Advertisement

Education: ಅತಿಥಿ ಉಪನ್ಯಾಸಕರ ಸಮಸ್ಯೆ ಕುರಿತು ಸರಕಾರ ಗಮನಹರಿಸಲಿ

12:09 AM Dec 27, 2023 | Team Udayavani |

ರಾಜ್ಯದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ತಮ್ಮ ಸೇವಾ ಭದ್ರತೆಗಾಗಿ ತರಗತಿಗಳನ್ನು ಬಹಿಷ್ಕರಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ. ಅತಿಥಿ ಉಪನ್ಯಾಸಕರ ಮುಷ್ಕರ ರಾಜ್ಯಾದ್ಯಂತ ಪ್ರಾರಂಭ­ಗೊಂಡು ತಿಂಗಳ ಮೇಲಾದರೂ ಸರಕಾರದ ಸೂಕ್ತ ಸ್ಪಂದನೆ ಸಿಕ್ಕಿಲ್ಲ. ಶಿಕ್ಷಣ ನೀಡುವ ಶ್ರೇಷ್ಠ ಕಾಯಕದಲ್ಲಿ ನಿರತರಾಗಿರುವ ಉಪನ್ಯಾಸಕರು ಗೌರವಯುತ­ವಾದ ಜೀವನ ನಡೆಸಲು ಅಗತ್ಯವಾದ ಸೇವಾ ಭದ್ರತೆಗಾಗಿ, ಗೌರವಧನಕ್ಕಾಗಿ ಸರಕಾರದ ಮುಂದಿಟ್ಟಿರುವ ಬೇಡಿಕೆಗಳು ನ್ಯಾಯೋಚಿತವಾಗಿವೆ.

Advertisement

ರಾಜ್ಯದ 430 ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸುಮಾರು ಹನ್ನೆರಡು ಸಾವಿರ ಮಂದಿ ಅತಿಥಿ ಉಪನ್ಯಾಸಕರು ಬೋಧನ ಚಟುವಟಿಕೆ ನಡೆಸುತ್ತಿದ್ದಾರೆ. ಹಲವು ಕಾಲೇಜುಗಳಲ್ಲಿ ಖಾಯಂ ಉಪನ್ಯಾಸಕರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಅತಿಥಿ ಉಪನ್ಯಾಸಕರಿದ್ದಾರೆ. ತನ್ಮೂಲಕ ರಾಜ್ಯದ ಉನ್ನತ ಶಿಕ್ಷಣದಲ್ಲಿ ಅತಿಥಿ ಉಪನ್ಯಾಸಕರು ಮಹತ್ವದ ಪಾತ್ರ ನಿರ್ವಹಿಸುತ್ತಿದ್ದಾರೆ. ಆದರೆ ತನ್ನ ಅಗತ್ಯಕ್ಕೆ ಅವರನ್ನು ಬಳಸಿಕೊಳ್ಳುವ ಸರಕಾರ ಅವರ ಬೇಡಿಕೆಗಳ ಬಗ್ಗೆ ನಿರ್ಲಕ್ಷ್ಯ ಮಾಡುತ್ತ ಬಂದಿದೆ. ಇದರಿಂದ ಅತಿಥಿ ಉಪನ್ಯಾಸಕರ ಬದುಕು ಅತಂತ್ರವಾಗಿದೆ.

ಕಳೆದ ಹದಿನೈದು ಇಪ್ಪತ್ತು ವರ್ಷಗಳಿಂದ ಇಂದಲ್ಲ ನಾಳೆ ತಮ್ಮ ಕೆಲಸ ಖಾಯಂಗೊಳ್ಳಬಹುದು ಎಂಬ ವಿಶ್ವಾಸದಿಂದ ಕಡಿಮೆ ಗೌರವಧನ ಪಡೆದು ದುಡಿದ ನೂರಾರು ಅತಿಥಿ ಉಪನ್ಯಾಸಕರಿದ್ದಾರೆ. ಬೇರೆ ವೃತ್ತಿ ಆಯ್ಕೆಗಳಿದ್ದರೂ ಉಪನ್ಯಾಸ ವೃತ್ತಿಯನ್ನು ಆಯ್ದುಕೊಂಡವರಿದ್ದಾರೆ. ಈಗ ಅವರು ಬೇರೆ ಸರಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ವಯೋಮಿತಿ ಅಡ್ಡ ಬರುತ್ತಿದೆ. ಅದೇ ರೀತಿ ಸರಕಾರಕ್ಕೂ ಇವರನ್ನು ಖಾಯಂಗೊಳಿಸಲು ಕಾನೂನಿನ ಗೋಜಲುಗಳಿವೆ. ರಾಜ್ಯದ­ಲ್ಲಿದ್ದ ಸರಕಾರಗಳು ಈ ಗೋಜಲನ್ನು ಪರಿಹರಿಸುವ ಇಚ್ಛಾಶಕ್ತಿ ಪ್ರದರ್ಶಿಸಿಲ್ಲ.

