Advertisement

ಹಿಂದುಳಿದ ಸಮುದಾಯಗಳು ಜಾಗೃತರಾಗಲಿ

11:54 AM Nov 12, 2018 | Team Udayavani |

ಮೈಸೂರು: ಶೈಕ್ಷಣಿಕ ಹಾಗೂ ಸಾಮಾಜಿಕ ಸಮಾನತೆಯನ್ನು ಪಡೆಯುವ ನಿಟ್ಟಿನಲ್ಲಿ ಎಲ್ಲಾ ಹಿಂದುಳಿದ ಸಮುದಾಯಗಳು ಜಾಗೃತರಾಗಬೇಕಿದೆ ಎಂದು ಮೈಸೂರಿನ ಗಾಂಧಿನಗರದ ಉರಿಲಿಂಗಿ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು. 

Advertisement

ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ನಗರದ ಗೋವರ್ಧನ್‌ ಹೋಟೆಲ್‌ನಲ್ಲಿ ಭಾನುವಾರ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಹಿಂದುಳಿದ ಸಮುದಾಯದಲ್ಲಿ ಇಂದಿಗೂ ಅಂಬೇಡ್ಕರ್‌ ಚಿಂತನೆಗಳು ತಲುಪಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಹಿಂದುಳಿದ ವರ್ಗದವರು ಸಮಾಜದ ಮುಖ್ಯವಾಹಿನಿಗೆ ಬರಬೇಕಾದ ಅಗತ್ಯವಿದೆ.

ಚಿಕ್ಕಜವರಪ್ಪ ದಸಂಸ ಹೋರಾಟದ ಮೂಲಕ ಈ ಹಂತಕ್ಕೆ ಬಂದಿರುವುದು ಸ್ವಾಗತಾರ್ಹವಾಗಿದ್ದು, ಇಂತಹ ಹೋರಾಟದ ಮೂಲಕವೇ ಹಿಂದುಳಿದ ಸಮುದಾಯ ನ್ಯಾಯ ಕಂಡುಕೊಳ್ಳಬೇಕಾದ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಹಿಂದುಳಿದ ಎಲ್ಲಾ ಸಮುದಾಯಗಳು ಶೈಕ್ಷಣಿಕ ಮತ್ತು ಸಾಮಾಜಿಕ ಸಮಾನತೆ ಪಡೆಯಲು ಜಾಗೃತರಾಗಬೇಕಿದೆ ಎಂದು ಹೇಳಿದರು. 

ಸಮಾರಂಭದ ಅಂಗವಾಗಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರು ಎಪಿಎಂಸಿ ನೂತನ ಉಪಾಧ್ಯಕ್ಷ ಚಿಕ್ಕಜವರಪ್ಪ ಅವರನ್ನು ಒಕ್ಕೂಟದ ಪರವಾಗಿ ಸನ್ಮಾನಿಸಿದರು. ಬೆಂಗಳೂರು ಯೋಜನಾ ಜಂಟಿ ನಿರ್ದೇಶಕ ಡಿ.ಚಂದ್ರಶೇಖರಯ್ಯ, ಬೆಳವಾಡಿ ಗ್ರಾಪಂ ಉಪಾಧ್ಯಕ್ಷ ಶಿವಕುಮಾರಸ್ವಾಮಿ, ಮುಖಂಡರಾದ ಮಹದೇವಯ್ಯ, ದಲಿತ ಮುಖಂಡ ಹರಿಹರ ಆನಂದಸ್ವಾಮಿ, ಚೆನ್ನಮಲ್ಲಸ್ವಾಮೀಜಿ, ಅಪ್ಪಾಜಿ, ಲಕ್ಷ್ಮಣ್‌ರಾವ್‌, ಮುರುಡೇಶ್‌ಮೂರ್ತಿ, ಸೋಮಯ್ಯ ಮಲೆಯೂರು ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next