ಬಂಟ್ವಾಳ: ಕಾನೂನಿಗೆ ತಿದ್ದುಪಡಿ ತಂದಾದರೂ ಗೋ ರಕ್ಷಣೆಯ ವಿಚಾರದಲ್ಲಿ ಸರಕಾರ ಬದ್ಧತೆ ತೋರಬೇಕು. ಮಠ, ಮಂದಿರ, ಸಾರ್ವಜನಿಕರು ಗೋವಿನ ರಕ್ಷಣೆಯಲ್ಲಿ ಸೂಕ್ತ ಕ್ರಮಗಳನ್ನು ಅನುಸರಿಸಿ. ಗೋವಿನ ರಕ್ಷಣೆ ಸಮಾಜದ ಹೊಣೆ ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಗೋವು ಕಳ್ಳಸಾಗಾಟ, ವಧೆ, ಕ್ರೌರ್ಯ ವಿರುದ್ಧ ಜು. 3ರಂದು ಬಿ.ಸಿ. ರೋಡ್ ಮಿನಿ ವಿಧಾನಸೌಧ ಎದುರು ಬಜರಂಗದಳ, ಹಿಂದೂ ಜಾಗರಣ ವೇದಿಕೆ, ವಿಶ್ವ ಹಿಂದೂ ಪರಿಷತ್ ಬಂಟ್ವಾಳ ಮತ್ತು ವಿಟ್ಲ ಪ್ರಖಂಡ ಆಶ್ರಯದಲ್ಲಿ ನಡೆದ ಪ್ರತಿಭಟನ ಸಭೆಯಲ್ಲಿ ಅವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ಸ್ವಾಮೀಜಿ ಕರು ಸಹಿತದ ಗೋವಿಗೆ ಮಾಲೆ ಹಾಕಿ, ಆಹಾರ ನೀಡಿ ಪೂಜಿಸಿದರು.
ರಾಧಾಕೃಷ್ಣ ಅಡ್ಯಂತಾಯ ಮಾತನಾಡಿ, ಗೋ ಹತ್ಯೆ ನಿಲ್ಲಲಿ. ಗೋ ಅಕ್ರಮ ಸಾಗಾಟದ ಬಗ್ಗೆ ಪೊಲೀಸರು ಸ್ಪಷ್ಟ ನಿಲುವನ್ನು ಹೊಂದಬೇಕು. ಇಲ್ಲವಾದಲ್ಲಿ ಸಾಮಾಜಿಕ ಅಶಾಂತಿಗೆ ಅವರೇ ಕಾರಣ ಆಗುತ್ತಾರೆ. ಗೋರಕ್ಷಣೆ ಸಂವಿಧಾನ ಚೌಕಟ್ಟಿ ನಲ್ಲಿ ಆಗದಿದ್ದರೆ ಹಿಂದೂ ಯುವಕರು ನೇರ ಕಾರ್ಯಾಚರಣೆ ಮಾಡುವುದು ಅನಿವಾರ್ಯ ಎಂದು ಎಚ್ಚರಿಸಿದರು.
ದುರ್ಗಾವಾಹಿನಿ ವಿಭಾಗ ಪ್ರಮುಖ್ ವಿದ್ಯಾಮಲ್ಯ ಮಾತನಾಡಿ, ಜಿಲ್ಲೆಯ ಎಲ್ಲೆಲ್ಲಿ ಅಕ್ರಮ ಗೋವು ಕಸಾಯಿಖಾನೆ ಇದೆ ಎಂಬುದು ಪೊಲೀಸ್ ಇಲಾಖೆಗೆ ಸ್ಪಷ್ಟ ಮಾಹಿತಿ ಇದ್ದರೂ ಅವರು ಕಾನೂನು ಕ್ರಮ ಕೈಗೊಳ್ಳುತ್ತಿಲ್ಲ. ಸಾಮಾಜಿಕ ಅಶಾಂತಿಗೆ ಪೊಲೀಸ್ ಇಲಾಖೆಯ ದೌರ್ಬಲ್ಯ ಕಾರಣವಾಗಿದೆ. ಗೋವು ಅಕ್ರಮ ಸಾಗಾಟ ತಡೆಯಲು ಯುವಕರು ಮುಂದಾದರೆ ಹಿಂದೂಗಳ ವಿರುದ್ಧ ಪೊಲೀಸರು ಸುಳ್ಳು ಪ್ರಕರಣ ದಾಖಲಿಸುತ್ತಾರೆ. ಗೋವು ಕಳವು ಮಾಡಿದವರ ಮೇಲೆ ಯಾಕೆ ಕಳವು, ಹಲ್ಲೆ, ಗೋವಿನ ಮೇಲೆ ಮಾಡುವ ಕ್ರೌರ್ಯ ಎಂದು ಪ್ರಕರಣ ದಾಖಲಿಸುತ್ತಿಲ್ಲ ಎಂದು ಪ್ರಶ್ನಿಸಿದರು.
ವಿಹಿಂಪ ವಿಟ್ಲ ಪ್ರಖಂಡ ಅಧ್ಯಕ್ಷ ಕೃಷ್ಣಪ್ಪ ಕಲ್ಲಡ್ಕ ಮನವಿಯನ್ನು ಓದಿದರು. ಕಾರ್ಯಾಧ್ಯಕ್ಷ ಪದ್ಮನಾಭ ವಿಟ್ಲ, ಬಂಟ್ವಾಳ ಪ್ರಖಂಡ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಬಜರಂಗದಳ ಬಂಟ್ವಾಳ ಪ್ರಖಂಡ ಸಂಚಾಲಕ ಅಕೇಶ್, ಗುರುರಾಜ್ ಬಂಟ್ವಾಳ, ಅಕ್ಷತ್ ಪುಂಜಾಲಕಟ್ಟೆ, ಸಂತೋಷ್ ನೇಲ್ಯಪಲ್ಕೆ, ಅಭಿಷೇಕ್ ಅಜಿಲಮೊಗರು, ಸುಲೋಚನಾ ಜಿ.ಕೆ. ಭಟ್, ಎಂ. ತುಂಗಪ್ಪ ಬಂಗೇರ, ಚೆನ್ನಪ್ಪ ಕೋಟ್ಯಾನ್, ರಾಮ್‌ದಾಸ್ ಬಂಟ್ವಾಳ, ಮೋನಪ್ಪ ದೇವಸ್ಯ, ದೇವಪ್ಪ ಪೂಜಾರಿ, ವಜ್ರನಾಥ ಕಲ್ಲಡ್ಕ, ಪುರುಷೋತ್ತಮ ಸಾಲ್ಯಾನ್ ದಿಂಡಿಕೆರೆ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ಬಂಟ್ವಾಳ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ವಿಹಿಂಪ ಪುತ್ತೂರು ಜಿಲ್ಲಾ ಗೋರಕ್ಷ ಪ್ರಮುಖ್ ಸರಪಾಡಿ ಅಶೋಕ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವಿಸಿದರು. ಹಿಂಜಾವೇ ಪುತ್ತೂರು ಜಿಲ್ಲೆ ಅಧ್ಯಕ್ಷ ರತ್ನಾಕರ ಶೆಟ್ಟಿ ಕಲ್ಲಡ್ಕ ವಂದಿಸಿದರು. ಹಿಂಜಾವೇ ವಿಟ್ಲ ತಾಲೂಕು ಅಧ್ಯಕ್ಷ ನರಸಿಂಹ ಶೆಟ್ಟಿ ನಿರೂಪಿಸಿದರು.