ಮಂಗಳೂರು: ಸಾಮರಸ್ಯ ಕೆಡಿಸುವ ಸಂಘಟನೆಗಳ ಮುಖಂಡರ ಬಂಧನ ಮೊದಲು ನಡೆಯಬೇಕು. ಆಗ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಸಾಧ್ಯ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಅಭಿಪ್ರಾಯಪಟ್ಟರು.
ಪುತ್ತೂರು ಕಾಲೇಜು ವಿದ್ಯಾರ್ಥಿನಿ ಅತ್ಯಾಚಾರಿಗಳಿಗೆ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ದ.ಕ. ಜಿಲ್ಲಾಧಿಕಾರಿ ಕಚೇರಿ ಮುಂದೆ ಸೋಮವಾರ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ರಾಜ್ಯವೇ ತಲೆ ತಗ್ಗಿಸುವಂಥ ಘಟನೆ ನಡೆದಾಗ ಕರಾವಳಿಯ ಶಾಸಕರು ಸುಮ್ಮನಿದ್ದಾರೆ. ಭಾವನಾತ್ಮಕವಾಗಿ ಘಟನೆಗಳನ್ನು ಪ್ರಚೋದಿಸಿ ಓಟು ಪಡೆದ ಬಿಜೆಪಿ ಬೆಂಬಲಿತ ಸಂಘಟನೆಯ ಕಾರ್ಯಕರ್ತರಿಂದ ಈ ಕೃತ್ಯ ನಡೆದಿದೆ ಎಂದರು. ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ಆಡಳಿತದಲ್ಲಿದೆ. ನಳಿನ್, ಶೋಭಾ ಕರಂದ್ಲಾಜೆ ನೊಂದ ಹೆಣ್ಮಕ್ಕಳಿಗೆ ನ್ಯಾಯ ಒದಗಿಸಲಿ ಎಂದರು.
ವಿಪರ್ಯಾಸ
20 ವರ್ಷಗಳ ಹಿಂದೆ ಪುತ್ತೂರಿನಲ್ಲಿ ಸೌಮ್ಯಾ ಭಟ್ ಕೊಲೆ ಖಂಡಿಸಿ ಬಿಜೆಪಿಗರು ಬೆಂಕಿ ಹಚ್ಚಿ ಗಲಭೆ ಎಬ್ಬಿಸಿದ್ದರು. ದೇರಳಕಟ್ಟೆ ಸಮೀಪದ ಬಗಂಬಿಲ ಬಳಿ ಯುವತಿಗೆ ಯುವಕನೊಬ್ಬ ಚೂರಿ ಹಾಕಿದಾಗ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ವಿರುದ್ಧ ಆರೋಪ ಮಾಡಿದ ಸಂಸದೆ ಶೋಭಾ ಈಗ ದಲಿತ ಯುವತಿಯ ಅತ್ಯಾಚಾರ ಕುರಿತಾಗಿ ಧ್ವನಿ ಎತ್ತಿಲ್ಲ ಎಂದು ಟೀಕಿಸಿದರು.
ವಿಧಾನ ಪರಿಷತ್ ಸದಸ್ಯ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮಾಜಿ ಶಾಸಕ ಮೊದಿನ್ ಬಾವಾ, ಪ್ರಮುಖರಾದ ಇಬ್ರಾಹೀಂ ಕೋಡಿಜಾಲ್, ಶಾಹುಲ್ ಹಮೀದ್ ಕೆ.ಕೆ., ಮಿಥುನ್ ರೈ, ಶಶಿಧರ ಹೆಗ್ಡೆ, ಮುಹಮ್ಮದ್ ಮೋನು, ಶಾಲೆಟ್ ಪಿಂಟೋ, ಸದಾಶಿವ ಉಳ್ಳಾಲ, ಆರ್.ಕೆ. ಪೃಥ್ವಿರಾಜ್, ಶಾಹುಲ್ ಹಮೀದ್, ವಿಶ್ವಾಸ್ ದಾಸ್, ಟಿ.ಕೆ. ಸುಧೀರ್ ಪಾಲ್ಗೊಂಡಿದ್ದರು.