ವಿಜಯಪುರ: ರಾಜ್ಯದಲ್ಲಿ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸುತ್ತಿಲ್ಲ ಎಂದು ನಮ್ಮ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿರುವ ಬಿಜೆಪಿ ನಾಯಕರು, ಕೇಂದ್ರ ಸರ್ಕಾರ ರಾಜ್ಯಕ್ಕೆ ಬರ ಪರಿಹಾರ ಕಾರ್ಯಕ್ಕೆ ಅನುದಾನ ನೀಡದ ಕುರಿತು ಮೊದಲು ಧ್ವನಿ ಎತ್ತಲಿ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ ತಿರುಗೇಟು ನೀಡಿದ್ದಾರೆ.
ಮಂಗಳವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರ ರಾಜ್ಯದಲ್ಲಿ ಎದುರಾಗಿರುವ ಭೀಕರ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುತ್ತಿದೆ. ಆದರೆ ರಾಜ್ಯದ ಬರ ಪರಿಹಾರ ಕಾರ್ಯಗಳಿಗೆ ಅನುದಾನ ನೀಡುವಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಸ್ಪಂದಿಸುತ್ತಿಲ್ಲ. ಹೀಗಾಗಿ ಬಿಜೆಪಿ ನಾಯಕರು ನಮ್ಮ ಸರ್ಕಾರವನ್ನು ಟೀಕಿಸುವಲ್ಲಿ ಕಾಲಹರಣ ಮಾಡದೆ, ಬರ ಪರಿಹಾರಕ್ಕೆ ಅನುದಾನ ನೀಡುವ ಕುರಿತು ಕೇಂದ್ರದ ಮೇಲೆ ಒತ್ತಡ ಹೇರಲಿ ಎಂದು ಬಿಜೆಪಿ ನಾಯಕರ ಟೀಕೆಗೆ ತಿರುಗೇಟು ನೀಡಿದರು.
ರಾಜ್ಯದ ಬರ ಪರಿಸ್ಥಿತಿ ಬಗ್ಗೆ ಮಾತನಾಡುವ ಬಿಜೆಪಿ, ಜೆಡಿಎಸ್ ನಾಯಕರು ಕೇಂದ್ರ ಸರ್ಕಾರ ರಾಜ್ಯದ ಬರ ಪರಿಹಾರ ಕಾರ್ಯಕ್ಕೆ ಸ್ಪಂದಿಸದ ಕುರಿತು ಒಟ್ಟಾಗಿ ಧ್ವನಿ ಎತ್ತಲಿ ಎಂದು ಆಗ್ರಹಿಸಿದರು.
ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯದ ಬರ ಪರಿಹಾರ ಕಾರ್ಯಕ್ಕೆ ಏನೇನು ನೀಡಿದೆ ಎಂಬುದನ್ನು ಜನತೆಯ ಮುಂದಿಡಲಿ. ರಾಜ್ಯದ ಬರದ ಸಂಕಷ್ಟದ ಪರಿಹಾರಕ್ಕೆ 17000 ಕೋಟಿ ರೂ. ನೀಡಿ ಎಂದು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದರೂ ಸೌಜನ್ಯಕ್ಕೂ ಸ್ಪಂದಿಸುತ್ತಿಲ್ಲ. ನಮ್ಮ ಪ್ರಸ್ತಾವನೆ ಸಲ್ಲಿಕೆ ಬಳಿಕ ಕೇಂದ್ರ ಸರ್ಕಾರ ರಾಜ್ಯಕ್ಕೆ ಬಿಡುಗಡೆ ಮಾಡಿರುವ ಹಣ ಎಷ್ಟು ಎಂಬುದನ್ನು ವಿಪಕ್ಷಗಳ ನಾಯಕರು ಬಾಯಿ ಬಿಡಲಿ ಎಂದು ಕುಟುಕಿದರು.
