ಬೆಂಗಳೂರು: ಬೆಂಬಲ ಬೆಲೆಯಲ್ಲಿ ಉಂಡೆ ಕೊಬ್ಬರಿ ಖರೀದಿಗೆ ನೀಡಿರುವ ಅವಕಾಶದ ಅವಧಿಯನ್ನು ಮೂರು ತಿಂಗಳು ವಿಸ್ತರಿಸಬೇಕು ಮತ್ತು ರೈತರಿಗೆ ಹೊಸದಾಗಿ ನೋಂದಣಿಗೆ ಅವಕಾಶ ನೀಡುವಂತೆ ರಾಜ್ಯದ ಸಂಸದರು ಮತ್ತು ರಾಜ್ಯದ ಕೇಂದ್ರ ಸಚಿವರು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಬೇಕೆಂದು ಜವಳಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಆಗ್ರಹಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಬಲ ಬೆಲೆಯಡಿ ಕೊಬ್ಬರಿ ಖರೀದಿಯ ಅವಧಿಯನ್ನು ಜುಲೈ 26ರ ತನಕ ಎಂದು ಕೇಂದ್ರ ಸರಕಾರ ನಿಗದಿ ಮಾಡಿದ್ದು, ಈಗ ಅದನ್ನು ಆಗಸ್ಟ್ 25ರ ತನಕ ವಿಸ್ತರಿಸಿದೆ. ಆದರೆ ಈ ವಿಸ್ತರಿಸಿದ ಅವಧಿಯಲ್ಲಿ ಈ ಹಿಂದೆ ನೋಂದಣಿಯಾದ ರೈತರಿಂದ ಮಾತ್ರ ಕೊಬ್ಬರಿಗೆ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಹೊಸ ನೋಂದಣಿಗೆ ಅವಕಾಶ ನೀಡಿಲ್ಲ. ಇದರಿಂದಾಗಿ ಖರೀದಿ ಕೇಂದ್ರದಲ್ಲಿ ನೋಂದಾಯಿಸಿಕೊಳ್ಳದ ರೈತರಿಗೆ ತೊಂದರೆ ಆಗಿದೆ. ಆದ್ದರಿಂದ ತತ್‌ಕ್ಷಣ ಖರೀದಿ ಕೇಂದ್ರದಲ್ಲಿ ರೈತರಿಗೆ ನೋಂದಣಿಗೆ ಅವಕಾಶ ನೀಡುವ ಜತೆಗೆ ಖರೀದಿ ಅವಧಿಯನ್ನು ಇನ್ನೂ ಮೂರು ತಿಂಗಳು ವಿಸ್ತರಿಸಬೇಕು ಎಂದು ಪಾಟೀಲ್ ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದಾರೆ.
ಜುಲೈ 18ರ ತನಕ 37,627 ರೈತರು ಮಾತ್ರ ನೋಂದಣಿ ಮಾಡಿಕೊಂಡಿದ್ದು ಸುಮಾರು ಒಂದು ಲಕ್ಷ ರೈತರ ನೋಂದಣಿ ಬಾಕಿಯಿದೆ. ಈ ಪೈಕಿ 32,831 ರೈತರಿಂದ 47,039 ಮೆಟ್ರಿಕ್ ಟನ್ ಕೊಬ್ಬರಿ ಖರೀದಿ ಮಾಡಲಾಗಿದೆ. ಒಂದು ವೇಳೆ ಕೇಂದ್ರ ಸರ್ಕಾರ ಖರೀದಿ ಅವಧಿ ಹೆಚ್ಚಿಸಿ, ಹೊಸ ನೋಂದಣಿಗೆ ಅವಕಾಶ ಮಾಡಿಕೊಟ್ಟರೆ ರಾಜ್ಯದ ಸಾವಿರಾರು ರೈತರಿಗೆ ಪ್ರಯೋಜನವಾಗಲಿದೆ. ಈ ಬಗ್ಗೆ ರಾಜ್ಯ ಸರ್ಕಾರ ಪತ್ರ ಬರೆದಿದೆ. ಹಾಗೆಯೇ ಕೊಬ್ಬರಿ ಬೆಳೆಯುವ ಜಿಲ್ಲೆಗಳ ಏಳು ಸಂಸದರು ಹೆಚ್ಚು ಸಕ್ರಿಯ ಪ್ರಯತ್ನ ನಡೆಸಬೇಕು ಎಂದು ಸಚಿವರು ತಿಳಿಸಿದರು.
ಒಣದ್ರಾಕ್ಷಿ ಮತ್ತು ಅಡಕೆ ಬೆಳೆಗಾರರು ಸಹ ವಿವಿಧ ಸಮಸ್ಯೆಗಳಿಂದ ಸಂಕಷ್ಟಕ್ಕೀಡಾಗಿದ್ದು ಅವರ ಬವಣೆಗೂ ಕೇಂದ್ರ ಸರ್ಕಾರ ಸ್ಪಂದಿಸಬೇಕು ಎಂದು ಸಕ್ಕರೆ ಸಚಿವರು ಒತ್ತಾಯಿಸಿದರು.
ಹಾಗೆಯೇ ರಾಜ್ಯದಲ್ಲಿ ಉತ್ಪಾದನೆಯ ಶೇ. 25 ರಷ್ಟು ಅಂದರೆ 54,750 ಮೆಟ್ರಿಕ್ ಟನ್ ಕೊಬVರಿ ಖರೀದಿಸಲು ಮಾತ್ರ ಕೇಂದ್ರ ಸರ್ಕಾರ ಅವಕಾಶ ನೀಡಿದ್ದು ಈ ಪ್ರಮಾಣವನ್ನು ಶೇ. 40ಕ್ಕೆ ಹೆಚ್ಚಿಸಿ 87,200 ಮೆಟ್ರಿಕ್ ಟನ್ ಕೊಬ್ಬರಿ ಖರೀದಿಗೆ ಅವಕಾಶ ಕಲ್ಪಿಸಿ ಹೆಚ್ಚಿಸಬೇಕು. ಹಾಗೆಯೇ 30-40 ಮಿ ಮೀ ಹಾಗೂ ಅದಕ್ಕೂ ಹೆಚ್ಚಿನ ಗಾತ್ರದ ಕೊಬ್ಬರಿ ಖರೀದಿಸಲು ಅವಕಾಶ ನೀಡಬೇಕು. ಈ ಬಗ್ಗೆ ರಾಜ್ಯ ಸರ್ಕಾರ ಸಲ್ಲಿಸಿರುವ ಪ್ರಸ್ತಾವನೆಗಳಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಬೇಕು ಎಂದು ಶಿವಾನಂದ ಪಾಟೀಲ್ ಹೇಳಿದರು.