Advertisement

ಉದ್ಯೋಗ ನೀಡುವ ಶಿಕ್ಷಣ ನೀತಿ ಜಾರಿಯಾಗಲಿ

10:07 AM Feb 01, 2019 | Team Udayavani |

ಚಿಕ್ಕಮಗಳೂರು: ಯುವ ಸಮುದಾಯದ ಉದ್ಯೋಗಕ್ಕೆ ಅನುಕೂಲವಾಗುವಂತಹ ಶಿಕ್ಷಣ ನೀತಿ ಜಾರಿಗೆ ತರುವ ಅಗತ್ಯವಿದೆ ಎಂದು ಶಾಸಕ ಸಿ.ಟಿ.ರವಿ ಹೇಳಿದರು.

Advertisement

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಮತ್ತು ಕೌಶಲ್ಯಾಭಿವೃದ್ಧಿ ಕಚೇರಿಗಳ ಸಹಯೋಗದೊಂದಿಗೆ ಗುರುವಾರ ನಗರದ ಮಿನಿ ಉದ್ಯೋಗ ಮೇಳ

ನೇತಾಜಿ ಸುಭಾಷ್‌ ಚಂದ್ರಬೋಸ್‌ ಜಿಲ್ಲಾ ಆಟದ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಮಿನಿ ಉದ್ಯೋಗ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದೆ ಬ್ರಿಟಿಷರು ತಮಗೆ ಅಗತ್ಯವಾಗಿದ್ದ ಗುಮಾಸ್ತ ಹುದ್ದೆಗೆ ಬೇಕಾದಂತಹ ಶಿಕ್ಷಣ ನೀತಿ ರೂಪಿಸಿದ್ದರು. ಸ್ವಾತಂತ್ರ್ಯ ನಂತರ ಸರಿಯಾದ ಶಿಕ್ಷಣ ನೀತಿ ರೂಪಿಸುವಲ್ಲಿ ವಿಫಲವಾಗಿದ್ದರಿಂದಲೇ ದೇಶದಲ್ಲಿ ಇಂದು ನಿರುದ್ಯೋಗ ಸಮಸ್ಯೆ ತೀವ್ರವಾಗಿದೆ ಎಂದರು.

ಹಿಂದೆ ದೇಶದಲ್ಲಿ ಪ್ರತಿಯೊಬ್ಬರೂ ಉದ್ಯೋಗವಂತರಾಗಿದ್ದರು. ಪಾರಂಪರಿಕವಾಗಿ ಬಂದಿದ್ದ ಉದ್ಯೋಗವನ್ನು ಪ್ರತಿಯೊಬ್ಬರೂ ಮಾಡುತ್ತಿದ್ದರು. ಪಾರಂಪರಿಕ ಉದ್ಯೋಗಕ್ಕೆ ಆಧುನಿಕ ಸ್ಪರ್ಶ ಕೊಟ್ಟು, ಮೇಲು-ಕೀಳು ಎಂಬ ಭಾವನೆ ತೆಗೆದು ಹಾಕಿದ್ದರೆ ಪ್ರತಿಯೊಂದು ಉದ್ಯೋಗಕ್ಕೆ ಆರ್ಥಿಕ ಬಲವನ್ನು ಶಾಸನದ ಮೂಲಕ ಕೊಟ್ಟಿದ್ದರೆ, ಬಸವಣ್ಣನವರ ಕಾಯಕವೇ ಕೆೃಲಾಸ ಎಂಬ ತತ್ವಕ್ಕೆ ಸಾಮಾಜಿಕ ಬಲ ತುಂಬಿದ್ದರೆ ದೇಶದಲ್ಲಿ ನಿರುದ್ಯೋಗಿಗಳು ಯಾರೂ ಇರುತ್ತಿರಲಿಲ್ಲ ಎಂದು ಹೇಳಿದರು. ಇಡೀ ವಿಶ್ವದಲ್ಲಿಯೇ ಅತೀ ಹೆಚ್ಚು ಯುವಜನತೆ ಹೊಂದಿರುವ ದೇಶ ನಮ್ಮದಾಗಿದೆ. ಯುವಜನತೆಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡಿ, ಉದ್ಯೋಗಶೀಲರನ್ನಾಗಿಸಿದರೆ ದೇಶದ ಅಭಿವೃದ್ಧಿಯ ವೇಗ 10 ಪಟ್ಟು ಹೆಚ್ಚಾಗುತ್ತದೆ. ಇದನ್ನು ಮನಗಂಡು ದೇಶದ ಪ್ರಧಾನಿ ನರೇಂದ್ರ ಮೋದಿಯವರು ಆ ನಿಟ್ಟಿನಲ್ಲಿ ದಾಪುಗಾಲು ಇಟ್ಟಿದ್ದಾರೆ ಎಂದರು.

