ಮುಂಬಯಿ, ಆ. 9: ಖಾರ್‌ಘರ್ ಕರ್ನಾಟಕ ಸಂಘವು ಹದಿನೇಳು ವರ್ಷಗಳಲ್ಲಿ ಬೆಳೆದು ಬಂದ ರೀತಿ ಅನನ್ಯವಾಗಿದೆ. ಬೆರಳೆಣಿಕೆಯ ಕಾರ್ಯಕ್ರಮಗಳೊಂದಿಗೆ ಗಳಿಸಿದ ಸದಸ್ಯರ ಪ್ರೀತಿ ವಿಶ್ವಾಸಗಳು ಅಭಿನಂದನೀಯವಾಗಿದೆ ಎಂದು ಕರ್ನಾಟಕ ಸಂಘ ಖಾರ್‌ಘರ್ ಅಧ್ಯಕ್ಷೆ ಎಸ್. ನಳಿನಾ ಪ್ರಸಾದ್ ತಿಳಿಸಿದರು.
ಆ. 4ರಂದು ಖಾರ್‌ಘರ್ ಸೆಕ್ಟರ್ 11 ರಲ್ಲಿನ ಕೇಂದ್ರಿಯ ವಿಹಾರ್ ಹಾಲ್ನಲ್ಲಿ ನಡೆದ ಸಂಘದ 17 ನೇ ಸಂಸ್ಥಾಪನಾ ದಿನ ಹಾಗೂ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘದ ನಾಡು-ನುಡಿಯನ್ನು ಬಿಂಬಿಸುವ ಕಾರ್ಯಕ್ರಮಗಳಲ್ಲಿ ಕನ್ನಡಿಗರು ಪಾಲ್ಗೊಂಡುಸಹಕರಿಸಬೇಕು. ನಾಡಿನ ಸಂಸ್ಕೃತಿ, ಸಂಸ್ಕಾರ,ಆಚಾರ-ವಿಚಾರಗಳ ಬಗ್ಗೆ ಯುವಪೀಳಿಗೆಗೆ ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿದಾಗ ಸಂಘದ ಧ್ಯೇಯೋದ್ದೇಶಗಳು ಸಾರ್ಥಕವಾಗುತ್ತದೆ. ಸಂಘದ ಹೊಸ ಯೋಜನೆಗಳ ಬಗ್ಗೆ, ಅದರಲ್ಲೂ ವಿಶೇಷವಾಗಿ ಸದಸ್ಯರ ಮಕ್ಕಳಿಗಾಗಿ ಕನ್ನಡ ಕಲಿಕಾ ಶಿಕ್ಷಣ ತರಗತಿಗಳನ್ನು ಪ್ರಸ್ತುತ ವರ್ಷದಿಂದ ಆರಂಭಿಸಲಾಗುವುದು. ಇದರ ಪ್ರಯೋಜನವನ್ನು ಕನ್ನಡಿಗರ ಮಕ್ಕಳು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಶ್ರೀ ಲಲಿತಾ ಭಜನಾ ಮಂಡಳಿಯ ವತಿಯಿಂದ ಕಲಾ ಭಾಗವತ್ ಅವರ ನೇತೃತ್ವದಲ್ಲಿ ಭಜನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ನಂತರ ಮಹಿಳೆಯರಿಗಾಗಿ ಶ್ರಾವಣ ಮಾಸದ ವಿಶೇಷವಾಗಿ ಅರಸಿನ ಕುಂಕುಮ ಕಾರ್ಯಕ್ರಮ ನಡೆಯಿತು. ಮಹಿಳೆಯರು ಪರಸ್ಪರ ಅರಸಿದ ಕುಂಕುಮವನ್ನು ಹಚ್ಚಿಕೊಂಡು ಶುಭಹಾರೈಸಿಕೊಂಡರು. ಆನಂತರ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಸಂಘದ ಕಾರ್ಯದರ್ಶಿ ಚಿತ್ರಾ ರಾವ್ ಸ್ವಾಗತಿಸಿ, ಸಂಘದ ವಾರ್ಷಿಕ ವರದಿಯನ್ನು ವಾಚಿಸಿದರು.
ವಾರ್ಷಿಕ ಆದಾಯ, ಖರ್ಚು ವೆಚ್ಚಗಳ ವಿವರವನ್ನು ಕೋಶಾಧಿಕಾರಿ ಎಸ್. ಸಿ. ಹರಕಂಗಿ ಅವರು ಸಭೆಗೆ ತಿಳಿಸಿದರು. ಸಂಘದಲ್ಲಿ ವರ್ಷ ಪೂರ್ತಿ ನಡೆಯುವ ಕಾರ್ಯಕ್ರಮಗಳ ಬಗ್ಗೆ ಸದಸ್ಯರು ತಮ್ಮ ಅಭಿಪ್ರಾಯ ಹಂಚಿಕೊಂಡು. ಸಂಘದ ಅಭಿವೃದ್ಧಿಯ ಬಗ್ಗೆ ಸದಸ್ಯ ಬಾಂಧವರು ತಮ್ಮ ಸಲಹೆ ಸೂಚನೆಗಳನ್ನು ನೀಡಿದರು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷೆ ಮೈಥಿಲಿ ಪ್ರಸಾದ್ ಭಟ್ ಅವರು ಉಪಸ್ಥಿತರಿದ್ದರು. ಸಭೆಯ ನಂತರ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಹತ್ತು ಹಾಗೂ ಹನ್ನೆರಡನೆಯ ತರಗತಿಯಲ್ಲಿ ಶೇ. 90 ಕ್ಕಿಂತ ಅಧಿಕ ಅಂಕಗಳನ್ನು ಪಡೆದು ತೇರ್ಗಡೆಯಾದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ನಂತರ ನೆಡದ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಘದ ಸದಸ್ಯೆ, ಯೋಗ ಶಿಕ್ಷಕಿ ಬಿ. ಎಸ್. ಸ್ವರ್ಣಾಂಬ ಅವರು ಯೋಗದಿಂದ ನಿರೋಗ ಕುರಿತಾಗಿ ಸದಸ್ಯರಿಗೆ ಉಪಯುಕ್ತ ಮಾಹಿತಿ ನೀಡಿದರು.
ಜತೆ ಕಾರ್ಯದರ್ಶಿ ಡಾ| ಜಿ. ಪಿ. ವಿಮಲಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕಾರಿ ಸಮಿತಿಯ ಸದಸ್ಯೆ ಆಶಾ ಪೂಜಾರಿ ವಂದನೆಗೈದರು. ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಡಾ| ಎಂ. ಎಸ್. ನಾಗೇಶ್, ನಾಗರಾಜ ಗಾಣಿಗ, ಸುಮತಿ ಅರುಣ್, ಜ್ಯೋತಿ ದೇವರು ಸಹಕರಿಸಿದರು. ಕಾರ್ಯಕ್ರಮದ ನಂತರ ಲಘು ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಸದಸ್ಯ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.