ಕಲಬುರಗಿ: ಜಾಗತಿಕ ಮಟ್ಟದ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಸದ್ಯ ಭಾರತ 121ನೇ ಕ್ರಮಾಂಕದಲ್ಲಿದ್ದು, ಮುಂದಿನ 2047ರ ಸ್ವಾತಂತ್ರ್ಯದ ಶತಮಾನೋತ್ಸವಕ್ಕೆ ಟಾಪ್ 10ರೊಳಗೆ ಭಾರತ ಸೇರಬೇಕು ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವ ಶೋಭಾ ಕರಂದ್ಲಾಜೆ ಹೇಳಿದರು.
ರವಿವಾರ ಗುಲಬರ್ಗಾ ವಿಶ್ವವಿದ್ಯಾಲಯದ ಜ್ಞಾನಗಂಗೆ ಆವರಣದ ಡಾ|ಬಿ.ಆರ್. ಅಂಬೇಡ್ಕರ್ ಸಭಾಭವನದಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಆಶ್ರಯದಲ್ಲಿ “ಗ್ರಾಮೀಣ ಯುವಕ ಯುವತಿಯರಿಗೆ ಸ್ವಾವಲಂಬಿ ಗ್ರಾಮದ ಪ್ರಶಿಕ್ಷಣ ತರಬೇತಿ ಕಾರ್ಯಾಗಾರ’ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣ, ಆರೋಗ್ಯ, ಆದಾಯ ಸೇರಿ ಮಾನವನ ಅಭ್ಯುದಯವಾಗಬೇಕಾದರೆ ಪರಿಶ್ರಮ ಅತ್ಯಗತ್ಯ. ಪ್ರತಿಯೊಬ್ಬರು ಸ್ವಯಂ ಅಭಿವೃದ್ಧಿ ಹೊಂದಬೇಕು. ಈ ದಿಸೆಯಲ್ಲಿ ಭಾರತದ ತಾಯಿಬೇರು ಹಳ್ಳಿಗರ ಬದುಕಿನಲ್ಲಿದೆ. ಹಳ್ಳಿ ಜನರಿಂದಲೇ ದೇಶ ಉದ್ಧಾರವಾಗಿ ವಿಶ್ವಗುರು ರಾಷ್ಟ್ರವಾಗಿ ಹೊರಹೊಮ್ಮಲು ಸಾಧ್ಯ ಎಂದರು.
2023 ಸಿರಿಧಾನ್ಯ ವರ್ಷ: ಪ್ರಧಾನಿ ನರೇಂದ್ರ ಮೋದಿ ಕೋರಿಕೆ ಮೇರೆಗೆ ವಿಶ್ವಸಂಸ್ಥೆಯು 2023 ವರ್ಷವನ್ನು ಸಿರಿಧಾನ್ಯಗಳ ವರ್ಷ ಘೋಷಿಸಿದೆ. ಹೀಗಾಗಿ, ನಾವು ಸಿರಿಧಾನ್ಯ ತಿನ್ನುವುದರೊಂದಿಗೆ ಪ್ರಪಂಚಕ್ಕೆ ತಿನ್ನಿಸುವ ಮಟ್ಟಿಗೆ ವ್ಯಾಪಾರ, ವಹಿವಾಟು ಮಾಡೋಣ. ರಾಗಿ, ಜೋಳ ಸೇರಿ ಸಿರಿಧಾನ್ಯ ಬೆಳೆಗಳಿಗೆ ತುಂಬಾ ಬೇಡಿಕೆ ಬರುತ್ತದೆ ಎಂದು ಕೇಂದ್ರ ಕೃಷಿ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ ಮಾತನಾಡಿ, ಹಳ್ಳಿಯಲ್ಲಿ ಶುದ್ಧ ಗಾಳಿ, ಬೆಳಕು, ಕುಡಿಯುವ ನೀರು, ಶುಚಿ ಆಹಾರ ಲಭಿಸುವುದರಿಂದ ಮಾನವ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ. ಹಳ್ಳಿ ಬದುಕಿನಲ್ಲಿ ಸುಖ, ನೆಮ್ಮದಿ ಸಿಗುತ್ತದೆ. ಆಧುನಿಕ ತಂತ್ರಜ್ಞಾನದ ಭರಾಟೆಯಲ್ಲಿ ದೊಡ್ಡ ನಗರಗಳು ಬೃಹದಾಕಾರವಾಗಿ ಬೆಳೆಯುತ್ತಿದ್ದಂತೆ ನಗರಕ್ಕೆ ಹೊಂದಿಕೊಂಡ ಗ್ರಾಮಗಳನ್ನು ನುಂಗಿ ಹಾಕಿವೆ. ದೆಹಲಿ ಪರಿಸರ, ವಾಯು, ಜಲ ಮಾಲಿನ್ಯದಿಂದ ತುಂಬು ತುಳುಕುತ್ತಿದೆ. ಹಳ್ಳಿ ಸಂಸ್ಕೃತಿ, ಸಂಪತ್ತು ಎತ್ತಿಹಿಡಿಯುವ ಜವಾಬ್ದಾರಿ ಯುವಕ-ಯುವತಿಯರ ಕೈಯಲ್ಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮಡು ಮಾತನಾಡಿ, ಹಳ್ಳಿಗಳು ಉದ್ಧಾರವಾಗಬೇಕು, ಯುವಕರು ಸ್ವಾಲಂಬಿ ಜೀವನ ಕಟ್ಟಿಕೊಳ್ಳಬೇಕೆಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಆಶಯವಾಗಿದೆ. ಇದನ್ನು ಸಾಕಾರಗೊಳಿಸುವ ಜವಾಬ್ದಾರಿ ಭಾವಿ ಪ್ರಜೆಗಳಾದ ಯುವ ಸಮೂಹದ ಮೇಲಿದೆ ಎಂದು ಹೇಳಿದರು.
ಗದಗನ ರಾಮಕೃಷ್ಣ ಆಶ್ರಮದ ಪೂಜ್ಯ ನಿರ್ಭಯಾನಂದ ಶ್ರೀಗಳು, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಗ್ರಾಮ ವಿಕಾಸ ತಜ್ಞ ಡಾ|ಎಂ.ಎ. ಬಾಲಸುಬ್ರಮಣ್ಯ, ಶಿಕ್ಷಣ ಉಪ ಸಮಿತಿ ಅಧ್ಯಕ್ಷೆ ಲೀಲಾ ಎಂ. ಕಾರಟಗಿ ಉಪನ್ಯಾಸ ನೀಡಿದರು. ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮಡು ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ. ನಮೋಶಿ, ಬಿ.ಜಿ.ಪಾಟೀಲ್, ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಮಸ್ಕೃತಿಕ ಸಂಘದ ಆಡಳಿತ ಮಂಡಳಿ ಸದಸ್ಯರಾದ ವಿ. ಶಾಂತರಡ್ಡಿ, ಹಣಮಂತ ತೆಗನೂರ, ಮಂಜುಳಾ ಡೊಳ್ಳೆ, ದುರ್ದಾನಾ ಬೇಗಂ,
ತಿಪ್ಪಣ್ಣ ರಡ್ಡಿ, ಅಧಿಧೀನ ಕಾರ್ಯದರ್ಶಿ ಮಲ್ಲಿಕಾರ್ಜುನರೆಡ್ಡಿ ಪಾಟೀಲ ಇದ್ದರು. ಅಂಬಿಕಾ ನಿರೂಪಿಸಿದರು.