Advertisement

ಚುನಾವಣಾ ಪ್ರಕ್ರಿಯೆ ವಿಶ್ವಾಸಾರ್ಹವಾಗಿರಲಿ

11:01 PM Apr 07, 2019 | sudhir |

ಮತಯಂತ್ರ ಅಥವಾ ಇವಿಎಂಗೆ ಮುತ್ತಿಕೊಂಡಿದ್ದ ವಿವಾದವೀಗ ಮತ ಖಾತರಿಪಡಿಸುವ ವಿವಿಪ್ಯಾಟ್‌ ಯಂತ್ರದತ್ತ ತಿರುಗಿದೆ. ಮತಯಂತ್ರಗಳನ್ನು ತಿರುಚಲು ಸಾಧ್ಯವಿದೆ, ಯಾವುದೇ ಗುಂಡಿ ಒತ್ತಿದರೂ ಒಬ್ಬನೇ ಅಭ್ಯರ್ಥಿಗೆ ಮತ ಬೀಳುವಂತೆ ಅದರಲ್ಲಿರುವ ಆಂತರಿಕ ವ್ಯವಸ್ಥೆಯನ್ನು ಬದಲಾ­ಯಿಸಿ­ಕೊಳ್ಳ­ಬಹುದು ಎಂಬ ಆರೋಪವನ್ನು ಪ್ರತಿಪಕ್ಷಗಳು ಮಾಡಿದಾಗ ಆಯೋಗ ವೋಟರ್‌ ವೆರಿಫ‌ಯಬಲ್‌ ಪೇಪರ್‌ ಆಡಿಟ್‌ ಟ್ರಯಲ್‌ ಎಂಬ ಈ ವ್ಯವಸ್ಥೆ ಜಾರಿಗೆ ತಂದಿದೆ. ನಾವು ಚಲಾಯಿಸಿದ ಮತ ನಾವು ಇಚ್ಚಿಸಿದ ಅಭ್ಯರ್ಥಿಗೆ ಬಿದ್ದಿದೆ ಎನ್ನುವುದನ್ನು ದೃಢಪಡಿಸುವುದು ಈ ಉಪಕರಣದ ಕೆಲಸ.

Advertisement

ವಿವಿಪ್ಯಾಟ್‌ನಿಂದ ಮುದ್ರಿತ ಚೀಟಿಯೊಂದು ಲಭ್ಯವಾಗುತ್ತದೆ. ಇದು ನಮ್ಮ ಮತ ಸರಿಯಾಗಿ ಚಲಾವಣೆಯಾಗಿದೆ ಎನ್ನುವುದನ್ನು ಖಾತರಿಪಡಿಸುತ್ತದೆ.
ಇದೀಗ ಪ್ರತಿಪಕ್ಷಗಳಿಗೆ ಆಕ್ಷೇಪ ಇರುವುದು ವಿವಿಪ್ಯಾಟ್‌ ಕಾರ್ಯ­ಕ್ಷಮತೆಯ ಮೇಲೆ ಅಲ್ಲ, ಬದಲಾಗಿ ವಿವಿಪ್ಯಾಟ್‌ ಮತ ರಶೀದಿಗಳನ್ನು ಎಣಿಸುವ ವಿಚಾರದಲ್ಲಿ.ಪಾರದರ್ಶಕತೆಯನ್ನು ಉಳಿಸಿಕೊಳ್ಳುವ ಸಲುವಾಗಿ ಪ್ರತಿ ಇವಿಎಂಗೆ ಜೋಡಿಸಲಾದ ವಿವಿಪ್ಯಾಟ್‌ನ ಮತ ರಶೀದಿಗಳನ್ನು ಇವಿಎಂ ನಲ್ಲಿ ದಾಖಲಾದ ಮತಗಳೊಂದಿಗೆ ಹೋಲಿಸಿ ನೋಡಿ ಫ‌ಲಿತಾಂಶವನ್ನು ಖಾತರಿಪಡಿಸಿಕೊಳ್ಳಬೇಕೆನ್ನುವುದು ವಿಪಕ್ಷಗಳ ವಾದ. ಚುನಾವಣ ಆಯೋಗ ಈ ಬೇಡಿಕೆ ತಿರಸ್ಕರಿಸಿದ ಬಳಿಕ ವಿವಾದ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ.

