Advertisement

ಕ್ಯಾನ್ಸರ್‌ ಹಿಮ್ಮೆಟ್ಟಿಸಲು ಸಮುದಾಯ ಕೈ ಜೋಡಿಸಲಿ

11:38 AM Jun 29, 2018 | |

ಬೆಂಗಳೂರು: ಮಾರಕ ಕ್ಯಾನ್ಸರ್‌ ಕಾಯಿಲೆ ಹಿಮ್ಮೆಟ್ಟಿಸಲು ಸರ್ಕಾರಗಳ ಜತೆಗೆ ಸಮುದಾಯ ಕೈಜೋಡಿಸಬೇಕು. ಆಧುನಿಕ ಚಿಕಿತ್ಸಾ ಕ್ರಮಗಳೊಂದಿಗೆ ಈ ಕಾಯಿಲೆ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಹೇಳಿದ್ದಾರೆ.

Advertisement

ಕಿದ್ವಾಯಿ ಕ್ಯಾನ್ಸರ್‌ ಸಂಸ್ಥೆಯ ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ “ರಾಜ್ಯ ಕ್ಯಾನ್ಸರ್‌ ಸಂಸ್ಥೆ’ ಕಟ್ಟಡವನ್ನು ಗುರುವಾರ ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, ದೇಶದಲ್ಲಿ ಕ್ಯಾನ್ಸರ್‌ ವೇಗವಾಗಿ ಹೆಚ್ಚುತ್ತಿದೆ. ರಾಷ್ಟ್ರ ಮತ್ತು ಸ್ಥಳೀಯ ಮಟ್ಟದಲ್ಲಿ ಕೈಗೊಳ್ಳುವ ಮುನ್ನೆಚ್ಚರಿಕೆ ಕ್ರಮಗಳು ನಗಣ್ಯವಾಗಿವೆ. ಅಲಕ್ಷ್ಯವೇ ಕ್ಯಾನ್ಸರ್‌ ವ್ಯಾಪಿಸಲು ಕಾರಣ ಎಂದರು.

ಒಟ್ಟು ಕ್ಯಾನ್ಸರ್‌ ರೋಗಿಗಳ ಪೈಕಿ ಶೇ.12 ಮಂದಿ ಮಾತ್ರ ಆರಂಭದ ಹಂತದಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಉಳಿದವರು ಪರಿಸ್ಥಿತಿ ಕೈ ಮೀರಿದ ಬಳಿಕ ಚಿಕಿತ್ಸೆ ಮೊರೆ ಹೋಗುತ್ತಾರೆ. ಕ್ಯಾನ್ಸರ್‌ ಸೇರಿ ಈಗಿನ ಎಲ್ಲ ಕಾಯಿಲೆಗಳಿಗೆ ಮೂಲ, ನಮ್ಮ ಅವೈಜ್ಞಾನಿಕ ಆಹಾರ ಪದ್ಧತಿ, ಯಾಂತ್ರಿಕ ಜೀವನ ಶೈಲಿ. ಆದ್ದರಿಂದ ಕಾಯಿಲೆಗಳು ಬಾರದಂತೆ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಬೇಕು. ಕೃತಕ ಆಹಾರ ಬಿಟ್ಟು, ಪ್ರಾಕೃತಿಕ ಆಹಾರ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. 

ಆಘಾತಕಾರಿ ಅಂಕಿ-ಅಂಶ: ಕೇಂದ್ರ ಸರ್ಕಾರದ 120 ಕೋಟಿ ರೂ. ನೆರವು ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ ಕ್ಯಾನ್ಸರ್‌ ಸಂಸ್ಥೆ ಕಟ್ಟಡ ನಿರ್ಮಿಸಲಾಗಿದೆ. ಸದ್ಯ ದೇಶದಲ್ಲಿ ಕ್ಯಾನ್ಸರ್‌ ರೋಗಿಗಳ ಸಂಖ್ಯೆ ಅಂದಾಜು 30 ಲಕ್ಷ ಇದೆ. ಪ್ರತಿ ವರ್ಷ 10 ಲಕ್ಷ ಮಂದಿ ಈ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಪ್ರತಿ ವರ್ಷ 5 ಲಕ್ಷ ಮಂದಿ ಕ್ಯಾನ್ಸರ್‌ ಕಾಯಿಲೆಯಿಂದ ಸಾವನ್ನಪ್ಪುತ್ತಿದ್ದಾರೆ.

ಭಾರತೀಯ ವೈಜ್ಞಾನಿಕ ಸಂಶೋಧನಾ ಸಂಸ್ಥೆಯ (ಐಸಿಎಂಆರ್‌) 2016ರ ವರದಿ ಪ್ರಕಾರ ದೇಶದಲ್ಲಿ 2020ರ ವೇಳೆಗೆ ಪ್ರತಿ ವರ್ಷ ಕ್ಯಾನ್ಸರ್‌ ಕಾಯಿಲೆಗೆ ತುತ್ತಾಗುವವರ ಸಂಖ್ಯೆ 17.3 ಲಕ್ಷ ಆಗಲಿದೆ. ಸಾವಿನ ಪ್ರಮಾಣ 8.8 ಲಕ್ಷ ಆಗಲಿದೆ. ಈ ಅಂಕಿ-ಅಂಶಗಳು ಆಘಾತ ಹುಟ್ಟಿಸುತ್ತಿವೆ ಎಂದು ಉಪರಾಷ್ಟ್ರಪತಿಗಳು  ಆತಂಕ ವ್ಯಕ್ತಪಡಿಸಿದರು.

