ಮೈಸೂರು: ನಗರದ ಬಡಾವಣೆ, ಪಾರ್ಕ್‌ಗಳು ಸೇರಿದಂತೆ ಒಂದೊಂದು ಕಡೆ ಎಷ್ಟು ಗಿಡಗಳನ್ನು ನೆಡಬಹುದು, ಅವುಗಳ ನಿರ್ವಹಣೆ ಹೊಣೆಯನ್ನು ಬಡಾವಣೆಗಳ ಅಸೋಸಿಯೇಷನ್ ಇಲ್ಲವೇ ಸಮೀಪ ಇರುವ ಕಾರ್ಖಾನೆಗಳಂತಹ ಖಾಸಗಿಯವರ ಸುಪರ್ದಿಗೂ ವಹಿಸಿ, ನಿರ್ವಹಣೆ ಜವಾಬ್ದಾರಿ ನೀಡಬೇಕು ಎಂದು ಸಚಿವ ಎಸ್.ಟಿ. ಸೋಮಶೇಖರ್ ಸೂಚಿಸಿದರು. ಜಿಪಂ ಸಭಾಂಗಣದಲ್ಲಿ ಜೂನ್ 5ರ ವಿಶ್ವ ಪರಿಸರ ದಿನಾಚರಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ವಿವಿಯಲ್ಲಿ ಎಷ್ಟು ಗಿಡಗಳನ್ನು ನೆಡಬಹುದು,
ಈ ಬಾರಿ ನೀವು ಎಷ್ಟು ಗಿಡಗಳನ್ನು ನೆಡುತ್ತೀರಿ ಎಂಬ ನಿಗದಿತ ಗುರಿ ಹಾಕಿಕೊಂಡು ಕಾರ್ಯನಿರ್ವಹಿಸಿ. ಹೇಳುವ ಲೆಕ್ಕವೊಂದು, ನೆಡುವ ಲೆಕ್ಕ ಇನ್ನೊಂದು ಆಗಬಾರದು ಎಂದರು. ಇನ್ನೊಂದು ಪ್ರಮುಖ ಸಂಗತಿಯೆಂದರೆ ನಗರ ಪಾಲಿಕೆಗೆ ಎಷ್ಟು ಗಿಡ ಹಾಗೂ ಯಾವ ಯಾವ ಜಾತಿ, ತಳಿಯ ಗಿಡಗಳನ್ನು ನೆಡಬೇಕು ಎಂಬ ಬಗ್ಗೆ ಸರಿಯಾಗಿ ಯೋಜನೆ ರೂಪಿಸಿದರೆ, ಈ ಬಗ್ಗೆ ವ್ಯವಸ್ಥೆ ಮಾಡಲಾಗುವುದು ಎಂದರು.
ನರೇಗಾ ಸದುಪಯೋಗವಾಗಲಿ: ಇತ್ತ ಸಾರ್ವಜನಿಕರಿಗೆ ಉದ್ಯೋಗವೂ ಸಿಗಬೇಕು, ಅತ್ತ ಜಿಲ್ಲೆ ಹಸಿರೀಕರಣವೂ ಆಗಬೇಕು ಎಂಬ ನಿಟ್ಟಿನಲ್ಲಿ ಯೋಜನೆ ಅನುಷ್ಠಾನಕ್ಕೆ ತರಬೇಕು. ಈಗ ನಿರ್ಧಾರ ಮಾಡಲಾಗಿರುವಂತೆ ನರೇಗಾ ಯೋಜನೆಯಲ್ಲಿ ಗಿಡಗಳನ್ನು ನೆಡುವುದು ಉತ್ತಮ ಕಾರ್ಯಕ್ರಮ. ಆದರೆ, ಇದು ಕೇವಲ ಪೇಪರ್ ವರ್ಕ್ ರೀತಿ ಆಗಬಾರದು. ಕೆಲಸ ಮಾಡಿದವರಿಗೂ ಹಣ ಸಿಗುವ ಜೊತೆಗೆ ಗಿಡಗಳನ್ನೂ ಸಮರ್ಪಕವಾಗಿ ನೆಡಬೇಕು ಎಂದು ಸೂಚಿಸಿದರು.
