Advertisement
ಅದಕ್ಕೆ ಪೂರಕವೆಂಬಂತೆ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ ಜತೆಗೆ ಗೋವಾ ಮುಖ್ಯಮಂತ್ರಿಗಳು ಸಭೆ ಸೇರಿ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಮಹದಾಯಿ ನದಿ ವಿವಾದ ನ್ಯಾಯಾಧೀಕರಣ ನೀರು ಹಂಚಿಕೆ ಮಾಡಿರುವ ಆದೇಶವನ್ನು ಗೆಜೆಟ್ ಅಧಿಸೂಚನೆ ಹೊರಡಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲು ತೀರ್ಮಾನಿಸಿದ್ದಾರೆ. ಕೆಲ ವರ್ಷಗಳಿಂದ ಸಾಧ್ಯವಾಗದ ಈ ಪ್ರಕ್ರಿಯೆಗೆ ಸದ್ಯ ಚಾಲನೆ ಸಿಗುವ ಲಕ್ಷಣ ಕಾಣುತ್ತಿರುವುದು ಆಶಾದಾಯಕ.
Related Articles
Advertisement
ನ್ಯಾಯಾಧೀಕರಣ ಆದೇಶ ನೀಡಿದ್ದರೂ ಗೆಜೆಟ್ ನೋಟಿಫಿಕೇಷನ್ ಪ್ರಕಟವಾಗಿಲ್ಲ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿದೆ. ಗೋವಾ, ಮಹಾರಾಷ್ಟ್ರ ಮಾತ್ರವಲ್ಲದೆ ಕೇಂದ್ರದಲ್ಲೂ ಬಿಜೆಪಿಯೇ ಅಧಿಕಾರದಲ್ಲಿದೆ. ಹಾಗಾಗಿ ಮೂರು ರಾಜ್ಯಗಳು ಪರಸ್ಪರ ಮಾತುಕತೆ ಮೂಲಕವೇ ಸಮಸ್ಯೆಗಳನ್ನು ಬಗೆಹರಿಸಿಕೊಂಡರೆ ಕೇಂದ್ರ ಸರ್ಕಾರವೂ ಸಹಕರಿಸಬಹುದು. ಇದರಿಂದ ರಾಜ್ಯಕ್ಕೆ ಹೆಚ್ಚಿನ ಅನುಕೂಲವಾಗುವ ನಿರೀಕ್ಷೆ ಮೂಡಿದೆ. ಆ ನಿಟ್ಟಿನಲ್ಲಿ ರಾಜ್ಯದ ಮುಖ್ಯ ಮಂತ್ರಿಗಳು ಪ್ರಯತ್ನ ಆರಂಭಿಸಿದಂತೆ ಕಾಣುತ್ತಿದೆ.
ತಿಂಗಳ ಹಿಂದೆ ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ಭಾರೀ ಪ್ರಮಾಣದಲ್ಲಿ ನೀರು ಹರಿಸಿದ್ದರ ಜತೆಗೆ ಭಾರಿ ಮಳೆ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳು ಜಲಾವೃತಗೊಂಡು ಅಪಾರ ಪ್ರಮಾಣದಲ್ಲಿ ಆಸ್ತಿಪಾಸ್ತಿ ನಷ್ಟ ಉಂಟಾಗಿತ್ತು. ಇದೀಗ ಮುಂಗಾರು ಆರಂಭದ ಸಂದರ್ಭದಲ್ಲಿ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಹರಿಸುವ ಪ್ರಕ್ರಿಯೆಯ ಮೇಲ್ವಿಚಾರಣೆಗೆ ಉನ್ನತ ಮಟ್ಟದ ಸಮನ್ವಯ ಸಮಿತಿ ರಚಿಸಲು ಉಭಯ ರಾಜ್ಯಗಳ ಮುಖ್ಯಮಂತ್ರಿಗಳು ತೀರ್ಮಾನಿಸಿರುವುದು ಸ್ವಾಗತಾರ್ಹ. ಇದರಿಂದ ಕೊಯ್ನಾ ಜಲಾಶಯದಿಂದ ರಾಜ್ಯಕ್ಕೆ ಹರಿಸುವ ನೀರಿನ ಪ್ರಮಾಣದ ಬಗ್ಗೆ ಮುಂಚಿತವಾಗಿಯೇ ನಿಖರ ಮಾಹಿತಿ ಸಿಗಲಿದ್ದು, ಅದಕ್ಕೆ ಪೂರಕವಾಗಿ ಜಲಾಶಯಗಳಲ್ಲಿ ನೀರು ಸಂಗ್ರಹದ ಸಮನ್ವಯಕ್ಕೆ ಅನುಕೂಲವಾಗಲಿದೆ. ಕರ್ನಾಟಕ, ಮಹಾರಾಷ್ಟ್ರ, ಗೋವಾ ಮುಖ್ಯಮಂತ್ರಿಗಳು ಪರಸ್ಪರ ಸೌಹಾರ್ದಯುತ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಮುಂದಾದರೆ ಮೂರು ರಾಜ್ಯದ ಜನ ನೆಲ-ಜಲ ಸಂಘರ್ಷವಿಲ್ಲದೆ ಬದುಕಲು, ಪ್ರಗತಿ ಹೊಂದಲು ಸಾಧ್ಯವಾಗುವ ವಿಶ್ವಾಸ ಮೂಡಲಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ಇದು ಅತ್ಯಗತ್ಯವಾಗಿದೆ.