ಬದಲಾಗಿ ಪ್ರತೀ ವರ್ಷ ಅತಿಥಿ ಉಪನ್ಯಾಸಕರನ್ನು ನೇಮಿಸುತ್ತ, ಅವರು ತಮ್ಮ ಬೇಡಿಕೆ ಈಡೇರಿಕೆಗೆ ಮುಷ್ಕರಕ್ಕೆ ಕೂತಾಗ ಅವರ ಕೆಲವು ಬೇಡಿಕೆಗಳನ್ನು ಈಡೇರಿಸುತ್ತ, ಇತ್ತ ಖಾಯಂ ಉಪನ್ಯಾಸಕರ ನೇಮಕಾತಿಯೂ ಮಾಡದೆ, ಪ್ರತೀ ವರ್ಷ ಹೆಚ್ಚುತ್ತಿರುವ ಉಪನ್ಯಾಸಕರ ಕೊರತೆಯನ್ನು ತುಂಬಲು ಮತ್ತೆ ಮತ್ತೆ ಅತಿಥಿ ಉಪನ್ಯಾಸಕರ ನೇಮಕದ ದಾರಿಯನ್ನು ಆಯ್ದುಕೊಳ್ಳುವ ಸರಕಾರ ಅವರ ಸಮಸ್ಯೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಪ್ರಯತ್ನಿಸುತ್ತಿಲ್ಲ.

ಅದರಲ್ಲೂ ಪ್ರಸ್ತುತ ಆಡಳಿತ ನಡೆಸುತ್ತಿರುವ ಕಾಂಗ್ರೆಸ್‌ ತನ್ನ ಚುನಾವಣ ಪ್ರಣಾಳಿಕೆಯಲ್ಲಿ ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸುವ ಭರವಸೆ ನೀಡಿತ್ತು. ಹಲವು ವರ್ಷಗಳ ಆಡಳಿತ ನಡೆಸಿದ ಅನುಭವ ಹೊಂದಿರುವ ಕಾಂಗ್ರೆಸ್‌ಗೆ ಹಾಗೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸುವ ಸಾಧ್ಯಾಸಾಧ್ಯತೆಗಳ ಅರಿವು ಇಲ್ಲದೆ ಇಂತಹ ಭರವಸೆ ನೀಡಿರಲಿಕ್ಕಿಲ್ಲ, ಮುಖ್ಯಮಂತ್ರಿಗಳು ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸುವ ತಮ್ಮ ಭರವಸೆಯನ್ನು ಈಡೇರಿಸಬೇಕು. ದಿಲ್ಲಿ ಮತ್ತು ಹರಿಯಾಣ ಸರಕಾರ ಮಾಡಿದಂತೆ ಸೇವಾ ಮತ್ತು ನೇಮಕಾತಿ ನಿಯಮದಲ್ಲಿ ತಿದ್ದುಪಡಿ ತರಬೇಕು ಎಂಬುದು ಮುಷ್ಕರ ನಿರತ ಅತಿಥಿ ಉಪನ್ಯಾಸಕರ ಸಂಘಟನೆಗಳ ಆಗ್ರಹವಿದೆ.

Advertisement

ಇಬ್ಬರ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ ಸರಕಾರ ಮತ್ತು ಅತಿಥಿ ಉಪನ್ಯಾಸಕರ ಹಗ್ಗ ಜಗ್ಗಾಟದಲ್ಲಿ ಪದವಿ ಓದುತ್ತಿರುವ ವಿದ್ಯಾರ್ಥಿಗಳ ಶಿಕ್ಷಣ ಬಡವಾಗುತ್ತಿದೆ. ಇದನ್ನು ಅರಿತು ಸರಕಾರ ಮತ್ತು ಅತಿಥಿ ಉಪನ್ಯಾಸಕರು ಮಾತುಕತೆಯ ಮೂಲಕ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು.

ಹಾಗೆಯೇ ಸರಕಾರ ಅತಿಥಿ ಉಪನ್ಯಾಸಕರಿಗೆ ಗೌರವಯತ ಜೀವನ ನಡೆಸಲು ಅಗತ್ಯವಾದ ಸಂಭಾವನೆ ಮತ್ತು ನೆಮ್ಮದಿಯಿಂದ ಪಠ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸೇವಾ ಭದ್ರತೆ ಕಲ್ಪಿಸುವ ದಾರಿಯನ್ನು ಗಂಭೀರವಾಗಿ ಶೋಧಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next