ಕಳೆದ ನಾಲ್ಕು ತಿಂಗಳ ಕಾಲ ಸ್ಥಗಿತವಾಗಿದ್ದ ವೈದ್ಯಕೀಯ ಕೋರ್ಸ್‌ಗಳ ಕೌನ್ಸೆಲಿಂಗ್ ಆರಂಭಕ್ಕೆ ಸುಪ್ರೀಂ ಕೋರ್ಟ್ ಒಪ್ಪಿಗೆ ಸೂಚಿಸಿದ್ದು, ಸದ್ಯದಲ್ಲೇ ಈ ಪ್ರಕ್ರಿಯೆ ಶುರುವಾಗಲಿದೆ. ಎಲ್ಲವೂ ಅಂದುಕೊಂಡಂತಾಗಿದ್ದರೆ, ಕಳೆದ ಅಕ್ಟೋಬರ್‌ನಲ್ಲೇ ಕೌನ್ಸೆಲಿಂಗ್ ಆರಂಭವಾಗಿ, ಇಷ್ಟೊತ್ತಿಗೆ ಮುಗಿಯಬೇಕಿತ್ತು. ಆದರೆ ಕೇಂದ್ರ ಸರಕಾರ ಆರ್ಥಿಕ ದುರ್ಬಲ ವರ್ಗಕ್ಕೆ ಶೇ.10ರಷ್ಟು ಮೀಸಲಾತಿ ನೀಡಲು ನಿರ್ಧಾರ ತೆಗೆದುಕೊಂಡಿದ್ದು ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಬಾಗಿಲು ಬಡಿಯಲಾಗಿತ್ತು. ಈ ವಿಚಾರಣೆಯಿಂದಾಗಿ ನಾಲ್ಕು ತಿಂಗಳ ಅನಂತರ ಕೌನ್ಸೆಲಿಂಗ್‌ಗೆ ಒಪ್ಪಿಗೆ ಸಿಕ್ಕಿದೆ.
ನೀಟ್ ಪದವಿ ಮತ್ತು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳ ಪ್ರವೇಶ ಆರಂಭವಾಗದೇ ಇರುವುದಕ್ಕೆ ಪ್ರಮುಖ ಕಾರಣವೇ ಆರ್ಥಿಕವಾಗಿ ದುರ್ಬಲರಿಗೆ ಶೇ.10ರಷ್ಟು ಮೀಸಲಾತಿ ನೀಡುವ ಕೇಂದ್ರ ಸರಕಾರದ ನಿರ್ಧಾರ. ಈ ವರ್ಗಕ್ಕೆ ವಾರ್ಷಿಕ 8 ಲಕ್ಷ ರೂ. ಗರಿಷ್ಠ ಆದಾಯ ಮಿತಿ ನಿಗದಿ ಮಾಡಿದ್ದು ಕೆಲವು ವಿದ್ಯಾರ್ಥಿಗಳ ಆಕ್ಷೇಪಕ್ಕೆ ಕಾರಣವಾಗಿತ್ತು. ಈಗಾಗಲೇ ಇರುವ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ವರ್ಗಕ್ಕೆ ಮೀಸಲಾತಿ ನೀಡಿ, ಇದರ ಜತೆಗೆ ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10 ಮೀಸಲಾತಿ ನೀಡಿದರೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ ಎಂಬುದು ವಿದ್ಯಾರ್ಥಿಗಳ ವಾದವಾಗಿತ್ತು. ಅಲ್ಲದೆ 8 ಲಕ್ಷ ರೂ.ಗಳ ಗರಿಷ್ಠ ಮಿತಿಯನ್ನು ಯಾವ ಮಾನದಂಡದಲ್ಲಿ ನಿರ್ಧಾರ ಮಾಡಲಾಗಿದೆ ಎಂಬ ಪ್ರಶ್ನೆಯೂ ಉದ್ಭವವಾಗಿತ್ತು.
