ರಾಮದುರ್ಗ: ಜಾನಪದ ಕಲೆ ಮತ್ತು ಸಂಸ್ಕೃತಿಯನ್ನು ಮೈಗೂಡಿಸಿಕೊಂಡಲ್ಲಿ ಸಮಾಜದಲ್ಲಿ ನಡೆಯುತ್ತಿರುವ ರೈತರ ಆತ್ಮಹತ್ಯೆಯನ್ನು ತಡೆಯಬಹುದಾಗಿದೆ ಎಂದು ಮಾಜಿ ಸಚಿವ ಶಶಿಕಾಂತ ನಾಯಕ ಹೇಳಿದರು.
ಪಟ್ಟಣದ ವಿದ್ಯಾಚೇತನ ಶಾಲಾ ಆವರಣದ ಈಶ್ವರ ಮಂಟೂರ ಮತ್ತು ಶಂಕರ ನಾಯಕ ವೇದಿಕೆಯಲ್ಲಿ ಅವರಾದಿ ಶಿವಪೇಟೆಯ ಓಂ ಶಿವ ಮೇಳದ ಆಶ್ರಯದಲ್ಲಿ ಜರುಗಿದ ರಾಜ್ಯ ಮಟ್ಟದ ಜಾನಪದ ಮಹಾಸಮ್ಮೇಳನದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದೇಶಕ್ಕೆ ಅನ್ನ ನೀಡುವ ರೈತ ಸಾಲದ ಶೂಲಕ್ಕೆ ಹೆದರಿ ಸಾಯುವ ಬದಲು ಜಾನಪದ ಸೊಗಡಿನ ಒಳಾರ್ಥವನ್ನು ಅರಿತು ಉತ್ತಮ ಬದುಕನ್ನು ಸಾಗಿಸಿ ಇತರರಿಗೆ ಮಾದರಿಯಾಗಬೇಕು ಎಂದು ಅವರು ರೈತರಿಗೆ ಕಿವಿಮಾತು ಹೇಳಿದರು.
ಜಾನಪದ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯೆ ಲಕ್ಷ್ಮೀ ಆರಿಬೆಂಚಿ ಮಾತನಾಡಿ, ಮನುಷ್ಯನ ಹುಟ್ಟಿನಿಂದ ಸಾಯುವವರೆಗೂ ಜಾನಪದ ಜೊತೆಗೆ ನಂಟಿದೆ. ಆಧುನಿಕ ಯುಗದಲ್ಲಿ ಯುವಕರು ಜಾಪದದ ಹೆಸರಿನಲ್ಲಿ ಜನಪ್ರಿಯ ಗೀತೆಗಳಿಗೆ ಜೋತುಬಿದ್ದಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಪುರಸಭೆ ಅಧ್ಯಕ್ಷ ಶಂಕರ ಬೆನ್ನೂರ, ಬೆಂಬಳಗಿ ಕಾಲೇಜು ಪ್ರಾಂಶುಪಾಲೆ ಡಾ| ರಾಜಶ್ರೀ ಗುದಗನವರ, ಪ್ರಾಧ್ಯಾಪಕ ಪ್ರೊ| ಎಸ್.ಎಂ. ಸಕ್ರಿ, ಮೀರಾ ಮೋಟೆ ಮಾತನಾಡಿದರು. ಜಾನಪದ ವಿದ್ವಾಂಸ ಪ್ರೊ| ಪಿ.ಎಲ್. ಮಿಸಾಳೆ ವಿಶೇಷ ಉಪನ್ಯಾಸ ನೀಡಿದರು. ನರೇಗಲ್ಲ ಸರಕಾರಿ ಕಾಲೇಜಿನ ಪ್ರಾದ್ಯಾಪಕ ಶಿವಮೂರ್ತಿ ಕುರೇರ ಪ್ರಾಸ್ತಾವಿಕ ಮಾತನಾಡಿದರು. ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಬಸವರಾಜ ಶಿಗ್ಗಾಂವಿ, ಮುನವಳ್ಳಿಯ ತಾನಾಜಿ ಮುರಂಕರ ಮತ್ತು ಜಾನಪದ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯೆ ಲಕ್ಷ್ಮೀ ಆರಿಬೆಂಚಿ ಅವರಿಗೆ ಜಾನಪದ ಶಿವಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮಕ್ಕೆ ಪ್ರೋತ್ಸಾಹ ನೀಡಿದ ದಾನಿಗಳನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಸಂಗಪ್ಪ ಹೂಗಾರ, ಪುಂಡಲೀಕ ನಡಗಡ್ಡಿ, ಚನ್ನಪ್ಪ ಮಾದರ, ಈರನಗೌಡ ಪಾಟೀಲ ಇತರರು ಇದ್ದರು. ಮಂಜುನಾಥ ಕೊಳದೂರ ಸ್ವಾಗತಿಸಿದರು. ರವಿ ಕಮ್ಮಾರ ನಿರೂಪಿಸಿದರು. ಕಲಾವಿದ ಸಿದ್ದು ಮೋಟೆ ವಂದಿಸಿದರು.