Advertisement

ಪದವಿ ದಾಖಲಾತಿ ಅಧ್ಯಯನಕ್ಕೆ ಸಮಿತಿ ರಚಿಸಲಿ: ಸಂಕನೂರ

10:50 AM Sep 11, 2019 | Suhan S |

ಮುಂಡರಗಿ: ರಾಜ್ಯದಲ್ಲಿ ಕಳೆದ ಸಾಲಿಗಿಂತಲೂ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಪದವಿ ತರಗತಿಗಳಿಗೆ ವಿದ್ಯಾರ್ಥಿಗಳ ದಾಖಲಾತಿ ಅರ್ಧದಷ್ಟು ಕಡಿಮೆಯಾಗಿದೆ. ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಅಧ್ಯಯನ ಸಮಿತಿ ರಚಿಸಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಎಸ್‌.ವಿ. ಸಂಕನೂರು ಆಗ್ರಹಿಸಿದರು.

Advertisement

ಪಟ್ಟಣದ ಜ| ತೋಂಟದಾರ್ಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಆರು ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ ಭೂಮಿಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿರುವ ಪದವಿ ಕಾಲೇಜಿನ ಕಲಾ, ವಾಣಿಜ್ಯ, ವಿಜ್ಞಾನ ವಿಷಯಗಳ ಪದವಿಗೆ ಐದು ವರ್ಷಗಳಲ್ಲಿ ಸರಾಸರಿ ಪ್ರತಿ ವರ್ಷ ಮೂರು ಲಕ್ಷದಷ್ಟು ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದರು. ಆದರೆ ಈ ವರ್ಷ ಪದವಿ ತರಗತಿಗೆ ದಾಖಲಾತಿ ಪ್ರಮಾಣ ಅರ್ಧಕ್ಕೆ ಇಳಿದಿದೆ. ಸುಮಾರು 1.59 ಲಕ್ಷ ವಿದ್ಯಾರ್ಥಿಗಳು ಮಾತ್ರ ಪ್ರವೇಶ ಪಡೆದಿದ್ದಾರೆ. ಆದ್ದರಿಂದ ಉನ್ನತ ಶಿಕ್ಷಣ ಖಾತೆ ಸಚಿವರು ಈ ಕುರಿತು ಅಧ್ಯಯನ ಮಾಡಲು ಸಮಿತಿ ರಚಿಸಬೇಕು. ಕಾಂಗ್ರೆಸ್‌ -ಜೆಡಿಎಸ್‌ ಸಮಿಶ್ರ ಸರಕಾರದ ಕೊನೆ ದಿನಗಳಲ್ಲಿ ಒಂದು ಸಾವಿರದಷ್ಟು ಪದವಿ ಕಾಲೇಜಿನ ಉಪನ್ಯಾಸಕರನ್ನು ಬೇರೆಡೆಗೆ ನಿಯೋಜನೆ ಮಾಡಲಾಗಿದೆ. ರಾಜ್ಯದಲ್ಲಿ ಎರಡು ಸಾವಿರದಷ್ಟು ಉಪನ್ಯಾಸಕರ ಹುದ್ದೆಗಳು ಖಾಲಿ ಇದ್ದು, ನಮ್ಮ ಸರಕಾರದ ಅವಧಿಯಲ್ಲಿ ತುಂಬುವ ಪ್ರಯತ್ನ ಮಾಡಲಾಗುವುದು. ಕಾಲೇಜಿಗೆ ಶುದ್ಧ ಕುಡಿಯುವ ನೀರಿನ ಘಟಕ ಒದಗಿಸಲಾಗುವುದು ಎಂದು ಹೇಳಿದರು.

ಸಂಸದ ಶಿವಕುಮಾರ ಉದಾಸಿ ಮಾತನಾಡಿ, ಕೇಂದ್ರ ಸರಕಾರ ತರಲು ಇಚ್ಚಿಸಿರುವ ಹೊಸ ಶಿಕ್ಷಣ ನೀತಿಯಲ್ಲಿ ಕಂಠ ಪಾಠ ಮಾಡುವ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆಯಾಗಲಿದೆ. ಹೊಸ ಶಿಕ್ಷಣ ನೀತಿ ಶಿಕ್ಷಣದೊಂದಿಗೆ ತಂತ್ರಜ್ಞಾನ ಜೋಡಿಸುವ, ಜಾಗತೀಕ ವಿದ್ಯಮಾನಕ್ಕೆ ಅನುಗುಣವಾಗಿ ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಅಮೂಲಾಗ್ರ ಬದಲಾವಣೆ ತರಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು.

ಶಾಸಕ ರಾಮಣ್ಣ ಲಮಾಣಿ ಮಾತನಾಡಿ, ಪದವಿ ಕಾಲೇಜಿನಲ್ಲಿ 1.60 ಕೋಟಿ ರೂ. ವೆಚ್ಚದಲ್ಲಿ ಆರು ಕೊಠಡಿ ನಿರ್ಮಿಸಲು ಭೂಮಿ ಪೂಜೆ ನೆರವೇರಿಸಲಾಗಿದೆ. ಮುಂಬರುವ ದಿನಗಳಲ್ಲಿ ಪ್ರತಿ ವರ್ಷ ಅನುದಾನ ಹಾಕಿ ಕಾಲೇಜು ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.

Advertisement

ಆರ್‌.ಎಲ್. ಪೊಲೀಸ್‌ಪಾಟೀಲ ಮಾತನಾಡಿದರು. ಹೇಮಗಿರೀಶ ಹಾವಿನಾಳ, ಕರಬಸಪ್ಪ ಹಂಚಿನಾಳ, ಶ್ರೀನಿವಾಸ ಉಪ್ಪಿನಬೆಟಗೇರಿ, ಆನಂದ ಬನ್ನಿಕೊಪ್ಪ, ದೇವಪ್ಪ ಕಂಬಳಿ, ಆರ್‌.ಎಂ. ತಪ್ಪಡಿ, ಪ್ರದೀಪ ಗುಡದಪ್ಪನವರ, ಮಹಾಂತೇಶ ಕೊರಡಕೇರಿ, ನಾಗೇಶ ಹುಬ್ಬಳ್ಳಿ, ಎಚ್.ಎಂ. ಹೊಸಗಾಣಿಗೇರ, ಪ್ರಕಾಶ ಪಾಟೀಲ, ಎಸ್‌.ವಿ. ಪಾಟೀಲ, ಬುಡ್ಡಾ ಹೊಸಮನಿ ಇದ್ದರು. ಪ್ರಾಚಾರ್ಯ ಎಸ್‌.ಆರ್‌. ಚಿಗರಿ ಸಂಸದರು, ಉಭಯ ಶಾಸಕರಿಗೆ ಮನವಿ ಸಲ್ಲಿಸಿದರು. ಕಾವೇರಿ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next