ಮಳೆ ಬಂದು ಪರಿಸರ ಹಚ್ಚ ಹಸುರಿನಿಂದ ಕಂಗೊಳಿಸುತ್ತಿದೆ. ಬಾವಿ, ಕೆರೆ, ಜಲಮೂಲಗಳೆಲ್ಲ ಮೈದುಂಬಿ ಹರಿಯುತ್ತಿವೆ. ಬೇಸಗೆಯಲ್ಲಿದ್ದ ನೀರಿನ ಕ್ಷಾಮ ಈಗ ಇಲ್ಲ. ಕುಡಿಯಲು ಮತ್ತು ದೈನಂದಿನ ಮನೆ ಕೆಲಸಗಳಿಗೆ ನೀರು ಬೇಕಾದಷ್ಟು ದೊರೆಯುತಿದ್ದರೂ ನೀರಿನ ಕುರಿತು ಈಗ ಎಕೆ ಕಾಳಜಿ ಹೊಂದಬೇಕು ಎಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಖಂಡಿತ ಮೂಡಿರಬಹುದು. ಕಾರಣ ಇಷ್ಟೇ “ಹನಿ ಹನಿಗೂಡಿ ಹಳ್ಳ’ ಎಂಬ ನಾಣ್ಣುಡಿಯಂತೆ ಈಗೇನೋ ನೀರಿನ ಕೊರತೆ ಇಲ್ಲ ಆದರೆ ಬೇಸಗೆ ಕಾಲದಲ್ಲಿ ಬರಡಾಗಿರುವ ಈ ಭೂಮಿ, ತಳ ಕಾಣುವ ಬಾವಿ, ಇವೆಲ್ಲವನ್ನು ಊಹಿಸಿದರೆ ಈಗಲೂ ಭಯವಾಗುತ್ತದೆ.
ಮಳೆಗಾಲದಲ್ಲಿ ಧಾರಾಕಾರವಾಗಿ ಹರಿಯುವ ಮಳೆ ನೀರನ್ನು ಸಂಗ್ರಹಿಸಿ ನಾಳೆಗಾಗಿ ಅದನ್ನು ಶೇಖರಿಸಿದರೆ ಖಂಡಿತ ಬೇಸಗೆಯಲ್ಲಿ ಜಲಕ್ಷಾಮ ಉಂಟಾಗುವುದಿಲ್ಲ. ಪ್ರತಿಯೊಂದು ಮನೆಯಲ್ಲೂ ಇಂಗುಗುಂಡಿ ಮತ್ತು ಮಳೆ ನೀರಿನ ಸಂರಕ್ಷಣೆಗಾಗಿ ಮಳೆ ಕೊಯ್ಲು ಮುಂತಾದ ಕ್ರಮಗಳನ್ನು ಈಗಲೇ ಪ್ರಾರಂಭಿಸಿದರೆ ಬೇಸಗೆಯಲ್ಲಿ ಬರಗಾಲ ಎದುರಾಗುವುದಿಲ್ಲ.
ಈಗ ಬರುವಂತ ಮಳೆ ನೀರನ್ನು ಹಾಗೆಯೇ ಹರಿಯ ಬಿಟ್ಟರೆ ಈ ಶುದ್ಧವಾದ ನೀರು ಹಳ್ಳ, ಕೊಳ್ಳ, ನದಿಗಳನ್ನು ಸೇರಿ ಅನಂತರ ಸಮುದ್ರಕ್ಕೆ ಸೇರಿದರೆ ಸಿಹಿನೀರು ಉಪ್ಪು ನೀರಾಗಿ ಮಾರ್ಪಟ್ಟ ಅನಂತರ ಅದನ್ನು ಬಳಸಲು ಸಾಧ್ಯವಿಲ್ಲ. ಹಾಗಾಗಿ “ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ’ ಅಂದರೆ ಬೇಸಗೆ ಕಾಲದಲ್ಲಿ ಬರಗಾಲ ಬಂದಾಗ ನೀರಿಗಾಗಿ ಹೋರಾಡುವ ಮತ್ತು ಹಾರಾಡುವುದರ ಬದಲು ಈಗಿನಿಂದಲೇ ನಮ್ಮ ಸುಂದರ ನಾಳೆಗಾಗಿ ಒಂದಿಷ್ಟು ಜಾಗರೂಕತೆ, ಮುಂದಾಲೋಚನೆ ಹೊಂದಿದರೆ ಭೂಮಿಯ ಅಂತರ್ಜಲಮಟ್ಟವನ್ನು ಹೆಚ್ಚಿಸಬಹುದು.
ನಾವು ಈಗಾಗಲೇ ಅರಣ್ಯನಾಶ, ಕೊಳವೆಬಾವಿ ನಿರ್ಮಾಣ, ಸ್ವತ್ಛಂದವಾಗಿ ಹರಿಯುತ್ತಿದ್ದ ನೀರಿಗೆ ಅಣೆಕಟ್ಟು ಕಟ್ಟಿ ಅಭಿವೃದ್ಧಿ, ತಂತ್ರಜ್ಞಾನದ ಹೆಸರಿನಲ್ಲಿ ಪರಿಸರವನ್ನು ಹಾಳು ಮಾಡಿದ್ದು, ಸುನಾಮಿ, ಅತಿವೃಷ್ಟಿ, ಅನಾವೃಷ್ಟಿ, ಬರಗಾಲ ಹೀಗೆ ಈ ಎಲ್ಲ ರೂಪವನ್ನು ಕಂಡಿದ್ದೇವೆ. ಈಗಲೂ ಪರಿಸರ ಜಾಗೃತಿಯ ಕುರಿತು ಒಂದಿಷ್ಟು ಜಾಗರೂಕತೆ ವಹಿಸದಿದ್ದರೆ ನಮ್ಮ ಮುಂದಿನ ಜನಾಂಗದ ಪಾಡು ಶೋಚನೀಯವಾದೀತು.
ಈಗಾಗಲೇ ಸಮೃದ್ಧವಾಗಿ ಅಂತರ್ಜಲವಿದ್ದ ಜಿಲ್ಲೆಗಳು ಬರಪೀಡಿತ ಜಿಲ್ಲೆಗಳೆಂದು ಹೆಸರುವಾಸಿ ಆದಾಗಲೇ ನಮಗೆ ಎಚ್ಚರಿಕೆಯ ಕರೆಗಂಟೆ ಬಾರಿಸಿದಂತೆ. ಹಾಗಾಗಿ ನಾವು ಇನ್ನೂ ಹಾಯಾಗಿ ಮಲಗಿದ್ದರೆ ನಮ್ಮ ಮಕ್ಕಳು ಮೊಮ್ಮಕ್ಕಳ ಶಾಪ ಖಂಡಿತ ತಟ್ಟಿತು.
-ಬಿ. ಶಶಾಂಕ ಪೈ
ಎಂ.ಪಿ.ಎಂ. ಕಾಲೇಜು, ಕಾರ್ಕಳ