Advertisement

ಸಿಎಂ ಶ್ವೇತಪತ್ರ ಹೊರಡಿಸಲಿ

12:51 PM Jun 12, 2017 | Team Udayavani |

ಬೆಂಗಳೂರು: ಕೇಂದ್ರದಲ್ಲಿ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಮತ್ತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕೇಂದ್ರದಿಂದ ರಾಜ್ಯಕ್ಕೆ ಎಷ್ಟು ಹಣ ಬಂದಿದೆ ಎಂಬ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶ್ವೇತಪತ್ರ ಹೊರಡಿಸಲಿ ಎಂದು ಕೇಂದ್ರ ಸಚಿವ ಅನಂತಕುಮಾರ್‌ ಆಗ್ರಹಿಸಿದ್ದಾರೆ.

Advertisement

ಕೇಂದ್ರದಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಪ್ರಕೃತಿ ವಿಕೋಪ ಪರಿಹಾರ, ತೆರಿಗೆ ಹಂಚಿಕೆ ಸೇರಿದಂತೆ ವಿವಿಧ ರೀತಿಯ ಅನುದಾನಗಳು ದಾಖಲೆ ಪ್ರಮಾಣದಲ್ಲಿ ರಾಜ್ಯಕ್ಕೆ ಹರಿದುಬಂದಿದೆ. ಆದರೆ, ಸಿದ್ದರಾಮಯ್ಯ ಹಾಗೂ ಅವರ ಸಂಪುಟ ಸದಸ್ಯರು ಕೇಂದ್ರ ಸಮರ್ಪಕ ಅನುದಾನ ನೀಡುತ್ತಿಲ್ಲ ಎಂದು ಸುಳ್ಳು ಆರೋಪ ಮಾಡುತ್ತಿದ್ದಾರೆ.

ಅದರ ಬದಲು ಯುಪಿಎ ಸರ್ಕಾರದ 10 ವರ್ಷಗಳ ಅವಧಿ ಮತ್ತು ಮೋದನಿ ನೇತೃತ್ವದ ಸರ್ಕಾರದ ಮೂರು ವರ್ಷಗಳ ಅವಧಿಯಲ್ಲಿ ರಾಜ್ಯಕ್ಕೆ ಬಿಡುಗಡೆಯಾದ ನೆರವಿನ ಬಗ್ಗೆ ಶ್ವೇತಪತ್ರ ಹೊರಡಿಸಬೇಕು. ಆಗ ರಾಜ್ಯದ ಆಡಳಿತಾರೂಢ ಕಾಂಗ್ರೆಸ್‌ ಸರ್ಕಾರದ ಬಣ್ಣ ಬಯಲಾಗಲಿದೆ ಎಂದು ಹೇಳಿದರು.

ಆಡಗೋಡಿಯ ಮುನಿಚಿನ್ನಪ್ಪ ಆಟದ ಮೈದಾನದಲ್ಲಿ ಭಾನುವಾರ ಮೇಕಿಂಗ್‌ ಡೆವಲಪ್‌ಮೆಂಟ್‌ ಆಫ್ ಇಂಡಿಯಾ ಫೆಸ್ಟ್‌ (ಮೋದಿ ಫೆಸ್ಟ್‌) ಉದ್ಘಾಟಿಸಿ ಅವರು ಮಾತನಾಡಿದರು. ಶೇ.50ರಷ್ಟು ಬೆಳೆ ನಷ್ಟಕ್ಕೆ ಮಾತ್ರ ಪರಿಹಾರ ಎನ್ನುವ ನಿಯಮಕ್ಕೆ ತಿದ್ದುಪಡಿ ತಂದು ಶೇ.33ರಷ್ಟು ಬೆಳೆ ನಷ್ಟಕ್ಕೂ ಪರಿಹಾರ ನೀಡಬೇಕೆನ್ನುವ ನಿಯಮ ಜಾರಿಗೆ ತರಲಾಗಿದೆ.

ಕಳೆದ ಮೂರು ವರ್ಷಗಳಲ್ಲಿ ಬೆಳೆನಷ್ಟ ಪರಿಹಾರವಾಗಿ ಕೇಂದ್ರದಿಂದ ರಾಜ್ಯಕ್ಕೆ ಸುಮಾರು 4600 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ವಿವರಿಸಿದರು. ಹಿಂದುಳಿದ ವರ್ಗಗಳ ಆಯೋಗಕ್ಕೆ ಸಂವಿಧಾನ ಸ್ಥಾನಮಾನಕ್ಕಾಗಿ ತಿದ್ದುಪಡಿ ತಂದು ಸಂಸತ್‌ನಲ್ಲಿ ಅಂಗೀಕರಿಸಲಾಗಿದೆ. ಆದರೆ, ಕಾಂಗ್ರೆಸ್‌ ಹುನ್ನಾರದಿಂದ ರಾಜ್ಯಸಭೆಯಲ್ಲಿ ನೆನೆಗುದಿಗೆ ಬಿದ್ದಿರುವ ಕಾರಣ ಮುಂಬರುವ ಮಳೆಗಾಲದ ಅಧಿವೇಶನದಲ್ಲಿ ತಿದ್ದುಪಡಿ ಜಾರಿಗೆ ಮತ್ತೂಮ್ಮೆ ಪ್ರಯತ್ನಿಸಲಾಗುವುದು ಎಂದರು.

