ಬಳ್ಳಾರಿ: ಬಾಲ್ಯ ವಿವಾಹದ ಪ್ರಕರಣಗಳನ್ನು ಕಾಟಾಚಾರಕ್ಕೆ ದಾಖಲು ಮಾಡದೆ, ಹೆಚ್ಚಿನ ಪ್ರಮಾಣದಲ್ಲಿ ಜಾಗೃತಿ ಮೂಡಿಸಿ ಪರಿಣಾಮಕಾರಿಯಾಗಿ ಕ್ರಮಕೈಗೊಳ್ಳಬೇಕು ಎಂದು 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರನ್ಯಾಯಾಧೀಶ ಎಂ. ಖಾಸಿಂ ಚೂರಿಖಾನ್ ಹೇಳಿದರು.
ನಗರದ ಜಿಪಂ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ನ್ಯಾಯಾಂಗ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಬಾಲ್ಯ ವಿವಾಹ ನಿಷೇಧ ಕಾಯ್ದೆ-2006, ಬಾಲ್ಯ ವಿವಾಹ ನಿಷೇಧ(ಕರ್ನಾಟಕತಿದ್ದುಪಡಿ) ಕಾಯ್ದೆ-2006, ಬಾಲ್ಯ ವಿವಾಹ ನಿಷೇಧ ಕರ್ನಾಟಕ ನಿಯಮಾವಳಿ-2014 ಕುರಿತು ಬಾಲ್ಯವಿವಾಹ ನಿಷೇಧಾ ಕಾರಿಗಳ ಮತ್ತು ನ್ಯಾಯಾಧೀಶರುಗಳಿಗೆ ಒಂದು ದಿನದ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಪ್ರತಿ 20 ಮದುವೆಯಲ್ಲಿ 5 ಬಾಲ್ಯವಿವಾಹಗಳು ನಡೆಯುತ್ತಿವೆ. ಬಾಲ್ಯವಿವಾಹ ಸಮಾಜವನ್ನು ಪಿಡುಗಾಗಿ ಕಾಡುತ್ತಿದೆ. ಕಾನೂನು ಇದ್ದರು ಪರಿಣಾಮಕಾರಿ ಕ್ರಮಕೈಗೊಳ್ಳುತ್ತಿಲ್ಲ. ಇಲಾಖೆಗಳು, ಸಂಘ-ಸಂಸ್ಥೆ ನಾನಾ ಜಾಗೃತಿ ಮೂಡಿಸಿದರೂ, ಸಮಾಜದಲ್ಲಿ ಹೆಣ್ಣು ಎಂದರೆ ಭಾರ ಎನ್ನುವ ಮನೋಭಾವ, ಬಡತನ, ಆಸೆ ಆಮಿಷ, ಅಸಮರ್ಥನೆ ಸೇರಿ ನಾನಾ ಕಾರಣಗಳಿಂದ ಇನ್ನೂ ಜೀವಂತವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಬಾಲ್ಯವಿವಾಹ ನಿಷೇಧ ಕಾಯ್ದೆಯು ಮೊದಲಿನಿಂದಲೂ ಜಾರಿಯಲ್ಲಿದೆ ಎಂದ ಅವರು, ಬಾಲ್ಯ ವಿವಾಹಗಳು ಮೊದಲಿಗಿಂತಲೂ ಕಡಿಮೆ ಎನಿಸಿದರೂ ಕಾಯ್ದೆಯು ಪರಿಣಾಮಕಾರಿಯಾಗಿ ಜಾರಿಯಾಗುತ್ತಿಲ್ಲ. ವರ್ಷಕ್ಕೊಂದು ಪ್ರಕರಣ ದಾಖಲಿಸುವುದು, ಕಾಟಾಚಾರಕ್ಕೆ ಪ್ರಕರಣ ದಾಖಲು ಮಾಡುವುದು ಅಲ್ಲ. ಅದನ್ನು ಸಂಪೂರ್ಣವಾಗಿ ತಡೆಯಲು ಅ ಧಿಕಾರಿಗಳು ಯಾವುದೇ ಒತ್ತಡಕ್ಕೆ ಒಳಗಾಗದೇ, ಕ್ರಮಕೈಗೊಳ್ಳಬೇಕು. ಒಂದು ಗ್ರಾಮದಲ್ಲಿ ಪ್ರಕರಣ ದಾಖಲಾದರೆ, ಪಕ್ಕದ ಗ್ರಾಮಗಳಲ್ಲಿನ ಜನರು ಸಹ ಜಾಗೃತರಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಿಪಂ ಸಿಇಒ ಕೆ.ನಿತೀಶ್, ಬಾಲ್ಯವಿವಾಹದ ಬಗ್ಗೆ ಎಸ್‌ಸಿ, ಎಸ್‌ಟಿ, ಕೆಳವರ್ಗದ ಜನರಿಗೆ ಹೆಚ್ಚಿನ ಜಾಗ್ರತಿ ಮೂಡಿಸಬೇಕಾಗಿದೆ. ಕಾನೂನಿನ ಪ್ರಕಾರ ಪ್ರಕರಣ ದಾಖಲಾಗುತ್ತದೆ. ಆದ್ದರಿಂದ ಮಹಿಳಾ ಮತ್ತುಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ ಹೆಚ್ಚಿನ ಸಹಕಾರ ನೀಡಬೇಕು. ಪ್ರಕರಣ ದಾಖಲಿಸಿ ಕಾನೂನಿಗೆ ಹೆಚ್ಚು ಬಲ ನೀಡಿದರೆ ತಪ್ಪಿತಸ್ಥರಿಗೆ ಖಂಡಿತ ಶಿಕ್ಷೆಯಾಗುತ್ತದೆ. ಜತೆಗೆ ಜಾಗೃತಿಯೂ ಮೂಡುತ್ತದೆ. ಅಲ್ಲದೇ, ಬಾಲ್ಯವಿವಾಹದ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲು ಜನಪ್ರತಿನಿಧಿ ಗಳು ಸಹ ಮುಂದಾಗಬೇಕು. ಜತೆಗೆ ಸ್ಥಳೀಯರು ಪ್ರೋತ್ಸಾಹ ನೀಡಿದಲ್ಲಿ ಅದನ್ನು ಸಂಪೂರ್ಣವಾಗಿ ನಿಯಂತ್ರಿಸಬಹುದು ಎಂದು ತಿಳಿಸಿದರು.
ಜಿ.ಪಂ ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿ, ಉಪಾಧ್ಯಕ್ಷೆ ದಿನಾ ಮಂಜುನಾಥ ಮಾತಮಾಡಿದರು. ನ್ಯಾಯಾಂಗ ದಂಡಾಧಿಕಾರಿ ಸುಜಾತಾ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅರ್ಜುನ್ ಎಸ್.ಮಲ್ಲೂರ್, ಕಾನೂನು ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ| ಉಡೇದ ಷಡಾಕ್ಷರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಎಸ್.ಉಷಾ ಸೇರಿದಂತೆ ಹಲವರು ಇದ್ದರು.