Advertisement

Indian Navy: ಕತಾರ್‌ನಲ್ಲಿ ಜೈಲುಪಾಲಾಗಿರುವ ನಿವೃತ್ತ ಯೋಧರ ರಕ್ಷಣೆಗೆ ಕೇಂದ್ರ ಮುಂದಾಗಲಿ

09:49 PM Oct 27, 2023 | Team Udayavani |

ಭಾರತೀಯ ನೌಕಾಪಡೆಯ ಎಂಟು ನಿವೃತ್ತ ಅಧಿಕಾರಿಗಳಿಗೆ ಕತಾರ್‌ನ ನ್ಯಾಯಾಲಯ ಮರಣದಂಡನೆ ಶಿಕ್ಷೆಯನ್ನು ವಿಧಿಸಿರುವುದು ಈ ಅಧಿಕಾರಿಗಳ ಕುಟುಂಬದವರನ್ನು ಮಾತ್ರವಲ್ಲದೆ ಇಡೀ ದೇಶವನ್ನು ದಿಗ್ಭ್ರಮೆಗೀಡು ಮಾಡಿದೆ. ಕತಾರ್‌ನಲ್ಲಿ ಭಾರತೀಯ ನೌಕಾಪಡೆಯ ನಿವೃತ್ತ ಯೋಧರನ್ನು ಬಂಧಿಸಿದಾಗಿನಿಂದ ಹಿಡಿದು ಅವರಿಗೆ ಮರಣದಂಡನೆ ಶಿಕ್ಷೆ ವಿಧಿಸುವವರೆಗಿನ ಇಡೀ ಬೆಳವಣಿಗೆಗಳು ಅತ್ಯಂತ ನಿಗೂಢವಾಗಿಯೇ ಉಳಿದಿವೆ. ಭಾರತದ ನಿವೃತ್ತ ನೌಕಾ ಯೋಧರನ್ನು ಯಾವ ಆರೋಪದ ಮೇಲೆ ಬಂಧಿಸಲಾಗಿತ್ತು ಮತ್ತು ಈಗ ಅಲ್ಲಿನ ನ್ಯಾಯಾಲಯ ಅವರಿಗೆ ಮರಣದಂಡನೆ ವಿಧಿಸುವಷ್ಟು ದೊಡ್ಡ ಅಪರಾಧವನ್ನು ಇವರೇನು ಎಸಗಿದ್ದರು ಎಂಬ ಬಗೆಗೆ ಈವರೆಗೂ ಸ್ಪಷ್ಟ ಮಾಹಿತಿ ಅವರ ಕುಟುಂಬದವರಿಗಾಗಲಿ, ಸರಕಾರಕ್ಕಾಗಲಿ ಅಧಿಕೃತವಾಗಿ ತಿಳಿದಿಲ್ಲ ಎಂಬುದು ಅಚ್ಚರಿಯೇ ಸರಿ.

Advertisement

ಭಾರತೀಯ ನೌಕಾಪಡೆಯ ನಿವೃತ್ತ ಎಂಟು ಮಂದಿ ಅಧಿಕಾರಿಗಳು ತಮ್ಮ ಸೇವಾ ನಿವೃತ್ತಿಯ ಬಳಿಕ ಕತಾರ್‌ನ ಅಲ್‌ ದೊಹ್ರಾ ಗ್ಲೋಬಲ್‌ ಟೆಕ್ನಾಲಜೀಸ್‌ ಆ್ಯಂಡ್‌ ಕನ್ಸಲ್ಟಿಂಗ್‌ ಸರ್ವಿಸಸ್‌ ಎಂಬ ಖಾಸಗಿ ಮಾಲಕತ್ವದ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದರು. ಈ ಕಂಪೆನಿಯು ಕತಾರ್‌ನ ಸಶಸ್ತ್ರ ಪಡೆ ಮತ್ತು ಭದ್ರತಾ ಏಜೆನ್ಸಿಗೆ ತರಬೇತಿ ನೀಡುವ ಕಾರ್ಯ ನಿರ್ವಹಿಸುತ್ತಿತ್ತು. ಅತ್ಯಾಧುನಿಕ ತಂತ್ರಜ್ಞಾನವನ್ನೊಳಗೊಂಡ ಸಬ್‌ಮರಿನ್‌ಗಳ ತಯಾರಿಯಲ್ಲಿ ಈ ಕಂಪನಿ ತೊಡಗಿಕೊಂಡಿದ್ದು ಇದರ ಮಾಹಿತಿಗಳನ್ನು ಭಾರತೀಯ ಅಧಿಕಾರಿಗಳು ಇಸ್ರೇಲ್‌ಗೆ ಸೋರಿಕೆ ಮಾಡುವ ಮೂಲಕ ಇಸ್ರೇಲ್‌ ಪರವಾಗಿ ಬೇಹುಗಾರಿಕೆ ನಡೆಸುತ್ತಿದ್ದರು ಎಂಬ ಆರೋಪವನ್ನು ಈ ಎಂಟು ಮಂದಿಯ ವಿರುದ್ಧ ಹೊರಿಸಲಾಗಿದೆ ಎಂಬ ಮಾಹಿತಿಗಳು ತಡವಾಗಿ ಹೊರಬಿದ್ದಿವೆ. ಆದರೆ ಈ ಬಗ್ಗೆ ಕತಾರ್‌ನಿಂದ ಯಾವುದೇ ಅಧಿಕೃತ ಮಾಹಿತಿ ಲಭಿಸಿಲ್ಲ.

