Advertisement

ಬೆಳೆಗೆ ರೈತರೇ ದರ ನಿಗದಿಪಡಿಸುವಂತಾಗಲಿ

09:50 PM Dec 15, 2019 | Team Udayavani |

ಕೊರಟಗೆರೆ: ರೈತ ಬೆಳೆಯುವ ಬೆಳೆಗೆ ದರ ನಿಗದಿ ಮಾರುಕಟ್ಟೆ ಮಾಡುತ್ತಿದೆ. ಅದಕ್ಕೆ ಬದಲಾಗಿ ರೈತನೇ ನಿಗದಿ ಮಾಡುವಂತಾಗಬೇಕು ಎಂದು ರಾಜ್ಯ ಅಪೆಕ್ಸ್‌ ಬ್ಯಾಂಕ್‌ ಮತ್ತು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಕೆ.ಎನ್‌.ರಾಜಣ್ಣ ಹೇಳಿದರು. ತಾಲೂಕಿನ ಎಲೆರಾಂಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನವೀಕೃತ ಕಟ್ಟಡ ಉದ್ಘಾಟನೆ ಮತ್ತು ಕೆಸಿಸಿ ಸಾಲ ವಿತರಣೆ ಸಮಾರಂಭದಲ್ಲಿ ಮಾತನಾಡಿದರು.

Advertisement

ಸಹಕಾರ ಬ್ಯಾಂಕ್‌ಗಳು ರೈತರಿಗೆ ಹತ್ತಿರದ ಬ್ಯಾಂಕ್‌ಗಳಾಗಿದ್ದು, ನಿರ್ದೇಶಕರು ಅಧ್ಯಕ್ಷರು ಸ್ಥಳೀಯರಾಗಿರುತ್ತಾರೆ. ಸಹಕಾರ ಸಂಘಗಳು ಪ್ರತಿಯೊಬ್ಬ ರೈತನ ಆಸ್ತಿಯಾಗಿದ್ದು, ರೈತರು ಹಣ ಪಡೆಯಲು ಹಕ್ಕುದಾರರಾಗಿದ್ದು ಹಣ ವಾಪಸ್‌ ನೀಡುವ ಜವಾಬ್ದಾರಿ ಹೊಂದಿರುತ್ತಾರೆ. ಕೊರಟಗೆರೆ ತಾಲೂಕಿನಲ್ಲಿ 683 ರೈತರಿಗೆ 2.83 ಕೋಟಿ ರೂ. ಬೆಳೆ ಸಾಲ ನೀಡಿದ್ದು, ರೈತರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು.

ರೈತರು ಹೈನುಗಾರಿಕೆ ಮುಖ್ಯ ಕಸುಬನ್ನಾಗಿ ಮಾಡಿಕೊಂಡರೆ ಅವರ ಆರ್ಥಿಕ ಪರಿಸ್ಥಿತಿ ಉತ್ತಮವಾಗುತ್ತದೆ. ಡಿಸಿಸಿ ಬ್ಯಾಂಕ್‌ನ ಶಾಖೆಯನ್ನು ತಾಲೂಕಿನ ಕೋಳಾಲ ಮತ್ತು ತೋವಿನಕೆರೆ, ಕುಣಿಗಲ್‌ನ ಹೆಬ್ಬೂರು ಹಾಗೂ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಪ್ರಾರಂಭಿಸಲಾಗುವುದು. ಮುಂದಿನ ದಿನಗಳಲ್ಲಿ ಕೊರಟಗೆರೆ ತಾಲೂಕಿನ ಎಲೆರಾಂಪುರದಲ್ಲೂ ಅಗತ್ಯವಿದ್ದರೆ ಮಂಜೂರು ಮಾಡಿಸಲಾಗುವುದು ಎಂದು ಹೇಳಿದರು.

ನೀರಾವರಿ ಯೋಜನೆ ಭರವಸೆ: ಸಂಸದ ಜಿ.ಎಸ್‌.ಬಸವರಾಜು ಮಾತನಾಡಿ, ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ಪಡೆಯಬೇಕೆಂದರೆ ರೈತರು ಸಂಕಷ್ಟ ಎದುರಿಸಬೇಕು. ಆದರೆ ಸಹಕಾರಿ ಬ್ಯಾಂಕ್‌ಗಳು ರೈತರ ಜೊತೆ ಉತ್ತಮ ಸಂಬಂಧ ಹೊಂದಿದ್ದು, ರೈತರು ಕೊಟ್ಟ ಸಾಲ ಮರು ಪಾವತಿಸಬೇಕು. ಎಸ್‌.ಎಂ.ಕೃಷ್ಣ ಕಾಲದಲಿದ್ದ ಯಶಸ್ವಿನಿ ಯೋಜನೆ ಮತ್ತೆ ಜಾರಿಗೊಳಿಸಬೇಕು.

