ದೇಶದ ಬ್ಯಾಂಕ್‌ಗಳನ್ನು ಈಗ ಸಮಸ್ಯೆಯ ಕೂಪಕ್ಕೆ ನೂಕುತ್ತಿರುವುದು ವಸೂಲಾಗದ ಸಾಲಗಳು. ಬ್ಯಾಂಕ್‌ಗಳು ಅನುತ್ಪಾದಕ ಆಸ್ತಿ ಎಂದು ಗುರುತಿಸುವ ಈ ಸಾಲ ಈಗ ಅಗಾಧವಾಗಿ ಬೆಳೆದು ಬ್ಯಾಂಕ್‌ಗಳನ್ನೇ ನುಂಗುತ್ತಿರುವುದು ವಿಪರ್ಯಾಸ. ಇದು ಜನಸಾಮಾನ್ಯರಿಗೆ ನೀಡಿದ ಸಾಲ ಅಲ್ಲ, ದೊಡ್ಡ ದೊಡ್ಡ ಕಾರ್ಪೋರೇಟ್ ಕಂಪೆನಿಗಳ ಸಾಲ.
ಮತ್ತೂಂದು ಬ್ಯಾಂಕ್ ಅವನತಿಯತ್ತ ಸಾಗಿದೆ. ಈ ಸಲ ಮುಳುಗುತ್ತಿರುವುದು ಖಾಸಗಿ ವಲಯದ ಐದನೇ ಅತಿ ದೊಡ್ಡ ಬ್ಯಾಂಕ್ ಆಗಿರುವ ಯೆಸ್ ಬ್ಯಾಂಕ್. ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಈ ಬ್ಯಾಂಕಿನ ನಿಯಂತ್ರಣವನ್ನು ಆರ್‌ಬಿಐ ತನ್ನ ಕೈಗೆ ತೆಗೆದುಕೊಂಡಿದೆ. ಹಣ ಹಿಂಪಡೆತ ಮಿತಿಯನ್ನು ತಿಂಗಳಿಗೆ 50,000 ರೂ.ಮಿತಿಗೊಳಪಡಿಸಿರುವ ಆರ್‌ಬಿಐ ಇದೇ ವೇಳೆ ಬ್ಯಾಂಕನ್ನು ಪುನಶ್ಚೇತನಗೊಳಿಸುವ ಮಾರ್ಗಗಳನ್ನು ಕಂಡುಕೊಳ್ಳಲು ಮುಂದಾಗಿದೆ. ಆದರೆ ಒಂದು ಸಲ ಬ್ಯಾಂಕಿನಲ್ಲಿ ಸಮಸ್ಯೆ ಇದೆ ಎಂದು ಗೊತ್ತಾದ ಕೂಡಲೇ ಜನರು ಗಾಬರಿಯಾಗುವುದು ಸಹಜ. ಬ್ಯಾಂಕಿನ ಶಾಖೆಗಳ ಮುಂದೆ ಮತ್ತು ಎಟಿಎಂಗಳ ಮುಂದೆ ಜನರು ಹಣ ಹಿಂಪಡೆಯಲು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಕೆಲ ತಿಂಗಳ ಹಿಂದೆಯಷ್ಟೇ ಮಹಾರಾಷ್ಟ್ರದ ಪಿಎಂಸಿ ಎಂಬ ಸಹಕಾರಿ ಬ್ಯಾಂಕೊಂದು ಇದೇ ರೀತಿ ದಿವಾಳಿಯೆದ್ದು ರಂಪಾಟವಾಗಿತ್ತು. ಅದರ ಬಿಸಿ ಆರುವ ಮೊದಲೇ ಯೆಸ್ ಬ್ಯಾಂಕ್‌ನಲ್ಲಿ ಸಮಸ್ಯೆಗಳು ಕಾಣಿಸಿಕೊಂಡಿವೆ. ಐದನೇ ಜಾಗತಿಕ ಆರ್ಥಿಕ ಶಕ್ತಿಯಾಗಿ ಬೆಳೆದು ನಿಂತಿರುವ ದೇಶದ ಅರ್ಥ ವ್ಯವಸ್ಥೆಯ ಅಡಿಪಾಯವಾಗಿರುವ ಬ್ಯಾಂಕ್‌ಗಳು ಈ ರೀತಿ ಪದೇಪದೆ ಬಿರುಗಾಳಿಗೆ ಸಿಲುಕಿದ ನಾವೆಯಂತಾಗುವುದು ಮಾತ್ರ ದುರದೃಷ್ಟಕರ ಸಂಗತಿ. ಬ್ಯಾಂಕಿಂಗ್ ವಲಯದಲ್ಲಿ ಎಲ್ಲವೂ ಸರಿಯಾಗಿಲ್ಲ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ.