ಈ ಬಗ್ಗೆ ವಿಚಾರಣೆ ನಡೆಯುತ್ತಿರುವಾಗಲೇ ಕೇಂದ್ರ ಸರಕಾರ ಅಜಯ್ ಭೂಷಣ್ ಪಾಂಡೆ ಅವರ ನೇತೃತ್ವದಲ್ಲಿ ಸಾಧಕ – ಬಾಧಕಗಳ ಬಗ್ಗೆ ಚರ್ಚಿಸಲು ಸಮಿತಿಯೊಂದನ್ನು ರಚಿಸಿತ್ತು. ಈ ಸಮಿತಿಯು 8 ಲಕ್ಷ ರೂ.ಗಳ ಗರಿಷ್ಠ ಮಿತಿಯನ್ನು ಒಪ್ಪಿಕೊಳ್ಳಬಹುದು ಎಂದು ಹೇಳಿ, ಸುಪ್ರೀಂ ಕೋರ್ಟ್‌ಗೆ ವರದಿ ನೀಡಿತ್ತು. ಶುಕ್ರವಾರ ಸುಪ್ರೀಂ ಕೋರ್ಟ್ ಮಧ್ಯಾಂತರ ಆದೇಶ ನೀಡಿದ್ದು, ಅಜಯ್ ಭೂಷಣ್ ಪಾಂಡೆ ಅವರ ಶಿಫಾರಸನ್ನು ಒಪ್ಪಿಕೊಂಡಿದೆ. ಈ ಮೂಲಕ ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಇಡಬ್ಲ್ಯುಎಸ್‌ನವರಿಗೆ ಮೀಸಲಾತಿ ನೀಡಿಯೇ ಕೌನ್ಸೆಲಿಂಗ್ ಆರಂಭಿಸುವಂತೆ ಆದೇಶ ನೀಡಿದೆ. ಅಲ್ಲದೆ ಮುಂದಿನ ಮಾರ್ಚ್‌ನಲ್ಲಿ ಈ ಆರ್ಥಿಕವಾಗಿ ದುರ್ಬಲರಾಗಿ ನೀಡಿರುವ ಮೀಸಲಾತಿ ಸಂಬಂಧ ಸಂಪೂರ್ಣ ವಿಚಾರಣೆ ನಡೆಸುವುದಾಗಿಯೂ ಸುಪ್ರೀಂ ತಿಳಿಸಿದೆ.
ಇಲ್ಲಿಗೆ ಒಂದು ಲೆಕ್ಕಾಚಾರದಲ್ಲಿ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಇದ್ದ ಒಂದು ಹಂತದ ಅಡೆತಡೆಗಳು ಮುಗಿದಿವೆ. ಇನ್ನು ಮುಂದಾದರೂ ಯುಜಿ-ನೀಟ್ ಕೌನ್ಸೆಲಿಂಗ್‌ಗಿಂತ ಮುಂಚಿತವಾಗಿಯೇ ಪಿಜಿ-ನೀಟ್ ಬರೆದಿರುವ ವಿದ್ಯಾರ್ಥಿಗಳ ಕೌನ್ಸೆಲಿಂಗ್ ಅನ್ನು ತ್ವರಿತಗತಿಯಲ್ಲಿ ಮುಗಿಸಬೇಕು. ಕೊರೊನಾ ಕಾಲದಲ್ಲಿ ವೈದ್ಯರ ಕೊರತೆಯನ್ನು ನೀಗಿಸಿದವರು ಇವರೇ ಆಗಿದ್ದು, ಒಮ್ಮೆ ಈ ವಿದ್ಯಾರ್ಥಿಗಳು ವೈದ್ಯಕೀಯ ಪಿಜಿಗೆ ಸೇರಿಕೊಂಡರೆ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ನೆರವಾಗುತ್ತಾರೆ. ಈ ಮೂಲಕವಾದರೂ ವೈದ್ಯರ ಕೊರತೆಯನ್ನು ನೀಗಿಸಿಕೊಳ್ಳಬಹುದು. ಇವರು ಎಂಬಿಬಿಎಸ್ ಅನ್ನು ಮುಗಿಸಿ ಸ್ನಾತಕೋತ್ತರಕ್ಕೆ ಬಂದಿರುತ್ತಾರೆ. ಇವರ ಸೇವೆಯನ್ನು ಬಳಸಿಕೊಳ್ಳಲು ಯಾವುದೇ ಅಡ್ಡಿ ಇರುವುದಿಲ್ಲ. ಅಲ್ಲದೆ ಕಳೆದ ನಾಲ್ಕು ತಿಂಗಳಿಂದ ಪಿಜಿ ಕೋರ್ಸ್‌ಗೆ ಸೇರಲು ತುದಿಗಾಲಲ್ಲಿ ನಿಂತಿರುವ ವೈದ್ಯರಿಗೆ ಅನುಕೂಲ ಮಾಡಿಕೊಟ್ಟಂತೆ ಆಗುತ್ತದೆ.