Advertisement

ಜನಸಾಮಾನ್ಯರಿಗೆ ಅಭಿವೃದ್ಧಿ ಲಾಭ ನೇರವಾಗಿ ತಲುಪಲಿ

03:28 PM Jul 07, 2019 | Team Udayavani |

ಗದಗ: ಜನಸಾಮಾನ್ಯರಿಗೆ ಅಭಿವೃದ್ಧಿಯ ಲಾಭ ನೇರವಾಗಿ ತಲುಪಬೇಕು. ಸ್ಥಳೀಯ ಸಮಸ್ಯೆಗಳಿಗೆ ಅಲ್ಲೇ ಪರಿಹಾರ ಒದಗಿಸುವಂತಾಗಬೇಕು ಎಂಬುದೇ ರಾಜ್ಯ ಪಂಚಾಯತರಾಜ್‌ ವ್ಯವಸ್ಥೆಯ ವಿಕೇಂದ್ರೀಕರಣದ ಆಶಯ.ಅದಕ್ಕೆ ಪೂರಕವಾಗುವಂತೆ ಗ್ರಾ.ಪಂ. ತಾ.ಪಂ. ಹಾಗೂ ಜಿ.ಪಂ. ಮಟ್ಟದಲ್ಲಿ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕಿದೆ ಎಂದು ಜಿ.ಪಂ. ಅಧ್ಯಕ್ಷ ಎಸ್‌.ಪಿ.ಬಳಿಗಾರ ಸೂಚಿಸಿದರು.

Advertisement

ಗದಗ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ನಡೆದ ಪಂಚಾಯತ ರಾಜ್‌ ವ್ಯವಸ್ಥೆಯಲ್ಲಿ ವಿಕೇಂದ್ರಿಕೃತ ಯೋಜನಾ ಅನುಷ್ಠಾನ ಕುರಿತು ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಕಾರ್ಯಗಾರ ಉದ್ದೇಶಿಸಿ ಅವರು ಮಾತನಾಡಿದರು. ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಕೇರಳ ಸರ್ಕಾರದ ನಿವೃತ್ತಿ ಮುಖ್ಯ ಕಾರ್ಯದರ್ಶಿ ವಿಜಯಾನಂದ ಮಾತನಾಡಿ, ಪ್ರತಿಯೊಂದು ಇಲಾಖೆಯ ಸಂಬಂಧ ಪಟ್ಟ ಯೋಜನೆಗಳ ಕುರಿತು ಅಧಿಕಾರಿಗಳು ಜನರ ಆಶಯ ಮತ್ತು ಅವಶ್ಯಕತೆ ಅರಿತು ನಿಷ್ಠೆಯಿಂದ ಕಾರ್ಯ ನಿರ್ವಹಿಸಲು ನಾಯಕತ್ವ ಗುಣ ಹಾಗೂ ಆತ್ಮಸ್ಥೈರ್ಯವನ್ನು ಬೆಳೆಸಿಕೊಳ್ಳಬೇಕು ಎಂದರು.

ಗ್ರಾಮದ ಜನತೆಗೆ ಕನಿಷ್ಠ ಮೂಲ ಸೌಕರ್ಯ ಒದಗಿಸುವುದರ ಜೊತೆಗೆ ಮಕ್ಕಳ ಶಿಕ್ಷಣ, ಸಾರ್ವಜನಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಬಡ ಕುಟುಂಬಗಳನ್ನು ಗುರುತಿಸಿ, ಅವರ ಸುಧಾರಣೆಗೆ ಕ್ರಮವಹಿಸಬೇಕು. ಗ್ರಾಮ ಪಂಚಾಯತ ಮಟ್ಟದ ಅಧಿಕಾರಿಗಳು ನಿಗದಿತವಾಗಿ ಗ್ರಾಮ ಸಭೆ ನಡೆಸಿ, ಅಭಿವೃದ್ಧಿಯ ಕುರಿತು ಜನರಿಗೆ ಮಾಹಿತಿ ನೀಡಬೇಕು. ಜೊತೆಗೆ ಅವರ ಸಮಸ್ಯೆಗಳನ್ನು ಆಲಿಸಿ, ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳಲು ಪ್ರಯತ್ನಸಬೇಕು ಎಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯಗಾರದಲ್ಲಿ ಮಾತನಾಡಿದ ಗಣೇಶ ಪ್ರಸಾದ್‌, ಪ್ರತಿಯೊಂದು ಗ್ರಾಮವು ತನ್ನ ಅವಶ್ಯಕತೆಗಳಿಗೆ ಹಾಗೂ ಜನರ ಬೇಡಿಕೆಗಳಿಗೆ ಅನುಗುಣವಾಗಿ ಅಭಿವೃದ್ಧಿ ಪಡಿಸಲು ಎಲ್ಲ ಹಂತದ ಅಧಿಕಾರಿಗಳು ಜಾಗೃತಿವಹಿಸಿ ಕೆಲಸಮಾಡಬೇಕು. ಗ್ರಾಮ ಪಂಚಾಯತ ಮಟ್ಟದಲ್ಲಿ ಅನಕ್ಷರತೆ, ಶಾಲೆಯಿಂದ ಹೊರಗುಳಿಯುವ ಮಕ್ಕಳ ಕುರಿತು ಬಾಲ್ಯವಿವಾಹವನ್ನು ತಡೆ ಮುಂತಾದ ಸಮಾಜಿಕ ಅನಿಷ್ಟ ಕುರಿತು ಗ್ರಾಮಗಳಲ್ಲಿ ಜನರಿಗೆ ಜಾಗೃತಿ ಮೂಡಿಸಬೇಕು ಎಂದು ಸಲಹೆ ಮಾಡಿದರು. ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ ಚವ್ಹಾಣ, ಪಂಚಾಯತರಾಜ್‌ ವ್ಯವಸ್ಥೆಯಲ್ಲಿ ಜನರ ಬಳಿಗೆ ಹೋಗಿ ಅವರ ಸಮಸ್ಯೆಗಳ ಪರಿಹಾರ ಹಾಗೂ ಗ್ರಾಮದ ಜನರ ಸ್ಥಳೀಯ ಬೇಡಿಕೆಗೆ ಅನುಸಾರ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಲು ವಿಕೇಂದ್ರೀಕೃತ ವ್ಯವಸ್ಥೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಅಧಿಕಾರಿಗಳು ಮುಂದಾಗಬೇಕು ಎಂದರು. ಮಾಜಿ ಶಾಸಕ ಡಿ.ಆರ್‌.ಪಾಟೀಲ, ಜಿ.ಪಂ. ಉಪಕಾರ್ಯದರ್ಶಿ ಪ್ರಾಣೇಶ ರಾವ್‌, ಯೋಜನಾ ನಿರ್ದೇಶಕ ಟಿ.ದಿನೇಶ, ಜಿಲ್ಲಾ ಮತ್ತು ತಾಲೂಕು ಹಾಗೂ ಗ್ರಾ.ಪಂ. ಅಧಿಕಾರಿಗಳು ಕಾರ್ಯಗಾರದಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next