Advertisement

ನೇಕಾರರಿಗೆ ಸರ್ಕಾರ ನೆರವು ನೀಡಲಿ

05:34 PM Jan 13, 2021 | Team Udayavani |

ಚಳ್ಳಕೆರೆ: ಜಿಲ್ಲೆಯಲ್ಲಿ ಸುಮಾರು 6 ಸಾವಿರಕ್ಕೂ ಹೆಚ್ಚು ಕೈಮಗ್ಗ ನೇಕಾರರು ಉಣ್ಣೆ ಕೈಮಗ್ಗ ನೇಕಾರಿಯಿಂದಲೇ ತಮ್ಮ ಬದುಕನ್ನು ಕಂಡುಕೊಂಡಿದ್ದಾರೆ. ಕೋವಿಡ್‌ -19 ಹಿನ್ನೆಲೆಯಲ್ಲಿ ಹೆಚ್ಚಿನ ವಹಿವಾಟು ಇಲ್ಲದೆ ಎಲ್ಲಾ ಕುಟುಂಬಗಳು ಬಡತನದಿಂದ ನರಳುತ್ತಿದ್ದು, ನೇಕಾರ ಕುಟುಂಬಗಳಿಗೆ ಇನ್ನೂ ಹೆಚ್ಚಿನ ಅನುದಾನ ನೀಡುವಂತೆ ರಾಜ್ಯದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರಿಗೆ ಜಿಲ್ಲೆಯ ಸಮಸ್ತ ನೇಕಾರರ  ಪರವಾಗಿ ಪತ್ರಬರೆಯುವುದಾಗಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಸುರೇಶ್‌ಬಾಬು ಹೇಳಿದರು.

Advertisement

ಮಂಗಳವಾರ ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಬಳಿ ಇರುವ ರಾಜ್ಯ ಉಣ್ಣೆ ಕೈಮಗ್ಗ ನೇಕಾರರ ಸಹಕಾರಿ ಸಂಘದ ಕಾರ್ಯಾಲಯದ ಕಂಬಳಿ ಮಾರುಕಟ್ಟೆ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಉಣ್ಣೆ ಕೈಮಗ್ಗ ನೇಕಾರರ ಅಹವಾಲು, ಪರಿಹಾರ ಮತ್ತು ಪ್ರಗತಿ ಪರಿಶೀಲನಾ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯೂ ಸೇರಿದಂತೆ ರಾಜ್ಯದ ಉಣ್ಣೆ ಕೈಮಗ್ಗ ನಿಗಮ ಸೂಕ್ತ ಸೌಲಭ್ಯಗಳಿಲ್ಲದೆ ಸೊರಗುತ್ತಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಣ್ಣೆ ಕೈಮಗ್ಗ ನೇಕಾರಿಕೆಗೆ ಹೆಚ್ಚು ಉತ್ತೇಜನ ನೀಡುವ ಭರವಸೆ ನೀಡಿ ಕಾರ್ಯೋನ್ಮುಖರಾಗಿದ್ದರು. ಅಷ್ಟರಲ್ಲಿ ಸರ್ಕಾರ ಇಲ್ಲದ ಪ್ರಯುಕ್ತ ಹೆಚ್ಚು ಸೌಲಭ್ಯ ಪಡೆಯಲು ಸಾಧ್ಯವಾಗಲಿಲ್ಲ. ರಾಜ್ಯದಲ್ಲಿ ಮೊಳಕಾಲ್ಮೂರು ರೇಷ್ಮೆ ಸೀರೆ ವಿಶ್ವದ ಗಮನ ಸೆಳೆದಿದೆ. ಅದನ್ನು ಸಹ ಮಗ್ಗದಲ್ಲೇ ಹೆಣೆಯಲಾಗುತ್ತದೆ. ಅದೇ ರೀತಿ ಉಣ್ಣೆ ಕಂಬಳಿಯನ್ನು ಸಹ ಇಲ್ಲಿನ ಸಾವಿರಾರು ನೇಕಾರರು ಹೆಣೆದು ಮಾರುಕಟ್ಟೆಗೆ ತರುತ್ತಾರೆ. ಆದರೆ ಮಾರುಕಟ್ಟೆಯಲ್ಲಿ ಅದನ್ನು ಖರೀದಿಸುವವರ ಸಂಖ್ಯೆ ಅತ್ಯಂತ ಕಡಿಮೆ. ಹಾಗಾಗಿ ಕೈಮಗ್ಗ ನೇಕಾರರ ಬದುಕು ಕಷ್ಟದ ಸ್ಥಿತಿಯಲ್ಲಿದ್ದು, ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿಗಳು ಹೆಚ್ಚಿನ ಆರ್ಥಿಕ ನೆರವು ನೀಡುವ ಮೂಲಕ ಲಕ್ಷಾಂತರ ಕೈಮಗ್ಗ ನೇಕಾರರಿಗೆ ಸಹಾಯಕ್ಕೆ ಬರಬೇಕು ಎಂದರು.