21 ಪ್ರತಿಪಕ್ಷಗಳ ಬೇಡಿಕೆಯನ್ನು ಪರಿಶೀಲಿಸುವ ಸಲುವಾಗಿ ಚುನಾವಣ ಆಯೋಗ ರಚಿಸಿದ್ದ ಸಮಿತಿ 479 ಐಚ್ಚಿಕವಾಗಿ ಆಯ್ಕೆ ಮಾಡಿದ ವಿವಿಪ್ಯಾಟ್‌ಗಳ ಮತ ಎಣಿಸುವುದರ ಮೂಲಕ ಶೇ.99.99 ಖಾತರಿಪಡಿಸಿಕೊಳ್ಳಬಹುದು ಎಂದು ವರದಿ ನೀಡಿದೆ. ಈ ವರದಿಯ ಬಗ್ಗೆಯೇ ಪ್ರತಿಪಕ್ಷಗಳಿಗೆ ಆಕ್ಷೇಪ ಇರುವುದು. 543 ಕ್ಷೇತ್ರಗಳಲ್ಲಿ 13.5 ಮತಯಂತ್ರಗಳು ಬಳಕೆಯಾಗಲಿವೆ. ಎಲ್ಲ ಮತಯಂತ್ರಗಳಿಗೆ ವಿವಿಪ್ಯಾಟ್‌ ಜೋಡಿಸಲು ಆಯೋಗ ನಿರ್ಧರಿ ಸಿದೆ.ಈ ಪೈಕಿ ಬರೀ 479 ವಿವಿಪ್ಯಾಟ್‌ಗಳ ಮತ ಎಣಿಸುವುದು ಎಂದರೆ ಕನಿಷ್ಠ ಕ್ಷೇತ್ರಕ್ಕೊಂದು ವಿವಿಪ್ಯಾಟ್‌ನ್ನು ಕೂಡ ಪರಿಶೀಲಿಸಿ­ದಂತಾಗುವುದಿಲ್ಲ. ಬರೀ ಶೇ.0.046 ವಿವಿಪ್ಯಾಟ್‌ಗಳ ಮತ ಎಣಿಸುವುದರಿಂದ ಚುನಾವಣೆಯ ಪಾರದರ್ಶಕತೆ ಮತ್ತು ಪಾವಿತ್ರ್ಯವನ್ನು ಕಾಪಾಡಲು ಸಾಧ್ಯವಿಲ್ಲ ಎನ್ನುವ ಪ್ರತಿಪಕ್ಷಗಳ ವಾದದಲ್ಲಿ ಹುರುಳಿಲ್ಲದಿಲ್ಲ. ಕನಿಷ್ಠ ಶೇ. 50 ವಿವಿಪ್ಯಾಟ್‌ಗಳನ್ನಾದರೂ ಎಣಿಸಬೇಕೆನ್ನುವುದು ಅವುಗಳ ವಾದ.

ಆದರೆ ಇಷ್ಟು ವಿವಿಪ್ಯಾಟ್‌ಗಳ ಮತ ಎಣಿಕೆ ಪ್ರಾಯೋಗಿಕವಾಗಿ ಸಾಧ್ಯವೇ ಎಂಬ ಪ್ರಶ್ನೆಯೂ ಎದುರಾಗುತ್ತದೆ. ಚುನಾವಣ ಆಯೋಗ ಹೇಳುವಂತೆ ಶೇ.50 ವಿವಿಪ್ಯಾಟ್‌ಗಳ ಮತ ಎಣಿಸಿದರೆ ಫ‌ಲಿತಾಂಶ ಪ್ರಕಟನೆ ಆರು ದಿನ ವಿಳಂಬವಾಗಬಹುದು. ಅಂದರೆ ಮೇ 29 ಅಥವಾ 30ರಂದಷ್ಟೇ ಫ‌ಲಿತಾಂಶದ ಪೂರ್ಣ ಚಿತ್ರಣ ಲಭ್ಯವಾಗಬಹುದು. ಈಗಾಗಲೇ ಚುನಾವಣ ಪ್ರಕ್ರಿಯೆ ಬಹಳ ದೀರ್ಘ‌ವಾಯಿತು ಎನ್ನುವ ತಕರಾರು ಇದೆ. ಹೀಗಿರುವಾಗ ಫ‌ಲಿತಾಂಶವನ್ನು ಇನ್ನಷ್ಟು ವಿಳಂಬಿಸುವುದು ಜನರ ಸಹನೆಯ ಪರೀಕ್ಷೆ ಯಾಗುತ್ತದೆ.

ಮತಯಂತ್ರಗಳಿಗೆ ಭದ್ರತೆ ನೀಡುವುದು, ಮತ ಎಣಿಕೆ ಸಿಬಂದಿ ಗಳ ನೇಮಕ ಇತ್ಯಾದಿ ಸಮಸ್ಯೆಗಳೂ ಇವೆ.ಅಲ್ಲದೆ ಇದು ಹಿಂದಿನಂತೆ ಮತ ಗಳನ್ನು ಚುನಾವಣ ಅಧಿಕಾರಿಗಳು ಎಣಿಸುವ ಪ್ರಕ್ರಿಯಾಗಿರುವುದರಿಂದ ನಾವು ಮರಳಿ ಮತಪತ್ರಗಳ ಕಾಲಕ್ಕೆ ಹೋದಂತಾಗುತ್ತದೆ. ಈ ಸಂದರ್ಭದಲ್ಲಿ ಮಾನವ ಸಹಜ ತಪ್ಪುಗಳಾಗುವ ಸಾಧ್ಯತೆಯೂ ಇದೆ.

