ಸಿಂಧನೂರು: ಅಕಾಲಿಕ ಮಳೆಯಿಂದಾಗಿ ಭತ್ತ ಹಾಳಾಗಿರುವ ಪರಿಣಾಮ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯ ಸರಕಾರ ಕೂಡಲೇ ತನ್ನ ಬೊಕ್ಕಸದಿಂದಲೇ ರೈತರಿಗೆ ಪರಿಹಾರ ನೀಡಲು ಮುಂದಾಗಬೇಕು ಎಂದು ಮಸ್ಕಿ ಶಾಸಕ ಆರ್.ಬಸನಗೌಡ ತುರುವಿಹಾಳ ಒತ್ತಾಯಿಸಿದರು.
ಅವರು ತಾಲೂಕಿನ ಅರಳಹಳ್ಳಿ, ಮಲದಗುಡ್ಡ, ಕುರುಕುಂದಾ ಸೇರಿದಂತೆ ಇತರ ಗ್ರಾಮದಲ್ಲಿ ಬೆಳೆಹಾನಿ ಪ್ರದೇಶ ವೀಕ್ಷಿಸಿದ ಬಳಿಕ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದರು.
ಎಡಬಿಡದೇ ಸುರಿದ ಮಳೆಯಿಂದ ಕೊಯ್ಲಿಗೆ ಬಂದ ಭತ್ತ ಹಾಳಾಗಿದ್ದು, ರೈತರು ಮಾಡಿದ ಖರ್ಚು ಹೊರೆಯಾಗಿದೆ. ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಸರಕಾರ ಇದ್ದಾಗ ರಾಜ್ಯ ಸರಕಾರದ ಬೊಕ್ಕಸದಿಂದ 341 ಕೋಟಿ ರೂ. ಬೆಳೆ ಪರಿಹಾರ ನೀಡಲಾಗಿತ್ತು. ಅದೇ ಮಾದರಿಯಲ್ಲಿ ಈಗಲೂ ರಾಜ್ಯ ಸರಕಾರ ಬೆಳೆ ಪರಿಹಾರ ಘೋಷಿಸಬೇಕು. ವಿಪತ್ತು ನಿಧಿಯ ಮಾರ್ಗಸೂಚಿ ಪ್ರಕಾರ ನೀಡಿದರೆ, ಕಡಿಮೆ ಪರಿಹಾರ ಸಿಗುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ರೈತರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ರಾಜ್ಯ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಂಕಷ್ಟ ಹೇಳಿದ ರೈತರು
ಈ ನಡುವೆ ಬೆಳೆ ವೀಕ್ಷಣೆಗೆ ತೆರಳಿದ ಶಾಸಕರ ಎದುರು ಭತ್ತದ ಗದ್ದೆಯನ್ನು ತೋರಿಸಿ ರೈತರು ತಮ್ಮ ಸಂಕಷ್ಟ ಹಂಚಿಕೊಂಡರು. ನೆಲಕ್ಕೆ ಬಿದ್ದಿರುವ ಭತ್ತವನ್ನು ಕೊಯ್ಲು ಮಾಡುವುದಕ್ಕೂ ಬರದ ಸ್ಥಿತಿಯಿದೆ. ಬಿದ್ದ ಹಾಗೂ ನಿಂತ ಭತ್ತವೂ ಕೂಡ ಮೊಳೆಕೆಯೊಡೆದಿದೆ. ಮಾರುಕಟ್ಟೆಯಲ್ಲಿ ದರವೂ ಇಲ್ಲ ಎಂದು ರೈತರು ಗೋಳು ತೋಡಿಕೊಂಡರು.
ಸಮಾಧಾನಪಡಿಸಿದ ಶಾಸಕರು, ಸರಕಾರವೇ ಈಗ ಪರಿಹಾರ ನೀಡುವ ಮೂಲಕ ನೆರವಿಗೆ ಧಾವಿಸಬೇಕಿದ್ದು, ಈ ಬಗ್ಗೆ ಗಂಭೀರವಾಗಿ ಸರಕಾರಕ್ಕೆ ಒತ್ತಾಯಿಸುತ್ತೇನೆ ಎಂದು ಭರವಸೆ ನೀಡಿದರು.
ಬೆಳೆ ವೀಕ್ಷಣೆ ಸಂದರ್ಭದಲ್ಲಿ ಮಲದಗುಡ್ಡದಲ್ಲಿ ರೈತ ಮುಖಂಡರಾದ ನಲ್ಲಾವೆಂಕಟೇಶ್ವರರಾವ್, ಚಂದ್ರೇಗೌಡ ವಿರೂಪಾಪುರ, ರವಿಗೌಡ ಮಲದಗುಡ್ಡ, ಶರಣಪ್ಪ, ಕುರುಕುಂದಾದಲ್ಲಿ ಸೋಮಶೇಖರ, ಬಡೆಪ್ಪ, ಹನುಮಂತ, ನಾಗಪ್ಪ, ಅಮರೇಗೌಡ, ಕರೇಗೌಡ, ಆದನಗೌಡ ಹಂಚಿನಾಳ, ಸುಧಾಕರರೆಡ್ಡಿ ಸೇರಿದಂತೆ ಇತರರು ಇದ್ದರು.