Advertisement

ಬರಪೀಡಿತ ಪ್ರದೇಶ ಘೋಷಣೆಯಾಗಲಿ

11:32 AM Aug 07, 2018 | Team Udayavani |

ಬೀದರ: ಜಿಲ್ಲೆಯ ಬೀದರ್‌ ತಾಲೂಕು ಹಾಗೂ ಹುಮನಾಬಾದ ತಾಲೂಕಿನಲ್ಲಿ ಹೆಚ್ಚು ಪ್ರಮಾಣದಲ್ಲಿ ಮಳೆ ಕೊರತೆ ಎದುರಾಗಿದ್ದು, ಎರಡು ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಸರ್ಕಾರ ಘೋಷಿಸಬೇಕೆಂದು ರೈತರು ಆಗ್ರಹಿಸಿದ್ದಾರೆ.

Advertisement

ಸದ್ಯ ಜಿಲ್ಲೆಯಲ್ಲಿ ಶೇ.27.85ರಷ್ಟು ಮಳೆ ಕೊರತೆ ಇದೆ. ಬೀದರ ತಾಲೂಕಿನಲ್ಲಿ ಸರಾಸರಿ 390 ಮಿ.ಮೀ. ಪೈಕಿ 186 ಮಿ.ಮೀ. ಮಳೆಯಾಗಿದ್ದು, ಶೇ.52ರಷ್ಟು ಮಳೆ ಕೊರತೆ ಉಂಟಾಗಿದೆ. ಅದೇರೀತಿ ಹುಮನಾಬಾದ ತಾಲೂಕಿನಲ್ಲಿ ಮುಂಗಾರು ಮಳೆ 330 ಮಿ.ಮೀ. ಪೈಕಿ 231 ಮಿ.ಮೀ. ಮಳೆ ಸುರಿದಿದ್ದು, ಶೇ.32.81 ಕೊರತೆ ಉಂಟಾದ ಪರಿಣಾಮ ಉದ್ದು, ಹೆಸರು ಬೆಳೆಗಳು ಹಾಳಾಗುವ ಸ್ಥಿತಿಗೆ ಬಂದಿವೆ. ಸದ್ಯ ಬೆಳೆಗಳು ನೋಡಲು ಉತ್ತಮವಾಗಿ ಹಸಿರಾಗಿ ಕಾಣುತ್ತಿದ್ದರೂ ಇಳುವರಿಯಲ್ಲಿ ಶೇ.50ರಷ್ಟು ಹಾಳಾಗುವ ಸಾಧ್ಯತೆ ಇದೆ.

ಮುಂಗಾರು ಮಳೆ ಆರಂಭದಲ್ಲಿ ಉತ್ತಮವಾಗಿ ಸುರಿದಿದ್ದರಿಂದ ರೈತರು ಉತ್ಸಾಹದಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಬಳಿಕ ಜಿಲ್ಲೆಯ ಅಲ್ಲಲ್ಲಿ ಸ್ವಲ್ಪ ಮಟ್ಟಿಗೆ ಮಳೆ ಸುರಿದು ಭರವಸೆ ಮೂಡಿಸಿತು. ಜೂನ್‌ ಅಂತ್ಯದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಮಳೆ ಆಗಿದೆ. ಬಳಿಕ ಸ್ಥಗಿತಗೊಂಡ ಮಳೆ ಇತ್ತ ಸುಳಿಯುತ್ತಲೂ ಇಲ್ಲ. ಕೆಲ ಕಡೆ ತುಂತುರು ಹನಿ ಚೆಲ್ಲಿದರೂ ಪ್ರಯೋಜನವಾಗುತ್ತಿಲ್ಲ.

ಆಕಾಶದಲ್ಲಿ ಪ್ರತಿನಿತ್ಯ ಕರಿ ಮೋಡಗಳು ಸಂಚರಿಸುತ್ತಿದ್ದರೂ ಕೂಡ ಮಳೆಯಾಗುತ್ತಿಲ್ಲ. ಬಿತ್ತಿದ್ದ ಬೆಳೆ ಕಣ್ಣೆದುರಿಗೆ ಒಣಗುತ್ತಿರುವುದನ್ನು ನೋಡಿ ರೈತರು ಅಕ್ಷರಶಃ ಮರುಗುತ್ತಿದ್ದು, ಈ ಬಾರಿ ಖಾಯಂ ಬರಗಾಲವಾಗಲಿದೆಯೇ ಎಂಬ ಆತಂಕ ರೈತರನ್ನು ಕಾಡುತ್ತಿದೆ. ಮಳೆ ಆಶ್ರಿತ ಬೆಳೆ ಬೆಳೆಯುವ ರೈತರ ಪ್ರಮಾಣ ಹೆಚ್ಚಿದ್ದು, ಹೊಲದಲ್ಲಿ ತೆವಾಂಶ
ಕೊರತೆಯಿಂದ ಸಂಕಷ್ಟ ಎದುರಿಸುವಂತಾಗಿದೆ. 

