. ಅದಕ್ಕೆ ಪರಿಹಾರ?
ಪೋಷಕಾಂಶ ಕೊರತೆಯಿಂದಲೇ ಇಂತಹ ಸಮಸ್ಯೆ ಎದುರಾಗುತ್ತದೆ. ಬೋರಾಕ್ಸಿನ್‌ ರಾಸಾಯನಿಕ ಗೊಬ್ಬರ ಸಿಗುತ್ತದೆ. ಅದನ್ನು 1 ಮರಕ್ಕೆ 50 ಗ್ರಾಂ ಕೊಡಬೇಕು. ಜತೆಗೆ ಬಹುವಾರ್ಷಿಕ ಬೆಳೆ ಇದಾಗಿರುವುದರಿಂದ ಪ್ರತೀ ಬಾರಿ ಗೊಬ್ಬರ ನೀಡುತ್ತಲೇ ಇರಬೇಕು.

ಶರತ್‌, ಬ್ರಹ್ಮಾವರ
ತೆಂಗಿನ ಸಸಿಗೆ ಕೆಂಪು ಕುರುವಾಯಿಯ ಸಮಸ್ಯೆ ಎದುರಾಗಿದೆ. ನಿಯಂತ್ರಣ ಹೇಗೆ?
ತೆಂಗಿಗೆ ಕಪ್ಪು ದುಂಬಿ ಹಾಗೂ ಕೆಂಪು ದುಂಬಿ ಎಂಬ ಕೀಟಗಳ ಸಮಸ್ಯೆ ಇದೆ. ಕಪ್ಪು ದುಂಬಿಯು ಎಲೆಯನ್ನು ಕತ್ತರಿಸುತ್ತದೆ. ಕೆಂಪು ದುಂಬಿ ಗಿಡದ ಒಳಗೆ ಹೋಗಿ ರಸ ಹೀರುತ್ತದೆ. ಗಿಡದಲ್ಲಿ ಯಾವುದೇ ಗಾಯ ಆದ ಜಾಗವಿದ್ದರೆ ಅಲ್ಲಿ ಅದು ಮೊಟ್ಟೆ ಇಡುತ್ತದೆ. ಹೀಗಾಗಿ ಗಿಡಕ್ಕೆ ಗಾಯ ಆಗದಂತೆ ನೋಡಿಕೊಳ್ಳಬೇಕು. ಜತೆಗೆ ಗಿಡದ ಸುಳಿಯ ಬುಡಕ್ಕೆ 250 ಗ್ರಾಂ ಮರಳಿಗೆ 250 ಗ್ರಾಂ ಬೇವಿನ ಹುಂಡಿ ಮಿಶ್ರಣ ಮಾಡಿ ಹಾಕಬೇಕು. ಇದರ ವಾಸನೆಗೆ ದುಂಬಿ ಬರುವುದಿಲ್ಲ.

ಶಿವರಾಮ್‌ ಭಟ್‌ ಕುಂಬಳೆ
ಕೊಳೆ ರೋಗಕ್ಕೆ ಅಡಿಕೆ ಮರದ ಬುಡಕ್ಕೆ ಹಾಕಲು ಯಾವುದಾದರೂ ಮದ್ದು ಬಂದಿದಾ? ಇಲ್ಲಿಯವರೆಗೆ ವೈಜ್ಞಾನಿಕವಾಗಿ ಬಂದಿಲ್ಲ. ಬೋರ್ಡೋ ಮಿಶ್ರಣವೇ ಈಗ ಇರುವ ಪರಿಹಾರ.

ಜಯರಾಮ್‌ ಶೆಟ್ಟಿ ಸಾಲೆತ್ತೂರು
ನುಸಿರೋಗಕ್ಕೆ ಪರಿಹಾರವೇನು?
ಯಾವ ಮರಕ್ಕೆ ನುಸಿರೋಗ ಇದೆಯೋ ಆ ಮರಕ್ಕೆ 1 ಲೀ. ನೀರಿಗೆ 5 ಎಂ.ಎಲ್‌ ನಿಂಬಿಸೀಡಿಂಗ್‌ ಸಿಂಪಡಣೆ ಮಾಡಬಹುದು. ನುಸಿರೋಗ ಗಾಳಿಯಲ್ಲಿ ಹರಡುವುದರಿಂದ ಪೂರ್ಣ ಪ್ರಮಾಣದಲ್ಲಿ ಪರಿಹಾರ ಕಷ್ಟ.

ನಾರಾಯಣ ವಗ್ಗ
ಹಸಿ ಅಡಿಕೆ ಬೀಳುತ್ತಿದೆ. ಇದನ್ನು ತಪ್ಪಿಸಲು ಏನು ಮಾಡಬೇಕು?
ಅಡಿಕೆಯ ತೊಟ್ಟಿನ ಭಾಗದಲ್ಲಿ ತಿಗಣೆ ಸ್ವರೂಪದ ಕೀಟ ರಸ ಹೀರುತ್ತದೆ. ಹೀಗಾಗಿ ತೊಟ್ಟು ಸಡಿಲವಾಗಿ ಅಡಿಕೆ ಬೀಳುತ್ತದೆ. ಅದನ್ನು ಒಡೆದು ನೋಡಿದರೆ ಒಳಗಡೆ ಕಪ್ಪು ಕಲೆ ಇರುತ್ತದೆ. ಇದಕ್ಕಾಗಿ 1 ಲೀ. ನೀರಿಗೆ ಅರ್ಧ ಎಂಎಲ್‌ ತಯೋಮಿಥೋಕ್ಸೇಮ್‌ ಮಿಶ್ರಣ ಮಾಡಿ ಸಿಂಪಡಣೆ ಮಾಡಬೇಕು.

Advertisement

Udayavani is now on Telegram. Click here to join our channel and stay updated with the latest news.

Next