ಅರ್ಥ ಶಾಸ್ತ್ರಜ್ಞರು ಮತ್ತು ಬ್ಯಾಂಕಿಂಗ್ ಕ್ಷೇತ್ರದ ವೃತ್ತಿಪರರು ಆಡಳಿತ ವ್ಯವಸ್ಥೆಯಲ್ಲಿದ್ದರೆ ವಿತ್ತೀಯ ಸಮಸ್ಯೆಗಳು ನಿವಾರಣೆಯಾಗಬಹುದು ಎಂಬ ಪ್ರತಿಪಾದನೆಯೂ ಯೆಸ್ ಬ್ಯಾಂಕ್ ವಿಚಾರದಲ್ಲಿ ಹುಸಿಯಾಗಿದೆ. ಏಕೆಂದರೆ ಈ ಬ್ಯಾಂಕನ್ನು ಸ್ಥಾಪಿಸಿದ್ದು ಹಣಕಾಸು ಕ್ಷೇತ್ರದ ಮೂವರು ದಿಗ್ಗಜರು. ಆದರೆ ಸರಿಯಾಗಿ ಎರಡು ದಶಕ ಪೂರ್ತಿ ಅವರಿಗೆ ಬ್ಯಾಂಕನ್ನು ನಡೆಸಿಕೊಂಡು ಬರಲು ಸಾಧ್ಯವಾಗಿಲ್ಲ. ಹಾಗೆಂದು ಯೆಸ್ ಬ್ಯಾಂಕಿನಲ್ಲಿ ಸಮಸ್ಯೆಯಿದೆ ಎನ್ನುವುದು ಗೊತ್ತಾಗಿದ್ದು ಇದೇ ಮೊದಲೇನಲ್ಲ. 2017ರಲ್ಲೇ ಈ ಬಗ್ಗೆ ಸುಳಿವು ಸಿಕ್ಕಿತ್ತು.ಇತ್ತೀಚೆಗೆ ಪಿಎಂಸಿ ಬ್ಯಾಂಕಿನ ಸಮಸ್ಯೆ ಬಹಿರಂಗವಾದ ಸಂದರ್ಭದಲ್ಲೂ ಯೆಸ್ ಬ್ಯಾಂಕ್ ಶೇರು ಮೌಲ್ಯ ಸುಮಾರು ಶೇ. 40 ಕುಸಿದಿತ್ತು. ಈ ಸಂದರ್ಭದಲ್ಲೇ ಈ ಬ್ಯಾಂಕಿನ ಮೇಲೆ ಕಣ್ಗಾವಲು ಇಡಬೇಕೆಂಬ ಸಲಹೆಯನ್ನು ಆರ್ಥಿಕ ತಜ್ಞರು ನೀಡಿದ್ದರು. ಆದರೆ ಆರ್‌ಬಿಐ ಮತ್ತು ಸರಕಾರ ಅದು ಪೂರ್ತಿ ಕುಸಿಯುವ ತನಕ ಕಾದು ಕುಳಿತುಕೊಂಡದ್ದೇ ಇಷ್ಟೆಲ್ಲ ಅವಾಂತರಗಳಿಗೆ ಕಾರಣ.
ದೇಶದ ಬ್ಯಾಂಕ್‌ಗಳನ್ನು ಈಗ ಸಮಸ್ಯೆಯ ಕೂಪಕ್ಕೆ ನೂಕುತ್ತಿರುವುದು ವಸೂಲಾಗದ ಸಾಲಗಳು.ಬ್ಯಾಂಕ್‌ಗಳು ಅನುತ್ಪಾದಕ ಆಸ್ತಿ ಎಂದು ಗುರುತಿಸುವ ಈ ಸಾಲ ಈಗ ಅಗಾಧವಾಗಿ ಬೆಳೆದು ನಿಂತು ಬ್ಯಾಂಕ್‌ಗಳನ್ನೇ ನುಂಗುತ್ತಿರುವುದು ವಿಪರ್ಯಾಸ. ಹಾಗೆಂದು ಇದು ಜನಸಾಮಾನ್ಯರಿಗೆ ನೀಡಿದ ಸಾಲ ಅಲ್ಲ, ಬದಲಾಗಿ ದೊಡ್ಡ ದೊಡ್ಡ ಕಾರ್ಪೋರೇಟ್ ಕಂಪೆನಿಗಳ ಸಾಲ. 2005ರಿಂದೀಚೆಗೆ ಕಾರ್ಪೋರೇಟ್ ಕಂಪೆನಿಗಳಿಗೆ ಉದಾರವಾಗಿ ಸಾಲ ನೀಡುವ ನೀತಿಯನ್ನು ಅನುಸರಿಸಿದ ಪರಿಣಾಮವನ್ನು ಈಗ ಬ್ಯಾಂಕ್‌ಗಳು ಅನುಭವಿಸುತ್ತಿವೆ ಎನ್ನುತ್ತಿದೆ ಒಂದು ವರದಿ. ಇದರ ಜೊತೆಗೆ ಸಾಲಮನ್ನಾದಂಥ ಮತಬೇಟೆಯ ತಂತ್ರಗಳು ಕೂಡ ಬ್ಯಾಂಕುಗಳಿಗೆ ಕಂಟಕವಾಗುತ್ತಿರುವುದು ಸುಳ್ಳಲ್ಲ.
