ಅಥಣಿ: ನೀರಿನ ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ಪಟ್ಟಣದ ಕೃಷ್ಣಾ ನದಿ ನೀರು ಹೋರಾಟ ಸಮಿತಿ ನೇತೃತ್ವದಲ್ಲಿ ಸುಮಾರು 48 ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ 6 ದಿನ ಪೂರ್ಣಗೊಳಿಸಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಕಾಗವಾಡ ಮಾಜಿ ಶಾಸಕ ರಾಜು ಕಾಗೆ, ಕೃಷ್ಣಾ ನದಿ ನೀರು ಹೋರಾಟ ಸಮಿತಿಯಿಂದ ನಡೆಯುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹಕ್ಕೆ ನನ್ನ ಸಂಪೂರ್ಣ ಬೆಂಬಲ ಇದೆ. ಮಹಾರಾಷ್ಟ್ರ ರಾಜ್ಯಕ್ಕೆ ನೀರಿನ ಬದಲಾಗಿ ನೀರು ಕೊಡಲು ನಮ್ಮದೇನು ಅಭ್ಯಂತರವಿಲ್ಲ ಕಾರಣ ಮಳೆಗಾಲದಲ್ಲಿ ಬಿದ್ದ ಮಳೆ ನೀರು ವ್ಯರ್ಥವಾಗಿ ಸಮುದ್ರಕ್ಕೆ ಸೇರುವ ಬದಲು ಮಹಾರಾಷ್ಟ್ರದ ಜತ್ತ, ಅಕ್ಕಲಕೋಟ ಹಾಗೂ ಸೊಲ್ಲಾಪೂರ ದವರಿಗೆ ನೀಡುವಂತೆ ನಮ್ಮ ಸರ್ಕಾರ ಒಡಂಬಡಿಕೆ ಮಾಡಿಕೊಳ್ಳಬಹುದು ಎಂದರು. ಇದರಿಂದ ಬೇಸಿಗೆಯಲ್ಲಿ ಕೃಷ್ಣಾ ನದಿ ತಟದ ಜನ ಜಾನವಾರುಗಳಿಗೆ ನೀರು ಒದಗಿಸುವುದರ ಜೊತೆಗೆ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳ ಬಹುದಾಗಿದೆ. ನೀರಿನ ಸಮಸ್ಯೆ ಹೀಗೆ ಮುಂದು ವರಿದರೆ ಈ ಭಾಗದ ಹಲವಾರು ಬಿಜೆಪಿ ಮುಖಂಡರ ಜೊತೆಗೆ ಕೃಷ್ಣಾ ನದಿ ನೀರು ಹೋರಾಟ ಸಮಿತಿಯ ಕೆಲ ಪ್ರಮುಖ ಸದಸ್ಯರನ್ನು ದೆಹಲಿಗೆ ಕರೆದುಕೊಂಡು ಪ್ರಧಾನಿಯನ್ನು ಭೆೇಟಿ ಆಗಲು ನಿಯೋಗ ಕರೆದೊಯ್ಯಲು ಹೋಗಲು ಸಿದ್ದರಿದ್ದೇವೆ ಎಂದರು.
ಕರವೇ ಅಧ್ಯಕ್ಷ ಬಸನಗೌಡ ಪಾಟೀಲ (ಬಮ್ನಾಳ) ಮಾತನಾಡಿ, ಕೃಷ್ಣಾ ನದಿಗೆ ನೀರು ಹರಿಸಲು ಮತ್ತು ಶಾಶ್ವತ ಪರಿಹಾರ ಕಂಡುಕೊಳ್ಳಲು ಎರಡೂ ರಾಜ್ಯಗಳು ಒಡಂಬಡಿಕೆ ಮಾಡಿಕೊಂಡು ಕರ್ನಾಟಕಕ್ಕೆ ಮಹಾರಾಷ್ಟ್ರ ನಾಲ್ಕು ಟಿಎಂಸಿ ಅಡಿ ನೀರು ಹರಿಸುವಂತಾಗಬೇಕು. ಇಲ್ಲದಿದ್ದರೆ ಸಂಸದ ಹಾಗೂ ಶಾಸಕರ ಮನೆಗಳ ಮುಂದೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಪತ್ರಕರ್ತರ ಸಂಘದ ಅಧ್ಯಕ್ಷ ವಿಜಯಕುಮಾರ ಅಡಹಳ್ಳಿ ಮಾತನಾಡಿ, ನೀರಿನ ಬವಣೆ ನೀಗಿಸುವ ನಿಟ್ಟಿನಲ್ಲಿ ನಮ್ಮ ಹೋರಾಟ ಕೈಗೊಳ್ಳಲಾಗಿದೆ. ಇಂತಹ ಜನಪರ ಹೋರಾಟಕ್ಕೆ ಸಾರ್ವಜನಿಕರು, ಜನಪ್ರತಿನಿಧಿಗಳು, ವ್ಯಾಪಾರಸ್ಥರು, ವರ್ತಕರು, ಕೈಜೋಡಿಸುವಂತೆ ಕೋರಿದರು.
ಈ ವೇಳೆ ಬಾಬುರಾವ ಮಹಾರಾಜರು, ಸುರೇಶ ಮಹಾರಾಜರು ಮತ್ತು ಶಟ್ಟರ ಮಠದ ಮರುಳಸಿದ್ದ ಸ್ವಾಮೀಜಿ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಕಲ್ಲಪ್ಪ ವಣಜೋಳಿ ನ್ಯಾಯವಾದಿ ಸುನೀಲ ಸಂಕ, ಖೋಕಲೆ, ಜೋತಗೌಡಾ ಪಾಟೀಲ ಪ್ರಕಾಶ ಪೂಜಾರಿ, ಶಬ್ಬೀರ ಸಾತಬಚ್ಚೆ, ಎಸ್.ಎಸ್. ಪಾಟೀಲ, ರಮೇಶ ಬಾದವಾಡಗಿ, ಸುಭಾಸ ಕಾಂಬಳೆ, ದೀಪಕ ಶಿಂಧೆ, ರಾಕೇಶ ಮೈಗೂರ, ದಯಾನಂದ ಶೇಗುಣಶಿ ಉಪಸ್ಥಿತರಿದ್ದರು.