ಕೊಪ್ಪಳ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಜನಾದೇಶ ಇಲ್ಲದಿದ್ದರೂ ಅಡ್ಡ ದಾರಿ ಹಿಡಿದು ಅಧಿ ಕಾರಕ್ಕೆ ಬಂದಿದ್ದಾರೆ. ಕಾಂಗ್ರೆಸ್ ಖಾಯಂ ವಿಪಕ್ಷ ಸ್ಥಾನದಲ್ಲಿರುತ್ತೆ ಎನ್ನುವ ಬಿಎಸ್‌ವೈ ತಾಕತ್ತಿದ್ದರೆ ವಿಧಾನಸಭೆ ವಿಸರ್ಜನೆ ಮಾಡಿ ಚುನಾವಣೆಗೆ ಬನ್ನಿ ನೋಡೋಣ ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಸವಾಲೆಸೆದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಕಂಡ ಉತ್ತಮ ರಾಜಕಾರಣಿಗಳಲ್ಲಿ ಸಿದ್ದರಾಮಯ್ಯ ಒಬ್ಬರು. ಆದರೆ ಅವರ ಬಗ್ಗೆ ಬಿಎಸ್‌ವೈ ವಿಪಕ್ಷ ನಾಯಕ ಸ್ಥಾನ ಕಾಯಂ ಎಂದು ಜರಿದಿದ್ದಾರೆ. ಬಿಎಸ್‌ವೈಗೆ ಅಷ್ಟೊಂದು ಖಾತ್ರಿಯಿದ್ದರೆ ಚುನಾವಣೆಗೆ ಬರಲಿ ಎಂದರು.
ಉಕದ ಹಲವು ಜಿಲ್ಲೆಯಲ್ಲಿ ನೆರೆ ಬಂದು ಲಕ್ಷ ಕೋಟಿ ಹಾನಿಯಾಗಿದೆ. ರಾಜ್ಯ ಸರ್ಕಾರವೇ ಕೇಂದ್ರಕ್ಕೆ ವರದಿ ನೀಡಿದೆ. ನಾವು ಅಧ್ಯಯನ ವರದಿ ನೀಡಿ, ಕೇಂದ್ರಕ್ಕೂ ಒತ್ತಾಯಿಸಿದ್ದೇವೆ. ಸಾಲ ಮನ್ನಾ ಮಾಡಿ, ಮನೆ ಕಟ್ಟಿ ಕೊಡಿ ಎಂದಿದ್ದೇವೆ. ಸಂತ್ರಸ್ತರಿಗೆ 10ರಿಂದ 25 ಸಾವಿರ ಕೊಟ್ಟಿದ್ದು ಬಿಟ್ಟರೆ ಮತ್ತಾÂವ ಪರಿಹಾರ ಕೊಟ್ಟಿಲ್ಲ. ನೆರೆ ಸಂತ್ರಸ್ತರ ನೋವು ಆಲಿಸುವ ಬದಲು ಉಪ ಚುನಾವಣೆಗೆ ಪ್ರಚಾರಕ್ಕೆ ದಿನಾಂಕ ನಿಗದಿ ಮಾಡ್ತಾರೆ ಎಂದು ಗುಡುಗಿದರು.
ಇನ್ನು ಟಿಪ್ಪು ವಿಷಯ ಪಠ್ಯದಿಂದ ತೆಗೆಯುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಬಿಎಸ್‌ವೈ ಕೆಜೆಪಿ ಕಟ್ಟಿದಾಗ ಟಿಪ್ಪು ಜಯಂತಿಯಲ್ಲಿ ಪಾಲ್ಗೊಂಡಿದ್ದಾರೆ. ಜಗದೀಶ ಶೆಟ್ಟರ್ ಸಿಎಂ ಆಗಿದ್ದಾಗ ಜಯಂತಿಯಲ್ಲಿ ಪಾಲ್ಗೊಂಡಿದ್ದಾರೆ. ಈಗ ಅವರೇ ಜಯಂತಿ ಆಚರಣೆ ಕೈ ಬಿಟ್ಟಿದ್ದಾರೆ. ಆಗೊಂದು ಮಾತು, ಈಗೊಂದು ಮಾತು ಇವರೆಲ್ಲ ಸತ್ಯಹರಿಶ್ಚಂದ್ರ ಮೊಮ್ಮಗನಾ ಎಂದರು.
ಕಾಂಗ್ರೆಸ್ ನಾಯಕರ ಮನೆ ಮೇಲೆ ಮಾತ್ರ ಐಟಿ ದಾಳಿಯಾಗ್ತಿವೆ. ಹಾಗಾದ್ರೆ ಬಿಜೆಪಿ ಅವರು ಸತ್ಯ ಹರಿಶ್ಚಂದ್ರರಾ? ಐಟಿ ಅ ಧಿಕಾರಿಗಳಿಗೆ ಇದು ಕಣ್ಣಿಗೆ ಕಾಣುತ್ತಿಲ್ಲವಾ? ಮಹಾರಾಷ್ಟ್ರ ಚುನಾವಣೆ ಸಂಬಂಧ ಸಾವರ್ಕರ್ ವಿಷಯ ಚರ್ಚೆಗೆ ತಂದರು. ಚುನಾವಣೆ ಬಂದಾಗಷ್ಟೇ ರಾಮ ಮಂದಿರ ವಿಷಯ ಚರ್ಚೆಗೆ ಬರುತ್ತವೆ. ದೇಶದ ಆರ್ಥಿಕ ಸ್ಥಿತಿ ಅಧೋಗತಿಗೆ ಬಂದಿದೆ. ಅದನ್ನು ಮರೆಮಾಚಲು ಜನರಿಗೆ ಭಾವನಾತ್ಮಕ ವಿಷಯ ಮುಂದಿಟ್ಟು ಸತ್ಯ ಮರೆ ಮಾಚುತ್ತಿದ್ದಾರೆ ಎಂದರು.
ಇನ್ನೂ ರೇಣುಕಾಚಾರ್ಯ ಅವರೇ ಬಿಜೆಪಿ ವಿರುದ್ಧ ಮಾತನಾಡುತ್ತಿದ್ದಾರೆ. ಬಿಜೆಪಿಯಲ್ಲಿ ನಾಲ್ಕಾರು ಗುಂಪುಗಳಿವೆ. ರಮೇಶ್‌ಕುಮಾರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಭ್ರಷ್ಟರು ಎಂದಿದ್ದಾರೆ. ಅವರ ಬಳಿ ದಾಖಲೆ ಇದ್ದರೆ ಸಮೀಪದ ಠಾಣೆಯಲ್ಲಿ ರಮೇಶ ಕುಮಾರ ಮೇಲೆ ಕೇಸ್ ದಾಖಲಿಸಲಿ ಎಂದರು.
ಇನ್ನೂ ಬಳ್ಳಾರಿ ಜಿಲ್ಲೆ ವಿಭಜನೆ ವಿಚಾರದಲ್ಲಿ ಉಪ ಚುನಾವಣೆಗೋಸ್ಕರ ಈ ವಿಷಯ ಚರ್ಚೆಗೆ ತಂದಿದ್ದಾರೆ. ಆನಂದ್ ಸಿಂಗ್ ಅವರು ಈ ಹಿಂದೆ ಮಂತ್ರಿಯಾಗಿದ್ದರಲ್ಲ ಆಗೇಕೆ ಈ ವಿಷಯ ಚರ್ಚೆಗೆ ತರಲಿಲ್ಲ ಎಂದರು.