ದೇಶದ ನಿವೃತ್ತ ಯೋಧರ ಬಂಧನದ ಮಾಹಿತಿ ಕತಾರ್‌ನಲ್ಲಿನ ಭಾರತೀಯ ರಾಜತಾಂತ್ರಿಕ ಕಚೇರಿಗೆ ತಿಳಿದಿತ್ತಲ್ಲದೆ ಇತ್ತೀಚೆಗೆ ಬಂಧಿತರಿಗೆ ಅವರ ಕುಟುಂಬದವರನ್ನು ಸಂಪರ್ಕಿಸುವ ಅನುಮತಿಯನ್ನು ಕತಾರ್‌ ಅಧಿಕಾರಿಗಳು ನೀಡಿದ್ದರು ಎಂಬ ಮಾಹಿತಿಯೂ ಈಗ ಹೊರಬಿದ್ದಿದೆ. ಆದರೆ ಇಡೀ ಪ್ರಕರಣದ ವಸ್ತುಸ್ಥಿತಿಯನ್ನು ಅರಿತುಕೊಂಡು ಈ ಅಧಿಕಾರಿಗಳನ್ನು ಬಿಡುಗಡೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರಕಾರದಿಂದ ರಾಜತಾಂತ್ರಿಕ ಪ್ರಕ್ರಿಯೆಗಳು, ಅಗತ್ಯ ಕಾನೂನು ನೆರವು ಮತ್ತಿತರ ಪ್ರಯತ್ನಗಳು ನಡೆಯುತ್ತಲೇ ಬಂದಿದ್ದವಾದರೂ ಅವು ಯಾವುವೂ ಪರ್ಯಾಪ್ತವಾಗಿಲ್ಲ. ಈ ಪ್ರಕರಣವನ್ನು ಕೇಂದ್ರ ಸರಕಾರ ಪ್ರಾಥಮಿಕ ಹಂತದಲ್ಲಿಯೇ ಗಂಭೀರವಾಗಿ ಪರಿಗಣಿಸಿದ್ದಲ್ಲಿ ಇದು ಮರಣದಂಡನೆ ಶಿಕ್ಷೆ ವಿಧಿಸುವಷ್ಟರ ಮಟ್ಟಿಗೆ ಬೆಳೆಯುತ್ತಿರಲಿಲ್ಲ. ಈ ಹಿಂದೆ ಇಂತಹ ಪ್ರಕರಣಗಳನ್ನು ಅತ್ಯಂತ ಚಾಣಾಕ್ಷತನದಿಂದ ನಿರ್ವಹಿಸುತ್ತಿದ್ದ ಕೇಂದ್ರ ಸರಕಾರ ಈ ನಿರ್ದಿಷ್ಟ ಪ್ರಕರಣದಲ್ಲಿ ಕೊಂಚ ಎಡವಿದಂತೆ ತೋರುತ್ತಿದೆ.

ಇನ್ನಾದರೂ ಕೇಂದ್ರ ಸರಕಾರ ಅದರಲ್ಲೂ ಮುಖ್ಯವಾಗಿ ವಿದೇಶಾಂಗ ವ್ಯವಹಾರ ಮತ್ತು ರಕ್ಷಣ ಇಲಾಖೆ ಹೆಚ್ಚಿನ ಮುತುವರ್ಜಿ ವಹಿಸಿ ದೇಶದ ಮಾಜಿ ಯೋಧರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ವಾಪಸು ಕರೆತರಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಆ ಮೂಲಕ ವಿದೇಶಗಳಲ್ಲಿರುವ ಭಾರತೀಯರಿಗೆ ಧೈರ್ಯ ತುಂಬ ಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next