Advertisement

ರಾಜ್ಯಪಾಲ ವಿ.ಆರ್‌.ವಾಲಾ ಅವರು ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್‌, ಆರೋಗ್ಯ ಸಚಿವ ಶಿವಾನಂದ ಪಾಟೀಲ್‌, ಶಾಸಕ ಉದಯ ಗರುಡಾಚಾರ್‌, ರಾಜೀವಗಾಂಧಿ ಆರೋಗ್ಯ ವಿವಿ ಉಪ ಕುಲಪತಿ ಡಾ.ಎಸ್‌.ಸಚ್ಚಿದಾನಂದ, ಕಿದ್ವಾಯಿ ಸಂಸ್ಥೆ ನಿರ್ದೇಶಕ ಡಾ. ಕೆ.ಬಿ.ಲಿಂಗೇಗೌಡ ಮತ್ತಿತರರು ಉಪಸ್ಥಿತರಿದ್ದರು.

ಬಜೆಟ್‌ನಲ್ಲಿ ಹೆಚ್ಚು ಅನುದಾನ- ಸಿಎಂ: “ಮೂಳೆ ಮಜ್ಜೆ ಕಸಿ’ (ಬೋನ್‌ ಮ್ಯಾರೋ ಟ್ರಾನ್ಸ್‌ಪ್ಲಾಂಟ್‌) ಚಿಕಿತ್ಸಾ ವ್ಯವಸ್ಥೆ ಅಳವಡಿಸಿಕೊಳ್ಳಲು ಕಿದ್ವಾಯಿ ಸಂಸ್ಥೆಗೆ ಅಗತ್ಯವಿರುವ ಅನುದಾನ ಒದಗಿಸಲು ಸರ್ಕಾರ ಸಿದ್ಧವಿದ್ದು, ಬಜೆಟ್‌ನಲ್ಲಿ ಅನುದಾನ ಘೋಷಣೆ ಮಾಡುವುದಾಗಿ ಇದೇ ವೇಳೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಭರವಸೆ ನೀಡಿದರು.

“ಮೂಳೆ ಮಜ್ಜೆ ಸಮಸ್ಯೆಯಿಂದ ಬಳಲುವವರ ನೋವು ಕಣ್ಣಾರೆ ಕಂಡಿದ್ದೇನೆ. ಚಿಕ್ಕ ಮಕ್ಕಳಲ್ಲೂ ಈ ಸಮಸ್ಯೆ ಇತ್ತಿಚಿಗೆ ಹೆಚ್ಚಾಗಿದೆ. ಮೂಳೆ ಮಜ್ಜೆ ಕಸಿ ಮಾಡಬೇಕಾದರೆ ಒಬ್ಬ ರೋಗಿಗೆ 30 ರಿಂದ 35 ಲಕ್ಷ ರೂ. ಬೇಕು. ಬಡವರಿಂದ ಈ ವೆಚ್ಚ ಭರಿಸಲು ಸಾಧ್ಯವಿಲ್ಲ. ಆದ್ದರಿಂದ ಕಡಿಮೆ ದರದಲ್ಲಿ ಚಿಕಿತ್ಸೆ ಸಿಗಲು ಮೂಳೆ ಮಜ್ಜೆ ಕಸಿ ಚಿಕಿತ್ಸಾ ವ್ಯವಸ್ಥೆಯನ್ನು ಕಿದ್ವಾಯಿ ಸಂಸ್ಥೆ ಅಳವಡಿಸಿಕೊಳ್ಳಲಿ.

ಇದಕ್ಕೆ ಬೇಕಾಗುವ ಹಣಕಾಸು ಸರ್ಕಾರ ನೀಡಲಿದೆ. ಈ ಬಗ್ಗೆ ಈಗಾಗಲೇ ವೈದ್ಯಕೀಯ ಶಿಕ್ಷಣ ಸಚಿವರು ಮತ್ತು ಆರೋಗ್ಯ ಸಚಿವರೊಂದಿಗೆ ಚರ್ಚಿಸಿದ್ದೇನೆ. ಬಜೆಟ್‌ನಲ್ಲಿ ಅನುದಾನದ ಘೋಷಣೆ ಮಾಡುತ್ತೇನೆ,’ ಎಂದರು. ಜತೆಗೆ “ಆರೋಗ್ಯ ಕ್ಷೇತ್ರಕ್ಕೆ ಕೇಂದ್ರ ಸರ್ಕಾರ ಸಾಕಷ್ಟು ಆರ್ಥಿಕ ನೆರವು ನೀಡುತ್ತಿದೆ. ರಾಜ್ಯ ಸರ್ಕಾರ ಸಹ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಸಿಎಂ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next