ಆಳಂದ: ಸ್ವಾತಂತ್ರ್ಯ ಭಾರತ 75ನೇ ಅಮೃತ ಮಹೋತ್ಸವ ಆಚರಣೆ ಹಿನ್ನೆಯಲ್ಲಿ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದ ಎಲ್ಲ ಶಾಲೆ, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಮನೆಗಳ ಮೇಲೂ ಧ್ವಜಾರೋಹಣ ಕೈಗೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಚಿತ್ರಶೇಖರ ದೇಗುಲಮಡಿ ಹೇಳಿದರು.
ಪಟ್ಟಣದ ಗುರುಭವನದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಆಡಳಿತ ಕಚೇರಿಯಲ್ಲಿ ಶುಕ್ರವಾರ ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮುಖ್ಯಶಿಕ್ಷಕರಿಗೆ ಹಾಗೂ ದೈಹಿಕ ಶಿಕ್ಷಣದ ಶಿಕ್ಷರಿಗೆ ಕರೆದ ಸಭೆಯಲ್ಲಿ ಅವರು ಮಾತನಾಡಿದರು.
ರಾಷ್ಟ್ರ ಧ್ವಜರೋಹಣವನ್ನು ಶಾಲೆಗಳಲ್ಲಿ ಅ.13ರಿಂದ15ರ ವರೆಗೆ ರಾತ್ರಿ, ಹಗಲು ದಿನದ 24 ಗಂಟೆಗಳ ಕಾಲ ಧ್ವಜ ಅವರೋಹಣ ಕೈಗೊಳ್ಳದೇ ಆರೋಹಣದಲ್ಲೇ ಮುಂದುವರಿದಿರಬೇಕು. ಅ.15ರಂದು ಮಾತ್ರ ಪ್ರತ್ಯೇಕವಾಗಿ ಮತ್ತೊಂದು ಧ್ವಜ ಸ್ತಂಭದಿಂದ ಧ್ವಜರೋಹಣ ನೆರವೇರಿಸಬೇಕು ಎಂದು ಮಾಹಿತಿ ನೀಡಿದರು.
ಅಂದು ಪ್ರತಿಯೊಬ್ಬ ಶಿಕ್ಷಕರು, ಮಕ್ಕಳ ಮನೆಗಳಲೂ ಧ್ವಜಾರೋಹಣ ಕೈಗೊಳ್ಳುವಂತಾಗಬೇಕು. ಈ ನಡುವೆ ಶಾಲೆಗಳಲ್ಲಿ ಮಕ್ಕಳಿಗೆ ರಾಷ್ಟ್ರಧ್ವಜದ ಗೌರವ ಮತ್ತು ಅದರ ಮಹತ್ವ ಕುರಿತು ತಿಳಿವಳಿಕೆ ಕಡ್ಡಾಯವಾಗಿ ನೀಡಬೇಕು ಎಂದರು.
ಅ.15ರಂದು ಪಟ್ಟಣದ ಶ್ರೀರಾಮ ಮಾರುಕಟ್ಟೆಯಲ್ಲಿ ನಡೆಯುವ ಸಾರ್ವಜನಿಕ ಧ್ವಜಾರೋಹಣ ಸಮಾರಂಭಕ್ಕೆ ಆಯ್ದ ಶಾಲೆಗಳ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿ ಬಹುಮಾನ ಮತ್ತು ಪ್ರಶಸ್ತಿ ಪ್ರಮಾಣ ಪತ್ರ ನೀಡಲಾಗುವುದು ಎಂದು ಹೇಳಿದರು.
ಪ್ರತಿ ಮನೆಗಳ ಮೇಲೆ ಕೈಗೊಳ್ಳುವ ಧ್ವಜವನ್ನು ಗ್ರಾಮ ಪಂಚಾಯಿತಿ, ಅಂಚೆ ಕಚೇರಿ, ಪುರಸಭೆಯಿಂದ ಕಡಿಮೆ ದರದಲ್ಲಿ ನೀಡಲಾಗುತ್ತಿದೆ. ಅದನ್ನು ಖರೀದಿಸಿ ಅರೋಹಣ ಕೈಗೊಳ್ಳಬೇಕು ಎಂದು ತಿಳಿಸಿದರು.
ಬಿಆರ್‌ಸಿ ಬಸವರಾಜ ದೊಡ್ಡಮನಿ, ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ಅರವಿಂದ ಭಾಸಗಿ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ರಾಣಪ್ಪ ಸಂಗನ ಮತ್ತಿತರರು ಇದ್ದರು.