Advertisement

ಯುವಜನತೆಯಲ್ಲಿ ಕೌಶಲ್ಯಾಭಿವೃದ್ಧಿ ಹೆಚ್ಚಿಸುವ ಉದ್ದೇಶದಿಂದ ದೇಶದಲ್ಲಿ 4800ಕ್ಕೂ ಹೆಚ್ಚು ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರ ತೆರೆಯಲಾಗಿದೆ. ಯುವಜನತೆಯಲ್ಲಿರುವ ಕೌಶಲ್ಯ ಗುರುತಿಸಿ ಅವರು ಇಚ್ಛಿಸಿದ ರೀತಿಯಲ್ಲಿ ತರಬೇತಿ ಕೊಡಲಾಗುತ್ತಿದೆ ಎಂದು ಹೇಳಿದರು.

ಉದ್ಯೋಗಾಕಾಂಕ್ಷಿಗಳು ಮತ್ತು ಉದ್ಯೋಗದಾತರನ್ನು ಎದುರು ಬದುರಾಗಿಸುವ ಉದ್ದೇಶದಿಂದ ಉದ್ಯೋಗ ಮೇಳ ನಡೆಸಲಾಗುತ್ತಿದೆ. ಇಲ್ಲಿ ಎಲ್ಲರಿಗೂ ಉದ್ಯೋಗ ದೊರೆಯಲು ಸಾಧ್ಯವಾಗುವುದಿಲ್ಲ. ಇಲ್ಲಿ ಉದ್ಯೋಗ ದೊರೆಯದಿದ್ದವರಿಗೆ ಕೌಶಲ್ಯಾಧಾರಿತ ತರಬೇತಿ ಕೊಡಿಸಲಾಗುವುದು. ತರಬೇತಿ ಪಡೆದುಕೊಂಡವರಲ್ಲಿ ಶೇ.70 ರಷ್ಟು ಜನರಿಗೆ ಉದ್ಯೋಗ ಕೊಡಲಾಗುವುದು. ಉಳಿದವರಿಗೆ ಸ್ವ ಉದ್ಯೋಗ ಸ್ಥಾಪಿಸಲು ಸರ್ಕಾರದಿಂದ ಆರ್ಥಿಕ ಸಹಾಯ ನೀಡಲಾಗುವುದು ಎಂದು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಎಂ.ಕೆ. ಶ್ರೀರಂಗಯ್ಯ ಮಾತನಾಡಿ, ಸರ್ಕಾರವು ಯುವ ಸಮುದಾಯಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಈ ಯೋಜನೆಗಳ ಮಾಹಿತಿ ಗ್ರಾಮೀಣ ಪ್ರದೇಶದವರಿಗೆ ತಿಳಿಯದೆ ಅವರು ಯೋಜನೆಗಳಿಂದ ವಂಚಿತರಾಗುತ್ತಿದ್ದಾರೆ ಎಂದರು.

ಅತೀ ಕಡಿಮೆ ಸಮಯದಲ್ಲಿ ಉದ್ಯೋಗ ಮೇಳ ಆಯೋಜಿಸಿದ್ದರಿಂದ ಹೆಚ್ಚಿನ ಪ್ರಚಾರ ದೊರೆಯದೆ ಮೇಳದಲ್ಲಿ ಭಾಗವಹಿಸಿರುವ ಯುವಜನತೆಯ ಸಂಖ್ಯೆ ಕಡಿಮೆ ಇದೆ. ಫೆಬ್ರವರಿ ಅಂತ್ಯದಲ್ಲಿ ಮತ್ತೂಂದು ಉದ್ಯೋಗ ಮೇಳ ಆಯೋಜಿಸಲಾಗುವುದು ಎಂದು ತಿಳಿಸಿದರು.

ಸಮಾರಂಭದಲ್ಲಿ ನಗರಸಭಾ ಅಧ್ಯಕ್ಷೆ ಶಿಲ್ಪಾ ರಾಜಶೇಖರ್‌, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಕೆ.ಡಿ. ಮಂಜುನಾಥ್‌, ಕೌಶಲ್ಯಾಭಿವೃದ್ಧಿ ಕೇಂದ್ರದ ಸಹಾಯಕ ನಿರ್ದೇಶಕ ಬಿ.ಕೆ. ರವೀಂದ್ರ ನಾಥ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next