ನನಗೆ ಕೊರಟಗೆರೆ ಮತ್ತು ಮಧುಗಿರಿ ಕ್ಷೇತ್ರಗಳು ಗೆಲುವಿಗೆ ಸಹಕಾರಿಯಾಗಿದ್ದು, ಕಳೆದ ಚುನಾವಣೆಗಿಂತ ಈ ಬಾರಿ ನನಗೆ 88 ಸಾವಿರ ಅಧಿಕ ಮತ ಸಿಕ್ಕಿದೆ. ಅದೇ ರೀತಿಯಾಗಿ ಈ ಭಾಗದ ಜನರಿಗೆ ನೀರಾವರಿ ಯೋಜನೆ ಜಾರಿ ಮಾಡುವ ಸಂಕಲ್ಪ ಹೊಂದಿದ್ದು, ಕೋಳಾಲ ಹೋಬಳಿಯ ಬೈರಗೊಂಡ್ಲು ಗ್ರಾಮದಲ್ಲಿ 5 ಸಾವಿರ ಸಾಮರ್ಥ್ಯದ ಬಫ‌ರ್‌ ಡ್ಯಾಂ ನಿರ್ಮಿಸುವ ಕೆಲಸ ಮಾಡುತ್ತಿದ್ದು, ರೈತರು ಸಹಕರಿಸಬೇಕು ಎಂದು ಮನವಿ ಮಾಡಿದರು.

Advertisement

ರಾಜ್ಯ ಸಹಕಾರ ಮಹಾಮಂಡಲ ಅಧ್ಯಕ್ಷ ಗಂಗಣ್ಣ, ಜಿಪಂ ಸದಸ್ಯ ಶಿವರಾಮಯ್ಯ, ಡಿಸಿಸಿ ಬ್ಯಾಂಕ್‌ ನಿರ್ದೇಶಕರಾದ ಹನುಮಾನ್‌, ರಾಜಕುಮಾರ್‌, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕುಬೇಂದ್ರ ನಾಯ್ಕ, ವಿಎಸ್‌ಎಸ್‌ಎನ್‌ ಅಧ್ಯಕ್ಷ ರಾಜಶೇಖರಯ್ಯ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಘವೇಂದ್ರರಾವ್‌, ತಾಲೂಕು ತುಮುಲ್‌ ನಿರ್ದೇಶಕ ಈಶ್ವರಯ್ಯ, ಭೋರಣ್ಣ, ಆರ್‌.ಎಸ್‌.ರಾಜಣ್ಣ, ವೀರಭದ್ರಪ್ಪ, ಇತರರಿದ್ದರು.

ಚಿನ್ನದ ಮೇಲೆ ಸಾಲ: ಸಹಕಾರಿ ಸಂಘ ಚಿನ್ನದ ಮೇಲೆ ಕಡಿಮೆ ಬಡ್ಡಿಗೆ ಸಾಲ ನೀಡುತ್ತದೆ. ಯಾವುದೇ ಕಾರಣಕ್ಕೂ ಅದನ್ನು ಹರಾಜು ಹಾಕುವುದಿಲ್ಲ. ಜನರು ಖಾಸಗಿ ಬ್ಯಾಂಕ್‌ಗಳಲ್ಲಿ ಚಿನ್ನ ಅಡವಿಟ್ಟು ಹೆಚ್ಚು ಬಡ್ಡಿ ನೀಡಿ ಚಿನ್ನ ಕಳೆದುಕೊಳ್ಳುವುದು ತಪ್ಪಲಿದೆ. ರೈತರು ಮಕ್ಕಳ ವಿದ್ಯಾಭ್ಯಾಸಕ್ಕೆ ಹಣ ತೊಡಗಿಸಿದರೆ ಅದನ್ನು ಮುಂದೆ ಬರುವ ಲಾಭವೆಂದೇ ಪರಿಗಣಿಸಬೇಕು.

ಮಕ್ಕಳು ವಿದ್ಯಾವಂತರಾದರೆ ಕುಟುಂಬಕ್ಕೆ ಆಧಾರವಾಗುತ್ತಾರೆ. ಸಹಕಾರ ಸಂಘಗಳಿಗೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಸಾಲ ಮನ್ನಾ ಯೋಜನೆಯ 4 ಸಾವಿರ ಕೋಟಿ ಮತ್ತು ಸಿದ್ದರಾಮಯ್ಯ ಅವರ 164 ಕೋಟಿ ರೂ. ಬಿಡುಗಡೆಯಾಗಿಲ್ಲ ಎಂದು ಅಪೆಕ್ಸ್‌ ಮತ್ತು ಡಿಸಿಸಿ ಬ್ಯಾಂಕ್‌ ಕೆ.ಎನ್‌.ರಾಜಣ್ಣ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next