ಕೂಡಲಸಂಗಮ: ಲಿಂಗಾಯತರ ಧರ್ಮ ಕ್ಷೇತ್ರ ಕೂಡಲಸಂಗಮ ಇನ್ನೂ ಅಧಿಕ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದುವ ಅಗತ್ಯವಿದೆ. ಮಲೆಮಹಾದೇಶ್ವರ ಬೆಟ್ಟ, ಯಡಿಯೂರು ಕ್ಷೇತ್ರಗಳಿಗೆ ಹೋಲಿಸಿದರೆ ಸುಕ್ಷೇತ್ರದಲ್ಲಿ ಅಭಿವೃದ್ಧಿಯ ಅಗತ್ಯ ಎಂದು ಕೂಡಲಸಂಗಮ ಬಸವ ಧರ್ಮ ಪೀಠದ ಮಹಾದೇಶ್ವರ ಸ್ವಾಮೀಜಿ ಹೇಳಿದರು.
ಸಂಗಮೇಶ್ವರ ಜಾತ್ರೆಯ ನಿಮಿತ್ತ ಸೋಮವಾರ ರಾತ್ರಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಲಿಂಗಾನಂದ ಸ್ವಾಮೀಜಿ, ಮಾತೆ ಮಹಾದೇವಿ 1988ರಲ್ಲಿ ಶರಣ ಮೇಳ ಕಾರ್ಯಕ್ರಮದ ಮೂಲಕ ಸುಕ್ಷೇತ್ರವನ್ನು ನಾಡಿಗೆ ಪರಿಚಯಿಸಿದರು. 1998ರಲ್ಲಿ ಜೆ.ಎಚ್. ಪಟೇಲ ಮಂಡಳಿ ಸ್ಥಾಪಿಸುವ ಮೂಲಕ ಸುಕ್ಷೇತ್ರವನ್ನು ಅಭಿವೃದ್ಧಿಪಡಿಸಿದರು. ಮಂಡಳಿಯಿಂದ ನಿರಂತರ ದಾಸೋಹ ನಡೆಯುತ್ತಿದ್ದು, ಸಮಯ ನಿಗದಿ ಮಾಡಿರುವುದು ಸರಿಯಲ್ಲ. ಬೆಳಗ್ಗೆಯಿಂದ ರಾತ್ರಿಯವರೆಗೆ ನಿರಂತರ ದಾಸೋಹ ನಡೆಸಿದರೆ ಭಕ್ತರಿಗೆ ಅನುಕೂಲವಾಗುವುದು ಎಂದರು.
ಸಾನಿಧ್ಯ ವಹಿಸಿ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಭಕ್ತರ ಮನ, ಮನೆ ಸ್ವತ್ಛಗೊಳಿಸುವ ಉದ್ದೇಶದಿಂದ ನಮ್ಮ ಪೂರ್ವಜರು ಜಾತ್ರೆ ನಡೆಸಿಕೊಂಡು ಬಂದಿದ್ದಾರೆ. ನಮ್ಮ ಸಂಸ್ಕೃತಿ, ಪರಂಪರೆ ಮುಂದಿನ ತಲೆಮಾರಿಗೆ ಜಾತ್ರೆಯ ಮೂಲಕ ಮುಂದುವರಿಸಿಕೊಂಡು ಹೊಗುವ ಕಾರ್ಯ ಮಾಡಬೇಕು. ಜನಪ್ರತಿನಿ ಧಿಗಳು ಜಾತ್ರೆಯ ಕಾರ್ಯಕ್ರಮದಲ್ಲಿ ಪಾಲ್ಗೊಳಬೇಕು ಎಂದರು.
ಕೂಡಲಸಂಗಮ ಸಾರಂಗ ಮಠದ ಅಭಿನವ ಜಾತವೇದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಜಾತ್ರೆಯ ನಿಮಿತ್ತ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಗ್ರಾಮಸ್ಥರು ಸಹಕಾರ ಕೊಡುವ ಮೂಲಕ ಯಶಸ್ವಿಗೊಳಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಆಯುಕ್ತ ರಘು ಎ.ಈ. ಮಾತನಾಡಿ, ಕೋವಿಡ್ ಕಾರಣ ಎರಡು ವರ್ಷ ಜಾತ್ರೆ ನಡೆದಿರಲಿಲ್ಲ, ಈ ವರ್ಷದ ಜಾತ್ರೆಯನ್ನು ಸಡಗರ-ಸಂಭ್ರಮದಿಂದ ಆಚರಿಸುತ್ತೇವೆ ಎಂದರು.
ತಹಶೀಲ್ದಾರ್ ಶಿವಕುಮಾರ ಬಿರಾದರ, ವ್ಯವಸ್ಥಾಪಕ ಬಿ.ಎಸ್.ಕಳ್ಳಿ, ಶಿರಸ್ತೆದಾರ ಜೆ.ಎಸ್. ಚಿನಿವಾಲರ್ ಮುಂತಾದವರು ಇದ್ದರು.
ಆದಪ್ಪ ಗೊರಚಿಕ್ಕನವರ ಸ್ವಾಗತಿಸಿ, ನಿರೂಪಿಸಿದರು, ವಿಜಯ ಕೋಟೂರ ವಂದಿಸಿದರು. ಸಮಾರಂಭದ ನಂತರ ಇಂದುಮತಿ ಸಾಲಿಮಠ, ಮಹಾದೇವ ಸತ್ತಿಗೇರಿ ಅವರಿಂದ ನಗೆ ಹಬ್ಬ ಕಾರ್ಯಕ್ರಮ ನಡೆಯಿತು.