ಇದನ್ನೂ ಓದಿ:ಮಂಡಲ ಪಂಚಾಯತ್‌ ವ್ಯವಸ್ಥೆ ಸಂಪೂರ್ಣ ಹಾಳು ಮಾಡಿದ್ದೇ ಕಾಂಗ್ರೆಸ್‌; ಕಾರಜೋಳ

ಪ್ರಾಸ್ತಾವಿಕವಾಗಿ ಮಾತನಾಡಿದ ಕೈಮಗ್ಗ ಮತ್ತು ಜವಳಿ ಇಲಾಖೆ ಜಿಲ್ಲಾ ಉಪನಿರ್ದೇಶಕ ನೆಗಳೂರ್‌ ಮಾತನಾಡಿ, ರಾಜ್ಯ ಸರ್ಕಾರ ನೇಕಾರ ಕುಟುಂಬಗಳಿಗೆ ಅನೇಕ ಸೌಲಭ್ಯಗಳನ್ನು ನೀಡುತ್ತಾ ಬಂದಿದೆ. ಕಳೆದ ವರ್ಷ ಉಣ್ಣೆ ಕೈಮಗ್ಗ ನೇಕಾರರ ಸಾಲವನ್ನು ಸರ್ಕಾರ ಮನ್ನಾ ಮಾಡಿತ್ತು. ನೇಕಾರಿಕೆಯಲ್ಲೂ ಸಹ ನೂತನ ತಾಂತ್ರಿಕತೆಯನ್ನು ಅಳವಡಿಸಿಕೊಳ್ಳುವ ಹಿನ್ನೆಲೆಯಲ್ಲಿ ತರಬೇತಿ ಕೇಂದ್ರಗಳನ್ನು ನಡೆಸಲಾಗುತ್ತಿದೆ. ಕೈಮಗ್ಗ ಮತ್ತು ಜವಳಿ ನಿಗಮದ ವತಿಯಿಂದ ನೇಕಾರರಿಗೆ ಇನ್ನೂ ಹಲವಾರು ಸವಲತ್ತು ಕಲ್ಪಿಸಲು ಯೋಜನೆಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ತಿಳಿಸಿದರು. ಹಿರಿಯ ಸಹಕಾರಿ ಧುರೀಣ ಆರ್‌. ಮಲ್ಲೇಶಪ್ಪ ಮಾತನಾಡಿ, ಕೈಮಗ್ಗ ನೇಕಾರರ ಹಲವಾರು ಸಮಸ್ಯೆಗಳಿಗೆ ಸರ್ಕಾರ ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಉಣ್ಣೆ ಖರೀದಿಸಿ ಕಂಬಳಿ ತಯಾರಿಸಿ ಮಾರುಕಟ್ಟೆಗೆ ತಂದರೆ ಅದನ್ನು ಕೊಳ್ಳುವ ಸ್ಥಿತಿಯಲ್ಲಿ ಯಾರೂ ಇಲ್ಲ.

Advertisement

ನೇಕಾರರ ಸ್ಥಿತಿ ಅತ್ಯಂತ ಹೀನಾಯವಾಗಿದೆ. ರಾಜ್ಯ ಸರ್ಕಾರ ಕೈಮಗ್ಗ ನೇಕಾರಿಕೆ ಬಗ್ಗೆ ನಿರ್ಲಕ್ಷé ವಹಿಸಿದರೆ ಲಕ್ಷಾಂತರ ನೇಕಾರರ ಬಡಕುಟುಂಬಗಳು ಬೀದಿಪಾಲಾಗಲಿವೆ ಎಂದು ಆತಂಕ ವ್ಯಕ್ತಪಡಿಸಿದರು. ಮೊಳಕಾಲ್ಮೂರು ತಾಲ್ಲೂಕು ಅಧ್ಯಕ್ಷ ರವೀಂದ್ರ, ಕೈಮಗ್ಗ ಮತ್ತು ಜವಳಿ ಇಲಾಖೆ ತಿಪ್ಪೇಸ್ವಾಮಿ, ಉಣ್ಣೆ ಕೈಮಗ್ಗ ನಿಗಮದ ಮಾಜಿ ಅಧ್ಯಕ್ಷ ಟಿ. ಮಲ್ಲಿಕಾರ್ಜುನ್‌, ಸಹಕಾರ್ಯದರ್ಶಿ ಗಂಗಾಧರ, ಕಂದಿಕೆರೆ ಸುರೇಶ್‌ಬಾಬು ಮುಂತಾದವರು ಉಪಸ್ಥಿತರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next