Advertisement

ಕೊರೊನಾ ಲಸಿಕೆ ವಿತರಣೆ ತಾಳ್ಮೆ, ನಂಬಿಕೆಗಳಿಗೆ ಆದ್ಯತೆ ಕೊಡೋಣ

11:29 PM Jan 01, 2021 | Team Udayavani |

ಹೊಸ ವರ್ಷದ ಮೊದಲ ದಿನವೇ ಲಸಿಕೆ ವಿಚಾರದಲ್ಲಿ ಶುಭ ಸುದ್ದಿ ಹೊರಬಿದ್ದಿದೆ. ಶುಕ್ರವಾರದಂದು ನಡೆದ ಎರಡನೇ ಹಂತದ ತಜ್ಞರ ಪರಿಶೀಲನ ಸಭೆಯಲ್ಲಿ ಪುಣೆಯ ಸೀರಮ್‌ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾದಲ್ಲಿ ಉತ್ಪಾದಿಸಲಾಗುತ್ತಿರುವ ಆಕ್ಸ್‌ಫ‌ರ್ಡ್‌-ಆಸ್ಟ್ರೆಜೆನೆಕಾ ಲಸಿಕೆ ವಿತರಣೆಗೆ ತಜ್ಞರ ಸಮಿತಿ ಡಿಸಿಜಿಐಗೆ ಶಿಫಾರಸು ಮಾಡಿದೆ. ದೇಶಕ್ಕೆ ಅಗತ್ಯವಿರುವಷ್ಟು ಪ್ರಮಾಣದ ಲಸಿಕೆಯನ್ನು ಹಂತಹಂತವಾಗಿ ಪೂರೈಸುವ ಭರವಸೆ ಸಂಸ್ಥೆಯಿಂದ ದೊರೆತಿದೆ. ಬ್ರಿಟನ್‌ ಮತ್ತು ಅರ್ಜೆಂಟೀನಾದ ಬಳಿಕ ಆಕ್ಸ್‌ಫ‌ರ್ಡ್‌-ಆಸ್ತ್ರಾಜೆನೆಕಾ ಲಸಿಕೆಗೆ ಸಮ್ಮತಿ ಸೂಚಿಸಿದ ಮೂರನೇ ದೇಶ ನಮ್ಮದು. ಈ ಬೆಳವಣಿಗೆಯಿಂದ ಸೋಂಕಿತರ ಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿರುವ ನಾವು ಕೊಂಚ ಮಟ್ಟಿಗೆ ನಿಟ್ಟುಸಿರು ಬಿಡಬಹುದು.

Advertisement

ಕೇಂದ್ರ ಸರಕಾರ ಲಸಿಕೆಗಳ ಸಾಗಣೆ, ದಾಸ್ತಾನು ಮತ್ತು ವಿತರಣೆಗೆ ಸಜ್ಜಾಗಿದೆ. ಡ್ರೈ ರನ್‌ನ ಫ‌ಲಿತಾಂಶವನ್ನು ಆಧರಿಸಿ ಸೂಕ್ತ ಮಾರ್ಗಸೂಚಿಗಳೊಂದಿಗೆ ರಾಜ್ಯಗಳಿಗೆ ಲಸಿಕೆ ಪೂರೈಕೆಯಾಗಲಿದೆ. ತುರ್ತು ಅಗತ್ಯವಿರುವವರಿಗೆ ಮೊದಲ ಆದ್ಯತೆ. ಲಸಿಕೆಗಳ ಲಭ್ಯತೆ ಮತ್ತು ಬೇಡಿಕೆಗನುಗುಣವಾಗಿ ಸಮರೋಪಾದಿಯಲ್ಲಿ ಪೂರೈಸಲೂ ಸಿದ್ಧತೆ ನಡೆಸಲಾಗಿದೆ. ಅದರಂತೆ ಶನಿವಾರದಿಂದಲೇ ಲಸಿಕೆಯ ಸಾಗಣೆ ಪ್ರಕ್ರಿಯೆ ಆರಂಭವಾಗುವ ನಿರೀಕ್ಷೆಯಿದೆ.

ಇದರ ನಡುವೆಯೇ ಒಟ್ಟಾರೆ ಜನಸಂಖ್ಯೆ ಮತ್ತು ಸೋಂಕಿತರ ಸಂಖ್ಯೆಯಲ್ಲಿ ವಿಶ್ವದಲ್ಲಿಯೇ ಎರಡನೇ ಸ್ಥಾನದಲ್ಲಿರುವ ಭಾರತದಲ್ಲಿ ಲಸಿಕೆ ವಿತರಣೆ ಬಹಳ ಸುಲಭದ ಕೆಲಸವಲ್ಲ. ಲಸಿಕೆಯ ಸಾಗಣೆ ಮತ್ತು ದಾಸ್ತಾನು ಬಹಳ ದೊಡ್ಡ ಸಮಸ್ಯೆ. ಆದರೂ ಸರಕಾರ ಈ ಸವಾಲನ್ನು ಗಂಭೀರವಾಗಿ ಪರಿಗಣಿಸಿ ಲಸಿಕೆ ಪೂರೈಸಲು ಮುಂದಾಗಿದೆ. ನಾಲ್ಕೈದು ತಿಂಗಳುಗಳಿಂದಲೇ ಇದಕ್ಕೆ ಅವಶ್ಯವಿರುವ ವ್ಯವಸ್ಥೆಯನ್ನೂ ಕೈಗೊಳ್ಳಲಾಗಿದೆ. ನಗರಗಳಿಂದ ಹಿಡಿದು ಗ್ರಾಮೀಣ ಪ್ರದೇಶಗಳವರೆಗೂ ಲಸಿಕಾ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಗಳಿಂದ ಜನರಿಗೆ ಲಸಿಕೆ ವಿತರಣೆಯಾಗಲಿದೆ.