ಪಡಿತರ ವ್ಯವಸ್ಥೆಯಲ್ಲಿ ಆಹಾರ ಧಾನ್ಯ ವಿತರಣೆಯಲ್ಲಿ ಕೇಂದ್ರದ ಹೆಸರಿನ ರಶೀದಿ ನೀಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಡಾ.ಪರಮೇಶ್ವರ, ನಮ್ಮ ಸರ್ಕಾರ 10 ಕೆ.ಜಿ. ಅಕ್ಕಿ ಕೊಡುವುದಾಗಿ ಹೇಳಿದ್ದೆವು. ನಾವು 5 ಕೆ.ಜಿ. ಕೊಟ್ಟಿದ್ದೆವು. ಬಳಿಕ 7 ಕೆ.ಜಿ. ಗೆ ಏರಿಸಿದ್ದೆವು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಮತ್ತೆ 5 ಕೆ.ಜಿ.ಗೆ ಇಳಿಸಿದರು. ಚುನಾವಣೆ ವೇಳೆ 10 ಕೆ.ಜಿ. ಅಕ್ಕಿ ಕೊಡುವುದಾಗಿ ಕಾಂಗ್ರೆಸ್ ಜನತೆಗೆ ಭರವಸೆ ನೀಡಿತ್ತು. ಆದರೆ ಕೇಂದ್ರ ಸರ್ಕಾರ ಸ್ಪಂದಿಸದ ಕಾರಣ ಅಗತ್ಯ ಪ್ರಮಾಣದ ಅಕ್ಕಿ ಸಿಗಲಿಲ್ಲ. ಕೇಂದ್ರ ಸರ್ಕಾರದ ಅಸಹಕಾರದ ಮಧ್ಯೆಯೂ ವಿತರಣೆಗೆ ಕೊರತೆಯಾಗುವ ಪ್ರಮಾಣದ ಅಕ್ಕಿಗೆ ಬದಲಾಗಿ ಹಣ ವಿತರಿಸುವ ಮೂಲಕ ಜನತೆಗೆ ನೀಡಿದ ಮಾತಿಗೆ ಬದ್ಧತೆ ತೋರುತ್ತಿದ್ದೇವೆ ಎಂದರು.
ಭವಿಷ್ಯದಲ್ಲಿ ನಮಗೆ ರಾಜ್ಯದ ಜನರಿಗೆ 10 ಕೆ.ಜಿ. ಹಂಚಿಕೆ ಮಾಡುವಷ್ಟು ಅಕ್ಕಿ ಲಭ್ಯವಾಗುವ ನಿರೀಕ್ಷೆ ಇದೆ. ಜನತೆಗೆ ಕೊಟ್ಟ ಮಾತಿನಂತೆ ಅಕ್ಕಿ ವಿತರಣೆಗೆ ಕ್ರಮ ಕೈಗೊಳ್ಳಲು ಅಗತ್ಯ ಇರುವ ಎಲ್ಲ ಪ್ರಯತ್ನ ಮಾಡಲಿದ್ದೇವೆ ಎಂದರು.
ರಾಜ್ಯಕ್ಕೆ ಪಡಿತರ ಅಕ್ಕಿ ವಿತರಣೆಗೆ ಆಂಧ್ರಪ್ರದೇಶ, ತೆಲಂಗಾಣ, ಪಂಜಾಬ, ಪಶ್ಚಿಮ ಬಂಗಾಲ ಸೇರಿದಂತೆ ಇತರೆ ರಾಜ್ಯಗಳಿಂದ ಅಕ್ಕಿ ಅಕ್ಕಿ ತೀರಿಸಿಕೊಳ್ಳುವ ಪ್ರಯತ್ನ ನಡೆದಿದೆ. ಹೀಗಾಗಿ ಜನತೆಗೆ ನೀಡಿರುವ 10 ಕೆ.ಜಿ. ಅಕ್ಕಿ ಹಂಚಿಕೆಯ ಕುರಿತು ನಮ್ಮ ಬದ್ಧತೆ ಈಡೇರಿಸಲು ಅಗತ್ಯದ ಅಕ್ಕಿ ಹೊಂದಿಸಿಕೊಳ್ಳಲು ಮುಂದಾಗುತ್ತೇವೆ ಎಂದರು.