Advertisement

ಚುನಾವಣೆಯ ಪಾವಿತ್ರ್ಯವನ್ನು ಉಳಿಸುವುದಕ್ಕಾಗಿ ಫ‌ಲಿತಾಂಶ ಆರು ದಿನ ವಿಳಂಬವಾಗುವುದನ್ನು ಸಹಿಸಿಕೊಳ್ಳಲು ತಯಾರಿದ್ದೇವೆ ಎಂದು ಪ್ರತಿಪಕ್ಷಗಳು ಹೇಳುತ್ತಿದ್ದರೂ ನಾವು ಹಿಮ್ಮುಖವಾಗಿ ಚಲಿಸುವುದು ಬುದ್ಧಿವಂತಿಕೆಯಲ್ಲ. ಆದರೆ ಆಕ್ಷೇಪಗಳನ್ನು ಪರಿಗಣಿಸಿ ಹೇಳುವುದಾದರೆ ಮತಯಂತ್ರದ ವಿಶ್ವಾಸಾ­ರ್ಹತೆಯನ್ನು ಖಾತರಿ ಪಡಿಸಿಕೊಳ್ಳುವ ಸಲುವಾಗಿ ಮಾರ್ಗೋಪಾಯ ಕಂಡುಕೊಳ್ಳಬೇಕಾಗಿ­ರುವುದು ಅಗತ್ಯ ಮತ್ತು ತುರ್ತಾಗಿ ಆಗಬೇಕು.

ಸಮಿತಿ 479 ವಿವಿಪ್ಯಾಟ್‌ಗಳ ಮತ ಎಣಿಸಲು ಶಿಫಾರಸು ಮಾಡಿದ್ದರೂ ಚುನಾವಣ ಆಯೋಗ ಈಗಾಗಲೇ ಕನಿಷ್ಠ ವಿಧಾನಸಭೆಗೊಂದರಂತೆ ವಿವಿಪ್ಯಾಟ್‌ ಮತ ಎಣಿಸುವ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ಅಂದರೆ 4125 ವಿವಿಪ್ಯಾಟ್‌ಗಳ ಮತ ಎಣಿಸುವ ಕಾರ್ಯಸಾಧ್ಯತೆಯನ್ನು ಪರಿಶೀಲಿಸುತ್ತಿದೆ.

ಇದು ಸಾಧ್ಯವಾದರೆ ಸಮಿತಿ ಹೇಳಿರುವುದಕ್ಕಿಂತ ಹಲವು ಪಟ್ಟು ಹೆಚ್ಚು ವಿವಿಪ್ಯಾಟ್‌ಗಳ ಮತ ಎಣಿಸಿದಂತಾಗುತ್ತದೆ. 2017ರಲ್ಲಿ ವಿವಿಪ್ಯಾಟ್‌ ವ್ಯವಸ್ಥೆ ಪ್ರಾರಂಭಿಸಿದ ಬಳಿಕ 1500 ವಿವಿಪ್ಯಾಟ್‌ಗಳನ್ನು ಪರಿಶೀಲನೆಗೊಳಪಡಿ­ಸಲಾ­ಗಿದೆ. ಎಲ್ಲ ಸಂದರ್ಭದಲ್ಲೂ ಶೇ. 99.99 ನಿಖರ ಫ‌ಲಿತಾಂಶ ಬಂದಿದೆ ಎಂದು ಆಯೋಗ ಹೇಳುತ್ತಿದೆ. ಈ ಹಿನ್ನೆಲೆಯಲ್ಲಿ ಶೇ. 5 ವಿವಿಪ್ಯಾಟ್‌ಗಳನ್ನು ಪರಿಶೀಲಿ­ಸುವ ಸಲಹೆಯನ್ನು ಈ ಚುನಾವಣೆಯಲ್ಲಿ ಪರಿಗಣಿಸಬಹುದು. ಆದರೆ ಈ ವಿವಿಪ್ಯಾಟ್‌ಗಳ ಆಯ್ಕೆ ಅತ್ಯಂತ ಸಮರ್ಪಕವೂ ಸಮುಚಿತವೂ ಆಗಿರಬೇಕು.

ಒಟ್ಟಾರೆಯಾಗಿ ನಮ್ಮ ಚುನಾವಣ ಪ್ರಕ್ರಿಯೆಯಲ್ಲಿ ಜನರಿಗೆ ವಿಶ್ವಾಸ ನಷ್ಟವಾಗದಂತೆ ನೋಡಿಕೊಳ್ಳಬೇಕಾಗಿರುವುದು ಆಯೋಗ ಮಾತ್ರವಲ್ಲದೆ ಸರಕಾರದ ಹೊಣೆಯೂ ಹೌದು.

Advertisement

Udayavani is now on Telegram. Click here to join our channel and stay updated with the latest news.

Next