ಇವೆಲ್ಲವೂ ವ್ಯವಸ್ಥೆಯ ಒಂದು ಭಾಗವಷ್ಟೇ. ಆದರೆ ಇನ್ನೊಂದು ಭಾಗವಾಗಿರುವುದು ನಾವು ಅಂದರೆ ಜನತೆ. ಲಸಿಕೆ ವಿತರಣೆ ಕಾರ್ಯ ನಿರ್ವಿಘ್ನವಾಗಿ ನಡೆಯಬೇಕೆಂದರೆ ನಮ್ಮ ತಾಳ್ಮೆ ಹಾಗೂ ಸಹಕಾರ ತೀರಾ ಅವಶ್ಯ. ಕಳೆದ ವರ್ಷವಿಡೀ ಕೊರೊನಾ ಸೋಂಕಿನಿಂದಾಗಿ ಸಂಕಷ್ಟ ಅನುಭವಿಸಿದ ಜನರು ಇದೀಗ ತಾಳ್ಮೆಯಿಂದ ಲಸಿಕೆ ಪಡೆದುಕೊಳ್ಳಬೇಕಿದೆ. ಅದರ ಪರಿಣಾಮಕತ್ವ ಕುರಿತು ಎಲ್ಲ ಪ್ರಯೋಗ-ಪರಿಶೀಲನೆ ಎರಡನ್ನೂ ಸರಕಾರ ನಡೆಸಿ ಅನುಮತಿ ನೀಡಿರುವಾಗ ಲಸಿಕೆಯ ಪ್ರಭಾವದ ಬಗೆಗೆ ಅನವಶ್ಯಕ ಅನುಮಾನ ಅಥವಾ ಗೊಂದಲ ಬೇಕಿಲ್ಲ. ಒಂದು ವೇಳೆ ಲಸಿಕೆಯಿಂದ ಯಾವುದಾದರೂ ಪ್ರತಿಕೂಲ ಪರಿಣಾಮ ಕಾಣಿಸಿಕೊಂಡರೆ ತತ್‌ಕ್ಷಣ ಅದರ ನಿವಾರಣೆಗೆ ತಜ್ಞರನ್ನು ಸರಕಾರ ನಿಯೋಜಿಸಲಿದೆ. ಹಾಗಾಗಿ ಲಸಿಕೆಯ ಕುರಿತು ವಿನಾಕಾರಣ ಆತಂಕಿತರಾಗುವ ಆವಶ್ಯಕತೆ ಇಲ್ಲ. ಈವರೆಗೆ ಪ್ರತಿಯೊಂದೂ ಹಂತದಲ್ಲಿಯೂ ಸರಕಾರದ ಮನವಿಗೆ ಸ್ಪಂದಿಸುತ್ತ ಬಂದಿರುವ ನಾವು ಅದೇ ತಾಳ್ಮೆ ಹಾಗೂ ಸಹಕಾರವನ್ನು ಕೊನೆಯ ಹಂತಕ್ಕೂ ವಿಸ್ತರಿಸಬೇಕು. ಆ ಮೂಲಕ ಕೊರೊನಾ ವಿರುದ್ಧದ ಹೋರಾಟವನ್ನು ಯಶಸ್ವಿಗೊಳಿಸಬೇಕು. ಇದೇ ಹೊತ್ತಿನಲ್ಲಿ ಸರಕಾರಗಳೂ ಗಮನಿಸಬೇಕಾದ ಅತ್ಯಂತ ಪ್ರಮುಖ ಸಂಗತಿಯೆಂದರೆ, ಯಾವುದೇ ಕಾರಣಕ್ಕೂ ಜನರ ವಿಶ್ವಾಸ ಕುಸಿಯುವ ಪ್ರಯತ್ನಗಳು ಯಾವುದೇ ಹಂತದಲ್ಲಿ ನಡೆಯದಂತೆ ಎಚ್ಚರಿಕೆ ವಹಿಸಬೇಕು. ಅದಕ್ಕೆ ಸೂಕ್ತವಾದ ಎಲ್ಲ ಅಗತ್ಯ ಕ್ರಮಗಳನ್ನೂ ಸಾಕಷ್ಟು ಮುಂಚಿತವಾಗಿ ಕೈಗೊಳ್ಳಬೇಕು. ಇಲ್ಲವಾದರೆ ಲಸಿಕೆ ಅಭಿಯಾನ ಇನ್ನಿತರ ಆತಂಕಕ್ಕೆ ಕಾರಣವಾದೀತು.

Advertisement

Udayavani is now on Telegram. Click here to join our channel and stay updated with the latest news.

Next