ಜಿಲ್ಲಾ ಪಂಚಾಯತ, ತಾಲೂಕು ಪಂಚಾಯತ್‌ ಹಾಗೂ ಗ್ರಾಮ ಪಂಚಾಯತ ಅಧಿಕಾರಿಗಳು ಸದ್ಯ ಸ್ವತ್ಛ ಭಾರತ ಅಭಿಯಾನದ ಶೌಚಾಲಯ ನಿರ್ಮಾಣದ ಗುರಿ ಮುಟ್ಟುವ ತವಕದಲ್ಲಿದ್ದಾರೆ. ಉದ್ಯೋಗ ಖಾತ್ರಿ ಕೆಲಸ ಕೇಳಲು ಗ್ರಾಪಂಗಳಿಗೆ ತೆರಳುವ ಜನರಿಗೆ ಇದೀಗ ಶೌಚಾಲಯ ನಿರ್ಮಾಣದ ಅವಧಿ, ಇದು ಮುಗಿದ ನಂತರ ಉದ್ಯೋಗ
ಖಾತ್ರಿ ಕೆಲಸ ಎನ್ನುತ್ತಿದ್ದಾರೆ ಎಂದು ಅನೇಕರು ಆರೋಪಿಸುತ್ತಿದ್ದಾರೆ.

Advertisement

ರೈತರಿಗೆ ನೆರವು ನೀಡಿ: ಈ ಹಿಂದೆ ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿದ ಸರ್ಕಾರಗಳು ರೈತರ ನೆರವಿಗೆ ಧಾವಿಸಿಲ್ಲ. ಬರಗಾಲದ ಹೆಸರಲ್ಲಿ ರಸ್ತೆ ನಿರ್ಮಾಣ, ಅರಣ್ಯ ಪ್ರದೇಶಗಳಲ್ಲಿ ಗುಂಡಿ ತೋಡುವ ಕಾರ್ಯ ಮಾಡಿ ಸರ್ಕಾರದ ಅನುದಾನ ಖರ್ಚು ಮಾಡುತ್ತಿದ್ದಾರೆ ಹೊರೆತು ರೈತರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ನಡೆದಿಲ್ಲ. ಬರ ಎದುರಾದಾಗ ರೈತರ ಹೊಟ್ಟೆ ತುಂಬಿಸುವ ಕೆಲಸವನ್ನು ಯಾವತ್ತೂ ಯಾವ ಸರ್ಕಾರವೂ ಮಾಡಿಲ್ಲ. ಸದ್ಯ ಹೊಲದಲ್ಲಿ
ಬೆಳೆಗಳು ಒಣಗುತ್ತಿವೆ. ಸಾಲ-ಸೋಲ ಮಾಡಿದ ರೈತರು ಸಂಕಷ್ಟ ಎದುರಿಸುವಂತಾಗಿದೆ. ಜೀವನಕ್ಕೆ ಆಸರೆಯಾದ ಹೊಲಗಳನ್ನು ರೈತರು ಮಾರಾಟ ಮಾಡಿ ನಗರ ಪ್ರದೇಶ ಸೇರುತ್ತಿದ್ದಾರೆ. ಇದಕ್ಕೆ ಸರ್ಕಾರದ ನೀತಿಗಳೆ ಕಾರಣ. ಬರ ಸಂದರ್ಭದಲ್ಲಿ ಸರ್ಕಾರ ಬೆಳೆ ಪರಿಹಾರ ನೀಡುವ ಜೊತೆಗೆ ರೈತ ಕುಟುಂಬಗಳು ಹಾಗೂ ಜಾನುವಾರುಗಳ ಹೊಟ್ಟೆ
ತುಂಬಿಸಬೇಕು ಎಂದು ಹುಮನಾಬಾದ ತಾಲೂಕು ರೈತ ಸಂಘದ ಅಧ್ಯಕ್ಷ ಸತೀಶ ನನೂರೆ ಆಗ್ರಹಿಸಿದ್ದಾರೆ.