ಗಿಡ ನೆಡುವ ಯೋಜನೆ ಸಿದ್ಧರಾಗಿ: ಶಾಸಕ ಎಸ್.ಎ.ರಾಮದಾಸ್ ಮಾತನಾಡಿ, ಗಿಡಗಳು ಎಷ್ಟು ಇವೆ, ಯಾವ ಗಿಡಗಳನ್ನು ಯಾವ ಪ್ರದೇಶದಲ್ಲಿ ನೆಡಬೇಕು? ಅವುಗಳನ್ನು ನೆಡಲು ಯಾವ ರೀತಿ ಯೋಜನೆ ಹಾಕಿಕೊಂಡು ಅಧಿಕಾರಿಗಳು ಬಂದಿದ್ದಾರೆ ಎಂಬುದು ಮುಖ್ಯ. ವಿದ್ಯುತ್ ತಂತಿಗಳ ಕೆಳಗೆ ಯಾವ ಗಿಡಗಳನ್ನು ಬೆಳೆಸಬೇಕು. ಎಷ್ಟು ಎತ್ತರದ ಗಿಡಗಳನ್ನು ನೆಡಬಹುದು? ಒಮ್ಮೆ ಅವುಗಳು ಬೆಳೆದ ಮೇಲೆ ಮತ್ತೆ ಕಡಿಯುವಂತಾಗಬಾರದು. ಅಲ್ಲದೆ, ಗಿಡಗಳನ್ನು ಖಾಸಗಿಯವರು ಪ್ರೀತಿಯಿಂದ ನರ್ಸರಿಯಲ್ಲಿ ಬೆಳೆಸುತ್ತಿದ್ದಾರೆ. ಅವುಗಳನ್ನು ನಾವು ಪಡೆದು ಪರಿಸರ ದಿನದಂದು ನೆಟ್ಟು ಸುಮ್ಮನಾಗಿ, ಕೊನೆಗೆ ಅತ್ತ ಮುಖ ಹಾಕದೇ ಇದ್ದರೆ ಮಾಡಿದ ಕೆಲಸ ಸಾರ್ಥಕವಾಗದು. ಇವುಗಳ ಬಗ್ಗೆ ನಿಗಾ ಬೇಕು ಎಂದರು.
ಕೈಗಾರಿಕೆಗಳಿಗೂ ಜವಾಬ್ದಾರಿ ಕೊಡಿ: ಡೀಸಿ ಅಭಿರಾಮ್ ಜಿ. ಶಂಕರ್ ಮಾತನಾಡಿ, ಪರಿಸರ ಪೋಷಣೆ ಜವಾಬ್ದಾರಿಯನ್ನು ಕೈಗಾರಿಕೆಗಳಿಗೂ ಕೊಡುವಂತಾಗಬೇಕು. ಕೈಗಾರಿಕೋದ್ಯಮಿಗಳು ಖಾಸಗಿಯಾಗಿ ಪಾರ್ಕ್ ನಿರ್ವಹಣೆಗಳಂತಹ ಚಟುವಟಿಕೆಯಲ್ಲಿ ತೊಡಗಿಕೊಂಡು ನಿರ್ವಹಣೆ ಮಾಡುವ ನಿಟ್ಟಿನಲ್ಲಿ ನೋಡಿಕೊಳ್ಳಬೇಕು ಎಂದರು. ಜಿಪಂ ಸಿಇಒ ಪ್ರಶಾಂತ್‌ಕುಮಾರ್ ಮಿಶ್ರಾ, ನಗರ ಪಾಲಿಕೆ ಆಯುಕ್ತ ಗುರುದತ್ ಹೆಗಡೆ, ಎಂಡಿಎ ಆಯುಕ್ತ ಡಾ.ಡಿ.ಬಿ. ನಟೇಶ್, ಡಿಸಿಎಫ್ ಕೆ.ಸಿ. ಪ್ರಶಾಂತ್‌ಕುಮಾರ್, ಎಸ್ಪಿ ಸಿ.ಬಿ. ರಿಷ್ಯಂತ್, ಡಿಸಿಪಿ ಡಾ.ಎ.ಎನ್. ಪ್ರಕಾಶ್ ಗೌಡ ಇದ್ದರು.