Advertisement

ಆಡಳಿತ ಯಂತ್ರ ಚುರುಕಾಗಲಿ

10:33 PM Sep 30, 2019 | mahesh |

ಬಿಜೆಪಿ ನೇತೃತ್ವದ ರಾಜ್ಯ ಸರಕಾರ ಅಸ್ತಿತ್ವಕ್ಕೆ ಬಂದು ಎರಡು ತಿಂಗಳಾಯಿತು. ಈ ವಿಧಾನಸಭೆಯ ಅವಧಿಯಲ್ಲಿ ಎರಡನೇ ಸರಕಾರವಿದು. ಆದರೂ ರಾಜ್ಯದ ಜನರಿಗೆ ಇನ್ನೂ ಸರಕಾರ ಅಸ್ತಿತ್ವಕ್ಕೆ ಬಂದಂತೆ ಎನಿಸುತ್ತಿಲ್ಲ. ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರಕಾರ ಆಡಳಿತ ನಡೆಸುತ್ತಿದ್ದಾಗಲೂ ಒಟ್ಟಂದದಲ್ಲಿ ಸರಕಾರವೊಂದು ಕ್ರಿಯಾಶೀಲವಾಗಿದೆ ಎಂದೆನಿಸುತ್ತಿರಲಿಲ್ಲ. ಕೆಲವು ನಿರ್ದಿಷ್ಟ ನಾಯಕರು, ಮಂತ್ರಿಗಳ ಕಾರ್ಯ ಚಟುವಟಿಕೆಗಳು ಕಾಣುತ್ತಿತ್ತೇ ಹೊರತೂ ಇಡೀ ಸರಕಾರದ್ದಲ್ಲ. ಆ ಸರಕಾರ ಉರುಳಿ ಬಿಎಸ್‌ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದರೂ ಈ ಅಪವಾದ ದೂರವಾದಂತೆ ತೋರುತ್ತಿಲ್ಲ.

Advertisement

ಸುಮಾರು ಒಂದು ತಿಂಗಳು ಪೂರ್ಣ ಪ್ರಮಾಣದ ಸರಕಾರವೇ ರಚನೆಯಾಗಿರಲಿಲ್ಲ. ಸಚಿವ ಸಂಪುಟವಿಲ್ಲದೆ ಯಡಿಯೂರಪ್ಪನವರೊಬ್ಬರೇ ಎಲ್ಲವನ್ನೂ ನಿಭಾಯಿಸಬೇಕಾಗಿ ಬಂತು. ಈ ಸಂದರ್ಭದಲ್ಲಿ ರಾಜ್ಯ ಭೀಕರ ಪ್ರವಾಹಕ್ಕೂ ತುತ್ತಾಯಿತು. ಯಡಿಯೂರಪ್ಪನವರೇನೋ ಶಕ್ತಿಮೀರಿ ಓಡಾಡಿ ಸಂತ್ರಸ್ತರಿಗೆ ನೆರವು ನೀಡಿದರು. ಅನಂತರ ಸಚಿವ ಸಂಪುಟ ರಚನೆಯಾಗಿ, ಖಾತೆಗಳ ಹಂಚಿಕೆಯೂ ಆಗಿ ಆಡಳಿತ ಚುರುಕುಗೊಳ್ಳಬೇಕಿತ್ತು. ಆದರೆ ಆ ಲಕ್ಷಣ ಕಾಣಿಸುತ್ತಿಲ್ಲ. ಸಚಿವರನ್ನಾಗಿ ಮಾಡುವಾಗ, ಖಾತೆಗಳನ್ನು ಹಂಚುವಾಗ ಅಸಮಾಧಾನ ಕಾಣಿಸಿಕೊಳ್ಳುವುದು ಸಹಜ. ಬಿಜೆಪಿಯಲ್ಲೂ ಇದು ಇತ್ತು. ಆದರೆ ಅದು ಉಲ್ಬಣಿಸದಂತೆ ನೋಡಿಕೊಳ್ಳುವಲ್ಲಿ ಪಕ್ಷದ ಹೈಕಮಾಂಡ್‌ ಯಶಸ್ವಿಯಾಗಿತ್ತು. ಈ ಮಟ್ಟಿಗೆ ಯಡಿಯೂರಪ್ಪನವರ ದೊಡ್ಡ ಸಮಸ್ಯೆಯೊಂದು ಸುಲಭವಾಗಿ ಪರಿಹಾರವಾಗಿತ್ತು.

ಆದರೆ ಇದೇ ವೇಳೆ ಕಾಣದ ಯಾವುದೋ ಕೈ ಸರಕಾರವನ್ನು ಪೂರ್ಣ ಪ್ರಮಾಣದಲ್ಲಿ ಅಧಿಕಾರದಲ್ಲಿ ತೊಡಗಿಸಿಕೊಳ್ಳದಂತೆ ತಡೆಯುತ್ತಿದೆ ಎಂಬ ಭಾವನೆ ಬರುತ್ತಿದೆ. ಮಂತ್ರಿಗಳನ್ನು ಆರಿಸುವಾಗ, ಖಾತೆಗಳನ್ನು ಹಂಚುವಾಗ ಮುಖ್ಯಮಂತ್ರಿಗೆ ಪೂರ್ಣ ಸ್ವಾತಂತ್ರ್ಯ ಸಿಕ್ಕಿರಲಿಲ್ಲ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಅದೇ ರೀತಿ ಪಕ್ಷದ ನೂತನ ರಾಜ್ಯಾಧ್ಯಕ್ಷರ ಆಯ್ಕೆ ಸಂದರ್ಭದಲ್ಲೂ ತುಸು ಅಸಮಾಧಾನ ಇತ್ತು ಎಂಬ ಮಾತೂ ನಿಜ. ಪಕ್ಷ ಮತ್ತು ಸರಕಾರ ಪರಸ್ಪರ ಪೂರಕವಾಗಿದ್ದುಕೊಂಡು ಕೆಲಸ ಮಾಡಿದರೇನೆ ಆಡಳಿತ ಯಂತ್ರ ಸುಸೂತ್ರವಾಗಿ ಸಾಗೀತು. ಈ ವಿಚಾರದಲ್ಲಿ ಪಕ್ಷದ ವರಿಷ್ಠರು ಸಾಕಷ್ಟು ಎಚ್ಚರಿಕೆಯ ನಡೆ ಇಡುವುದು ಸ್ವತಃ ಸರಕಾರದ ಭವಿಷ್ಯದ ಹಾಗೂ ಪಕ್ಷದ ವರ್ಚಸ್ಸಿನ ದೃಷ್ಟಿಯಿಂದ ಅಗತ್ಯ.