ಅಧಿಕಾರಿಗಳ ನಿರ್ಲಕ್ಷ್ಯ ಮಳೆ ಕೊರತೆಯಿಂದ ಕೃಷಿ ಕೂಲಿಕಾರರು ಸಮಸ್ಯೆ ಎದುರಿಸುತ್ತಿದ್ದಾರೆ. ನಿಗದಿತ ಪ್ರಮಾಣದಲ್ಲಿ ಈ ವರ್ಷ ಮಳೆ ಸುರಿಯದ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧೆಡೆ ಕೂಲಿ ಕಾರ್ಮಿಕರ ಕೈಗೆ ಕೆಲಸ ಇಲ್ಲದಂತಾಗಿದ್ದು, ಶೋಚನೀಯ ಸ್ಥಿತಿ ನಿರ್ಮಾಣವಾಗುತ್ತಿದೆ. ಬಿತ್ತನೆ ಕಾರ್ಯ ಪೂರ್ಣಗೊಂಡ ನಂತರ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡುವುದಾಗಿ ಹೇಳಿದ ಅಧಿಕಾರಿಗಳು ಉದ್ಯೋಗ ಖಾತ್ರಿ ಕಡೆ ಗಮನ ಹರಿಸುತ್ತಿಲ್ಲ

ಈ ವರ್ಷ ಆರಂಭದಲ್ಲಿ ಉತ್ತಮ ಮಳೆ ಆಗಿದ್ದು, ಉತ್ತಮ ಬೆಳೆ ನಿರೀಕ್ಷೆಯಲ್ಲಿದ್ದೆವು. ಆದರೆ, ಎರಡು ತಿಂಗಳಿಂದ ಮಳೆ ಕೊರತೆ ಎದುರಾಗಿದ್ದು, ಬಿತ್ತಿದ ಬೆಳೆಗಳು ಹಾಳಾಗುತ್ತಿವೆ. ಹೆಸರು, ಉದ್ದು ಬೆಳೆಗಳು ಸಂಪೂರ್ಣ ಹಾಳಾಗುವ ಸ್ಥಿತಿಯಲ್ಲಿವೆ. ಕೂಡಲೆ ಸರ್ಕಾರ ಬರಪೀಡಿತ ಪ್ರದೇಶವೆಂದು ಘೋಷಿಸಿ ರೈತರಿಗೆ ಸ್ಪಂದಿಸಬೇಕು.
 ಶ್ರೀಮಂತ ಪಾಟೀಲ ತಾಪಂ ಸದಸ್ಯ ತಾಳಮಡಗಿ

ಜಿಲ್ಲೆಯಲ್ಲಿ ಈ ವರ್ಷ ಸರಾಸರಿ ಮಳೆ ಪ್ರಮಾಣದಲ್ಲಿ ಸಾಕಷ್ಟು ಕೊರತೆ ಎದುರಾಗಿದೆ. ಸದ್ಯ ಬೀದರ ತಾಲೂಕು ಹಾಗೂ ಹುಮನಾಬಾದ ತಾಲೂಕಿನಲ್ಲಿ ಹೆಚ್ಚು ಪ್ರಮಾಣದ ಮಳೆ ಕೊರತೆಯಿಂದ ಉದ್ದು, ಹೆಸರು ಬೆಳಗಳಲ್ಲಿ ಕಡಿಮೆ ಇಳುವರಿ ಬರುವ ಸಾಧ್ಯತೆ ಇದೆ. ಮುಂದಿನ ನಾಲ್ಕು ದಿನಗಳಲ್ಲಿ ಮಳೆ ಸುರಿಯದಿದ್ದರೆ ಬೆಳೆಗಳು ಒಣಗುವ  ಸ್ಥಿತಿಗೆ ತಲುಪಬಹುದು. ಕೆಲ ದಿನಗಳು ಕಾದು ಮುಂದಿನ ಕ್ರಮಕ್ಕೆ ಸರ್ಕಾರಕ್ಕೆ ವರದಿ ನೀಡಲಾಗುವುದು.
 ಜಿಯಾ ಉಲ್‌ ಹಕ್‌ ಕೃಷಿ ಜಂಟಿ ನಿರ್ದೇಶಕ

„ದುರ್ಯೋಧನ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next