Advertisement

ಕೇಂದ್ರದ ಸಾಧನೆಗಳು: ಕೇಂದ್ರ ಸರ್ಕಾರದ ಸಾಧನೆಗಳನ್ನು ವಿವರಿಸಿದ ಅವರು, ಕೇವಲ ಶೇ.27 ಜನರಿಗಷ್ಟೇ ಲಭ್ಯವಿದ್ದ ಡೆಬಿಟ್‌ ಕಾರ್ಡ್‌, ಕ್ರೆಡಿಟ್‌ ಕಾರ್ಡ್‌ನಂತಹ ಸೌಲಭ್ಯಗಳನ್ನು ಎನ್‌ಡಿಎ ಸರ್ಕಾರದ ಮೂರು ವರ್ಷದ ಅವಧಿಯಲ್ಲಿ ಬಹುತೇಕ ಜನಸಾಮಾನ್ಯರಿಗೆ ತಲುಪಿಸಿದೆ. ಬ್ಯಾಂಕ್‌ ಖಾತೆಯೇ ಇಲ್ಲದ ಬಡಡವರಿಗಾಗಿ 28 ಕೋಟಿ ಜನಧನ್‌ ಖಾತೆಗಳನ್ನು ತೆರೆಯಲಾಗಿದೆ.

ಮುದ್ರಾ ಬ್ಯಾಂಕ್‌ ಯೋಜನೆಯಡಿ 7.5 ಕೋಟಿ ಯುವಕರಿಗೆ 3.5 ಲಕ್ಷಕೋಟಿ ರೂಪಾಯಿಗೂ ಅಧಿಕ ಮೊತ್ತದ ಸಾವನ್ನು ಯಾವುದೇ ಖಾತರಿ ಇಲ್ಲದೆ ವಿತರಿಸಲಾಗಿದೆ. ಜೀವನಜ್ಯೋತಿ, ಜೀವನ ಸುರಕ್ಷ, ಅಟಲ ಪಿಂಚಣಿ ಯೋಜನೆ ಸೌಲಭ್ಯವನ್ನು 11.5 ಕೋಟಿ ಜನರಿಗೆ ತಲುಪಿಸಲಾಗಿದೆ ಎಂದರು.

ಮೋದಿ ಫೆಸ್ಟ್‌ ಅಂಗವಾಗಿ ಕೇಂದ್ರ ಸರ್ಕಾರದ ಆರ್ಥಿಕ ವಿಕಾಸ ಯೋಜನೆ, ಕೃಷಿ ಸಮೃದ್ಧಿ ಯೋಜನೆ, ಮಹಿಳಾ ಸಾಕ್ಷರತಾ ಯೋಜನೆ, ಕುಶಾಲ… ವಿಕಾಸ್‌ ಯೋಜನೆ, ಡಿಜಿಧನ್‌ ಯೋಜನೆ, ಬೇವು ಲೇಪಿತ ಯೂರಿಯಾ ಸೇರಿದಂತೆ 13 ವಿಷಯಗಳನ್ನೊಳಗೊಂಡ ಪ್ರದರ್ಶನ ಏರ್ಪಡಿಸಲಾಗಿತ್ತು.

ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌, ಶಾಸಕರಾದ ವಿ.ಸೋಮಣ್ಣ, ಗೋವಿಂದ ಕಾರಜೋಳ, ರಾಮಚಂದ್ರಗೌಡ, ಬಿ.ಎನ್‌.ವಿಜಯಕುಮಾರ್‌, ಎಸ್‌.ರಘು, ಎಲ್‌.ಎ.ರವಿಸುಬ್ರಮಣ್ಯ, ತಾರಾ ಅನುರಾಧ, ನಗರ ಬಿಜೆಪಿ ಅಧ್ಯಕ್ಷ$ಪಿ.ಎನ್‌.ಸದಾಶಿವ, ಬಿಬಿಎಂಪಿ ಸದಸ್ಯರಾದ ಸ್ವರಸ್ವತಿ, ಸರಳ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next