ಹಾಸನ: ರಾಜ್ಯದಲ್ಲಿ ಸಂಭವಿಸಿರುವ ಅತಿವೃಷ್ಟಿ ಹಾಗೂ ಪ್ರವಾಹ ಪರಿಹಾರ ಕಾರ್ಯಗಳಿಗೆ ಕೇಂದ್ರ ಸರ್ಕಾರ ತಕ್ಷಣಕ್ಕೆ ಕನಿಷ್ಠ 5 ಸಾವಿರ ಕೋಟಿ ರೂ.ಬಿಡುಗಡೆ ಮಾಡಬೇಕು. ಮುಖ್ಯಮಂತ್ರಿ ಯಡಿಯೂರಪ್ಪ ಅವರು ತುರ್ತಾಗಿ ವಿರೋಧ ಪಕ್ಷಗಳ ಮುಖಂಡರ ಸಭೆ ಕರೆದು ಈ ಬಗ್ಗೆ ಚರ್ಚಿಸಬೇಕೆಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಗೃಹ ಸಚಿವ ಅಮಿತ್ ಶಾ ಅವರು ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಸಮೀಕ್ಷೆ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿ ಹಾಗೂ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ ನಂತರವೂ ತುರ್ತು ಪರಿಹಾರವನ್ನು ಘೋಷಣೆ ಮಾಡದೆ ಹೋಗಿರುವುದು ಆಶ್ವರ್ಯ ತಂದಿದೆ. ತುರ್ತು ಪರಿಹಾರ ಘೋಷಣೆ ಮಾಡಿದ್ದರೆ ಪ್ರವಾಹ ಸಂತ್ರಸ್ತರಿಗೆ ಧೈರ್ಯ ತುಂಬಿದಂತಾಗುತ್ತಿತ್ತು ಎಂದರು.
ರಾಜ್ಯದ ಖಜಾನೆ ಸುಸ್ಥಿತಿಯಲ್ಲಿದೆ: ಕಳೆದ 15 ದಿನಗಳಿಂದ ರಾಜ್ಯದಲ್ಲಿ ಅಧಿಕಾರಿಗಳ ವರ್ಗಾವಣೆಯ ಬಿಡ್ಡಿಂಗ್ ನಡಿಯುತ್ತಿದೆ. ಮುಖ್ಯಮಂತ್ರಿ ಮತ್ತು ಅವರ ಸಮೀಪ ವರ್ತಿಗಳು ಕೆಲ ದಿನಗಳ ಮಟ್ಟಿಗಾದರೂ ಅಧಿಕಾರಿಗಳ ವರ್ಗಾವಣೆಯ ಬಿಡ್ಡಿಂಗ್ ಬಿಟ್ಟು ಅತಿವೃಷ್ಟಿ ಹಾಗೂ ಪ್ರವಾಹ ಸಂತ್ರಸ್ತರಿಗೆ ಪರಿಹಾರ ಕೈಗೊಳ್ಳಲು ಅಧಿಕಾರಿಗಳನ್ನು ಬಳಸಿಕೊಳ್ಳಲಿ. ಲೋಕೋಪಯೋಗಿ ಇಲಾಖೆ, ಜಲ ಸಂಪನ್ಮೂಲ ಇಲಾಖೆ, ಪಂಚಾಯತ್ ರಾಜ್ ಇಲಾಖೆಯ ಎಂಜಿನಿಯರುಗಳ ವರ್ಗಾವಣೆಯ ಓಪನ್ ಬಿಡ್ಡಿಂಗ್ ನಡೆಯುತ್ತಿದೆ. ಹಿರಿಯ ಅಧಿಕಾರಿಗಳ ವರ್ಗಾವಣೆಯೂ ನಡೆಯುತ್ತಿದೆ. ಹೀಗಿರುವಾಗ ಅಧಿಕಾರಿಗಳು ಪರಿಹಾರ ಕಾರ್ಯಗಳಿಗೆ ಹೇಗೆ ಸಹಕರಿಸುತ್ತಾರೆ ಎಂದು ಪ್ರಶ್ನಿಸಿದರು.
ಯಡಿಯೂರಪ್ಪ ಅವರ ಸರ್ಕಾರ ಅಧಿಕಾರಿಗಳ ವರ್ಗಾವಣೆಯ ಬಿಡ್ಡಿಂಗ್‌ನಲ್ಲಿ ಟೇಕಾಫ್ ಆಗಿದೆಯೇ ಹೊರತು ಸಾರ್ವಜನಿಕರ ಕೆಲಸಗಳಲ್ಲಲ್ಲ. ನಾನು ಮುಖ್ಯಮಂತ್ರಿಯಾಗಿದ್ದ 14 ತಿಂಗಳು ಅಧಿಕಾರಿಗಳ ವರ್ಗಾವಣೆಯ ವ್ಯಾಪಾರ ನಡೆಸಲು ಅವಕಾಶ ನೀಡಿರಲಿಲ್ಲ. 14 ತಿಂಗಳು ಅಧಿಕಾರಿಗಳಿಗೆ ಸ್ಪಂದಿಸಿ ನಾನು ನಡೆದುಕೊಂಡಿದ್ದ ಗುಂಗಿನಲ್ಲಿರುವುದರಿಂದಲೇ ಅಧಿಕಾರಿಗಳು ಪ್ರವಾಹ ಸಂತ್ರಸ್ತರ ಪರಿಹಾರ ಕಾರ್ಯಗಳಲ್ಲಿ ಸ್ಪಂದಿಸುತ್ತಿದ್ದಾರೆ. ಹಾಗಾಗಿ ಯಡಿಯೂರಪ್ಪ ಅವರಿಗೆ ಗೌರವ ಉಳಿದಿದೆ ಎಂದರು.
ಪ್ರವಾಹ ಸಂತ್ರಸ್ತರಿಗೆ ತುರ್ತು ಪರಿಹಾರ ಕೈಗೊಳ್ಳಲು ಸರ್ಕಾರಕ್ಕೆ ಹಣದ ಕೊರತೆಯಿಲ್ಲ. ನನ್ನ ನೇತೃತ್ವದ ಸರ್ಕಾರ ವಿವಿಧ ಕಾರ್ಯಕ್ರಮಗಳಿಗೆ ಮೀಸಲಿರಿಸಿದ್ದ ಅನುದಾನದಲ್ಲಿ ಹಣ ಉಳಿದಿದೆ. ಸಾಲ ಮನ್ನಾಕ್ಕೆ ನಿಗದಿಪಡಿಸಿದ್ದ ಅನುದಾನದಲ್ಲಿ ಹಣ ಉಳಿದಿದೆ. ಅದನ್ನು ಬಳಸಿಕೊಳ್ಳಬಹುದು. ಹಲವು ಅಭಿವೃದ್ಧಿ ಯೋಜನೆಗಳನ್ನು ನಾನು ಮಂಜೂರು ಮಾಡಿದ್ದೆ. ಅವುಗಳಿಗಾದರೂ ತಕ್ಷಣ ಅನುದಾನ ಬಿಡುಗಡೆ ಮಾಡಿ ಕಾಮಗಾರಿ ಆರಂಭಿಸಿ ಪ್ರವಾಹ ಸಂತ್ರಸ್ತರಿಗೆ ಸ್ಪಂದಿಸಬೇಕು.
-ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