Advertisement
ಪಿಎಸ್‌ಐ, ಸಹಾಯಕ ಪ್ರಾಧ್ಯಾಪಕರ, ಕೆಪಿಟಿಸಿಎಲ್ ಕಿರಿಯ ಸಹಾಯಕರ, ಶಿಕ್ಷಕರ ನೇಮಕಾತಿ ಪರೀಕ್ಷೆಗಳಲ್ಲಿ ಒಂದಲ್ಲ ಒಂದು ರೀತಿಯ ಅಕ್ರಮ, ಅವ್ಯವಹಾರ, ಲೋಪ ಆಗಿರುವುದು ಹೊರಬರುತ್ತಲೇ ಇದೆ.
Related Articles
Advertisement
ಪರೀಕ್ಷಾ ಅಕ್ರಮಗಳ ಅನುಭವದ ಆಧಾರದ ಮೇಲೆ ಅಕ್ರಮ ಎಸಗುವವರ ನಿಯಂತ್ರಣಕ್ಕೆ ರಾಜ್ಯ ಸರಕಾರ ಬದ್ಧತೆ ಪ್ರದರ್ಶನ ಮಾಡಬೇಕಾಗಿದೆ. ಇಚ್ಛಾಶಕ್ತಿ ತೋರಬೇಕಾಗಿದೆ. ಇಲ್ಲದಿದ್ದರೆ ರಾಜ್ಯದಲ್ಲಿ ಯಾವುದೇ ಪರೀಕ್ಷೆ ನಡೆದರೂ ಅಕ್ರಮ, ಅವ್ಯವಹಾರ ಆರೋಪಗಳಿಂದಾಗಿ ಇಡೀ ವ್ಯವಸ್ಥೆಯ ಬಗ್ಗೆ ಅಪನಂಬಿಕೆ ಹುಟ್ಟಲು ಪ್ರಾರಂಭವಾಗುತ್ತದೆ.
ರಾಜ್ಯದಲ್ಲಿನ ಪರೀಕ್ಷಾ ಅಕ್ರಮಗಳ ಬಗ್ಗೆ ಕೇವಲ ಆರೋಪವಷ್ಟೇ ಅಲ್ಲ. ಅಕ್ರಮ ನಡೆದಿರುವುದು ಸಾಬೀತು ಆಗಿದೆ. ಅದಕ್ಕೆ ಪಿಎಸ್‌ಐ ಹಗರಣ ಸಾಕ್ಷಿ. ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ ಉತ್ತರ ಪತ್ರಿಕೆಗಳಲ್ಲಿ ಉತ್ತರಗಳನ್ನು ರಬ್ ಮಾಡುವುದಕ್ಕಾಗಿ ವೈಟ್‌ನರ್ ಬಳಸಿದ್ದಾರೆ ಎಂಬುದು ಪತ್ತೆಯಾಗಿದೆ.
ಇದೇ ಕಾರಣಕ್ಕೆ 61 ಮಂದಿಯ ಫಲಿತಾಂಶ ತಡೆ ಹಿಡಿಯಲಾಗಿದೆ. ಇದೆಲ್ಲವನ್ನೂ ನೋಡಿದರೆ ಅಕ್ರಮ ನಡೆಯುತ್ತಿರುವುದು ನಿಜ. ಪಿಎಸ್‌ಐ, ಸಹಾಯಕ ಪ್ರಾಧ್ಯಾಪಕ, ಕೆಪಿಟಿಸಿಎಲ್ ಕಿರಿಯ ಸಹಾಯಕ, ಶಿಕ್ಷಕರ ನೇಮಕಾತಿ, ಅದಕ್ಕೂ ಮುನ್ನ ಲೋಕೋಪಯೋಗಿ ಸೇರಿದಂತೆ ಬೇರೆ ಬೇರೆ ಇಲಾಖೆಗಳ ಹುದ್ದೆಗಳ ನೇಮಕಾತಿ ವಿಚಾರದಲ್ಲಿಯೂ ಇದೇ ರೀತಿ ಅಕ್ರಮದ ಬಗ್ಗೆ ಆರೋಪ ಕೇಳಿಬಂದಿತ್ತು.
ಕರ್ನಾಟಕ ಮೊದಲು ಪಾರದರ್ಶಕ ಪರೀಕ್ಷಾ ವ್ಯವಸ್ಥೆಗೆ ಹೆಸರಾಗಿತ್ತು. ಆದರೆ ಇತ್ತೀಚೆಗಿನ ವಿದ್ಯಮಾನಗಳು ಕಳಂಕ ತರುವಂತಾಗಿದೆ. ಈ ಬಗ್ಗೆ ಸರಕಾರ ಗಂಭೀರವಾಗಿ ಯೋಚಿಸಲೇಬೇಕು. ಸರಕಾರಿ ಹುದ್ದೆಗಳ ನೇಮಕಾತಿಗಾಗಿ ನಡೆಯುವ ಪರೀಕ್ಷೆಗಳ ವಿಶ್ವಾಸಾರ್ಹತೆ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು.