Advertisement
ನೂರಾರು ವರ್ಷಗಳ ಇತಿಹಾಸವಿರುವ ಕೋಲಾರ ಚಿನ್ನದ ಗಣಿಗಳಿಂದ ಚಿನ್ನ ಸಂಸ್ಕರಿಸಿದ ಸೈನೆಡ್‌ಧೂಳನ್ನು ಬೆಟ್ಟದಂತೆ ಕೆಜಿಎಫ್ ನಗರದ ಸುತ್ತಲೂ ಹಾಕಲಾಗಿದೆ. ಈ ಗುಡ್ಡದಿಂದ ಪ್ರತಿ ಗಾಳಿ ಕಾಲದಲ್ಲಿ ಸೈನೆಡ್ ಮಿಶ್ರಿತ ಧೂಳು ಇಡೀ ನಗರವನ್ನು ಆವರಿಸುವ ಮೂಲಕ ಜನರಲ್ಲಿ ಸಿಲಿಕಾಸಿಸ್ ಎಂಬ ಅಪಾಯಕಾರಿ ಶ್ವಾಸಕೋಶ ಸಂಬಂಧಿ ಕಾಯಿಲೆಗೆ ಕಾರಣವಾಗುತ್ತಿತ್ತು. ಹಲವು ದಶಕಗಳಿಂದ ಈ ಸಮಸ್ಯೆ ಇದ್ದರೂ ಯಾರೂ ಶಾಶ್ವತ ಪರಿಹಾರ ಹುಡುಕಿರಲಿಲ್ಲ.
Related Articles
Advertisement
ಕ್ರಿಯಾ ಯೋಜನೆ: ಕೋಲಾರದ ಪರಿಸರವಾದಿ ಕೆ.ಎನ್.ತ್ಯಾಗರಾಜು ಇದಕ್ಕೊಂದು ಕ್ರಿಯಾ ಯೋಜನೆ ರೂಪಿಸಿದ್ದು, ಈಗಾಗಲೇ ಪ್ರಾಯೋಗಿಕವಾಗಿ 650 ಸಸಿಗಳಿಗೆ ಅಗತ್ಯ ಗೊಬ್ಬರ, ಪೋಷಕಾಂಶ ನೀಡುವ ಕೆಲಸವನ್ನು ವಾರಾಂತ್ಯಗಳಲ್ಲಿ ನಡೆಸುತ್ತಿದ್ದಾರೆ. ಇದಕ್ಕಾಗಿ ಅರಣ್ಯ ಇಲಾಖೆ, ಕೆಜಿಎಫ್ ನಗರಸಭೆ ಸೇರಿದಂತೆ ಎನ್‌ಸಿಸಿ, ಸ್ಕೌಟ್ಸ್‌ಗೈಡ್ಸ್, ಬಿಜಿಎಂಎಲ್, ಬಹುರಾಷ್ಟ್ರೀಯ ಕಂಪನಿಗಳ ಉದ್ಯೋಗಿಗಳನ್ನೊಳಗೊಂಡ ಪರ್ವ, ಸಮರ್ಥ್ ಭಾರತ ಇತ್ಯಾದಿ ಸ್ವಯಂ ಸೇವಾ ಸಂಸ್ಥೆಗಳು ಕೈಜೋಡಿಸಿ ಶ್ರಮದಾನ ನಡೆಸಿದೆ.
ಇದೇ ತಂಡವನ್ನು ಬಳಸಿಕೊಂಡು ಸೈನೆಡ್ ಗುಡ್ಡದ ಮೇಲೆ ಇರುವ ಎಲ್ಲಾ ಸಸಿಗಳಿಗೂ ಗೊಬ್ಬರ, ನೀರು, ಪೋಷಕಾಂಶ ನೀಡುವುದು ಮತ್ತು ಸೈನೆಡ್ ಗುಡ್ಡದ ಇಳಿಜಾರಿನಲ್ಲಿ ಬಳ್ಳಿ ಗಿಡಗಳನ್ನು ಬೆಳೆಸುವ ಕ್ರಿಯಾ ಯೋಜನೆ ರೂಪಿಸಲಾಗಿದೆ.
ನೀರು ಗೊಬ್ಬರ: ಸೈನೆಡ್ ಗುಡ್ಡದ ಮೇಲೆ ಸುರಿಯುವ ಮಳೆ ನೀರು ಇಳಿಜಾರಿನಲ್ಲಿ ಹರಿದು ಕೆಳಕ್ಕೆ ಬರುವುದರಿಂದ ಗುಡ್ಡದಲ್ಲಿ ದೊಡ್ಡ ಗಾತ್ರದ ಕೊರಕಲು, ಕಂದಕಗಳು ನಿರ್ಮಾಣವಾಗುತ್ತಿವೆ. ಇಂತ ಕೊರಕಲು, ಕಂದಕಗಳಿಗೆ ಸ್ಥಳೀಯವಾಗಿ ಸಿಗುವ ಕಲ್ಲುಗಳನ್ನೇ ಬಳಸಿ ಕೊಂಡು ತಡೆ ಗೋಡೆ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಸೈನೆಡ್‌ಗುಡ್ಡದ ಮೇಲೆ ಸುರಿಯುವ ಮಳೆ ನೀರು ಅಲ್ಲಿಯೇ ಉಳಿಯುವಂತೆ ಮಾಡಲಾಗುತ್ತದೆ.
ನಗರಸಭೆಯಿಂದ ಗೊಬ್ಬರ: ಮಳೆ ನೀರು ನಿಂತು ಗಿಡಗಳಿಗೆ ಅಗತ್ಯವಾಗಿರುವ ತೇವಾಂಶವನ್ನು ಒದಗಿಸುತ್ತದೆ. ಹೀಗೆ ತೇವಾಂಶ ಒದಗಿಸಿದ ನಂತರ, ಕೆಜಿಎಫ್ನ ರಾಬರ್ಟ್‌ಸನ್ ಕಸದಿಂದ ತಯಾರಿಸುತ್ತಿರುವ ಗೊಬ್ಬರವನ್ನು ಗಿಡಗಳಿಗೆ ನೀಡಬೇಕಾಗುತ್ತದೆ. ಪ್ರಾಯೋಗಿಕವಾಗಿ ನಗರಸಭೆ ನೀಡಿರುವ ಒಂದು ಟ್ರ್ಯಾಕ್ಟರ್ ಗೊಬ್ಬರವನ್ನು ಸ್ವಯಂ ಸೇವಾ ಸಂಸ್ಥೆಗಳ ಕಾರ್ಯಕರ್ತರು 650 ಗಿಡಗಳಿಗೆ ಹಾಕಿದ್ದಾರೆ.
ಧೂಳಿನ ಸಮಸ್ಯೆಗೆ ಪರಿಹಾರ: ನೀರು, ಗೊಬ್ಬರದ ನಂತರ ಸೈನೆಡ್ ಗುಡ್ಡಗಳ ಇಳಿಜಾರಿನಲ್ಲಿ 10 ರಿಂದ 15 ಜಾತಿಯ ಬಳ್ಳಿ ಗಿಡಗಳನ್ನು ಮೇಲ್ಭಾಗದಿಂದ ಕೆಳಭಾಗದವರೆಗೂ ಹರಡುವಂತೆ ಬೆಳೆಸಿದರೆ ಧೂಳಿನ ಸಮಸ್ಯೆ ಸಂಪೂರ್ಣವಾಗಿ ನಿಲ್ಲಿಸಬಹುದಾಗಿದೆ. ಜೊತೆಗೆ, ಮಳೆಗಾಲದಲ್ಲಿ ಸೈನೆಡ್ ಗುಡ್ಡ ಕೊರಕಲುಗಳ ಮೂಲಕ ನಗರದ ಚರಂಡಿಗಳನ್ನು ತುಂಬಿ ಮಾಡುತ್ತಿದ್ದ ಹಾನಿಯನ್ನು ನಿವಾರಣೆ ಮಾಡಬಹುದಾಗಿದೆ. ಈ ಪ್ರಾಯೋಗಿಕ ಕಾರ್ಯವನ್ನು ಮಾಡಲು ವಿವಿಧ ಸ್ವಯಂ ಸೇವಾ ಸಂಸ್ಥೆಯ ನೂರಾರು ಮಂದಿ ತಯಾರಾಗಿದ್ದು, ಇದಕ್ಕಾಗಿ ವಾರಾಂತ್ಯದಲ್ಲಿ ಕೆಜಿಎಫ್ ಸ್ವರ್ಣ ಕೆರೆಯಿಂದ ಫಲವತ್ತಾದ ಮಣ್ಣನ್ನು ಗೊಬ್ಬರದೊಂದಿಗೆ ಮಿಶ್ರಣ ಮಾಡಿ ಸಾಗಿಸಲು ಟ್ರ್ಯಾಕ್ಟರ್ ಮತ್ತಿತರ ಸಲಕರಣೆಗಳನ್ನು ಒದಗಿಸಬೇಕಾಗುತ್ತದೆ. ಇದಕ್ಕಾಗಿ ಜಿಲ್ಲಾಡಳಿತ, ನಗರಸಭೆ, ಅರಣ್ಯ ಇಲಾಖೆ, ಬಿಜಿಎಂಎಲ್ ಆಡಳಿತ ಮಂಡಳಿ ಅಗತ್ಯನೆರವು ನೀಡಬೇಕಾಗಿದೆ.
● ಕೆ.ಎಸ್.ಗಣೇಶ್