ಆದರೆ ಇದರಿಂದ ಸಾಲ ಪಡೆದಿರುವ ಕಾರ್ಪೋರೇಟ್ ಕಂಪೆನಿಗಳಿಗೆ ಸಮಸ್ಯೆಯಾಗುವುದಿಲ್ಲ. ಹಣ ಕಳೆದುಕೊಳ್ಳುವುದು ಚಿಕ್ಕಪುಟ್ಟ ಮೊತ್ತವನ್ನು ಠೇವಣಿಯಾಗಿಟ್ಟಿರುವ ಬಡ ಮತ್ತು ಮಧ್ಯಮ ವರ್ಗದ ಜನರು. ಯೆಸ್ ಬ್ಯಾಂಕಿನಲ್ಲೂ ಜನಸಾಮಾನ್ಯರ 2 ಲಕ್ಷ ಕೋಟಿ ರೂ.ಗೂ ಮಿಕ್ಕಿದ ಠೇವಣಿಯಿದೆ. ಈ ಠೇವಣಿಗೆ ಯಾವುದೇ ಅಪಾಯವಾಗುವುದಿಲ್ಲ ಎಂದು ಸರಕಾರ ಹೇಳುತ್ತಿದ್ದರೂ ಜನರಲ್ಲಿ ಭರವಸೆ ಹುಟ್ಟುತ್ತಿಲ್ಲ.ಠೇವಣಿ ಮೇಲಿನ ವಿಮಾ ಸುರಕ್ಷೆಯನ್ನು 5 ಲ.ರೂ.ಗೇರಿಸಿರುವುದರಿಂದ ಕನಿಷ್ಠ ಇಷ್ಟು ಮೊತ್ತವಾದರೂ ಸಿಗುವ ಭರವಸೆ ಇಟ್ಟುಕೊಳ್ಳಬಹುದು.
ಖಾಸಗಿ, ಸರಕಾರಿ ಮತ್ತು ಸಹಕಾರಿ ಬ್ಯಾಂಕ್‌ಗಳೆಲ್ಲ ದೇಶದ ಆರ್ಥಿಕತೆಯ ಬಂಡಿಯ ಗಾಲಿಗಳಿದ್ದಂತೆ. ಆರ್ಥಿಕತೆ ಮುಂದೆ ಸಾಗಬೇಕಾದರೆ ಈ ಎಲ್ಲ ಗಾಲಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು. ಇದು ಸಾಧ್ಯವಾಗಬೇಕಾದರೆ ಬ್ಯಾಂಕಿಂಗ್ ಕ್ಷೇತ್ರದಲ್ಲಿರುವ ಲೋಪದೋಷಗಳನ್ನು ಸರಿಪಡಿಸುವ ಕೆಲಸವನ್ನು ಆದ್ಯತೆಯಲ್ಲಿ ಮಾಡಬೇಕು.ಬ್ಯಾಂಕಿಂಗ್ ವಲಯ ಸ್ವಚ್ಚವಾಗುವುದು ಅತಿ ಅಗತ್ಯ. ಆಗಾಗ ಬ್ಯಾಂಕ್‌ಗಳು ದಿವಾಳಿಯಾಗುತ್ತಿರುವ ಸುದ್ದಿಗಳು ಬರುತ್ತಿದ್ದರೆ ಜನಸಾಮಾನ್ಯರಿಗೆ ಈ ವ್ಯವಸ್ಥೆಯ ಮೇಲಿನ ನಂಬಿಕೆ ಹೊರಟು ಹೋಗುವ ಅಪಾಯವಿದೆ.