ಪ್ರವಾಹ ಸಂತ್ರಸ್ತರಿಗೆ ನೆರವಾಗುವ ವಿಚಾರದಲ್ಲೂ ರಾಜ್ಯ ಸರಕಾರದ ನಡೆಗಳು ಸಂಪೂರ್ಣ ತೃಪ್ತಿಕರವಾಗಿಲ್ಲ. ಕೇಂದ್ರ ಗೃಹ ಸಚಿವ ಮತ್ತು ರಕ್ಷಣಾ ಸಚಿವರೇ ಪ್ರವಾಹ ಸಂದರ್ಭದಲ್ಲಿ ಸಮೀಕ್ಷೆ ನಡೆಸಿ ಹೋಗಿದ್ದರೂ ಕೇಂದ್ರದಿಂದ ದೊಡ್ಡ ಮಟ್ಟದ ನೆರವನ್ನು ಪಡೆಯುವಲ್ಲಿ ರಾಜ್ಯ ಸಂಪೂರ್ಣ ಸಫ‌ಲವಾಗಿಲ್ಲ. ಇದಕ್ಕೆ ಜನರು ಸರಕಾರ ಮತ್ತು ರಾಜ್ಯದ ಸಂಸದರನ್ನೇ ನೇರ ಹೊಣೆ ಮಾಡುತ್ತಿದ್ದಾರೆ. ವಿಪಕ್ಷಗಳಿಗೂ ಸರಕಾರದ ವಿರುದ್ಧ ಹೋರಾಟ ಮಾಡಲು ಇದು ಒಂದು ಅಸ್ತ್ರವಾಗಿದೆ. ಅಲ್ಪಮತದ ಸರಕಾರ ಇರುವಾಗ ಇಂಥ ಸೂಕ್ಷ್ಮ ವಿಚಾರಗಳಿಗೆ ಸಂಬಂಧಿಸಿದಂತೆ “ಮೇಲಿನವರು’ ತುಸು ಸಂವೇದನಾಶೀಲವಾಗಿ ವರ್ತಿಸಬೇಕಿತ್ತು.

ಈಗಾಗಲೇ ಒಂದು ವರ್ಷಕ್ಕೂ ಹೆಚ್ಚಿನ ಅವಧಿ ಸಮ್ಮಿಶ್ರ ಸರಕಾರದ ಆಂತರಿಕ ಕಚ್ಚಾಟದಿಂದ ಸೃಷ್ಟಿಯಾಗಿದ್ದ ಗೊಂದಲದಲ್ಲಿ ಕಳೆದು ಹೋಗಿದೆ. ಈ ನೂತನ ಸರಕಾರವೂ ಅಂಥದ್ದೇ ಗೊಂದಲದಲ್ಲಿ ಮುಳುಗಿದರೆ ರಾಜ್ಯದ ಜನರು ರಾಜಕೀಯ ಪಕ್ಷಗಳ ಮೇಲೆಯೇ ವಿಶ್ವಾಸ ಕಳೆದುಕೊಂಡಾರು. ಜತೆಗೆ ರಾಜ್ಯ ಮತ್ತು ಜನರಿಗಾಗುವ ನಷ್ಟವನ್ನು ಯಾರೂ ತುಂಬಿಕೊಡಲಾರರು. ಒಂದೆಡೆ ನೆರೆ ಮತ್ತು ಬರ ಸಂತ್ರಸ್ತರ ಪುನರ್‌ವಸತಿಗಾಗಿ ಸಮರೋಪಾದಿಯಲ್ಲಿ ಕಾರ್ಯಗಳಾಗಬೇಕು. ಇನ್ನೊಂದೆಡೆ ರಾಜ್ಯವನ್ನು ಸುಸ್ಥಿರ ಅಭಿವೃದ್ಧಿಯತ್ತ ಕೊಂಡೊಯ್ಯುವ ಕೆಲಸವೂ ಆಗಬೇಕು. ಇವೆಲ್ಲ ಸಾಧ್ಯವಾಗಬೇಕಾದರೆ ಸರಕಾರ ಆಡಳಿತದಲ್ಲಿ ಪೂರ್ಣವಾಗಿ ತೊಡಗಿಕೊಳ್ಳಬೇಕು.
ಈ ನಡೆಗಳೇ ಆಡಳಿತ ನಡೆಸುವವರ ಆದ್ಯತೆಗಳಾಗಬೇಕು.

Advertisement
Advertisement

Udayavani is now on Telegram. Click here to join our channel and stay updated with the latest news.

Next