Advertisement

ಸಾಹಿತಿಗಳು ಹೆಚ್ಚು ಜವಾಬ್ದಾರಿಯುತವಾಗಿ ಕೆಲಸ ಮಾಡಲಿ

03:16 PM Oct 22, 2018 | Team Udayavani |

ದಾವಣಗೆರೆ: ಅಭಿವ್ಯಕ್ತಿ ಸ್ವಾತಂತ್ರ್ಯಾಕ್ಕೆ ಧಕ್ಕೆ, ಒಂದು ರೀತಿಯ ಭಯದ ವಾತಾವರಣದ ನಡುವೆ ಕವಿ, ಸಾಹಿತಿಗಳು ಹೆಚ್ಚು ಜವಾಬ್ದಾರಿಯುತ ಪಾತ್ರ ನಿರ್ವಹಿಸಬೇಕು ಎಂದು ಹಿರಿಯ ಸಾಹಿತಿ ಚಂದ್ರಶೇಖರ್‌ ತಾಳ್ಯ ಪ್ರತಿಪಾದಿಸಿದ್ದಾರೆ.

Advertisement

ಭಾನುವಾರ ಕುವೆಂಪು ಕನ್ನಡ ಭವನದಲ್ಲಿ ತೇಜಸ್‌ ಜಿ.ಎಲ್‌. ವಡ್ನಾಳ್‌ರವರ ಮುಗಿಲ ಹೆಗಲ ಮೇಲೆ ಕವನ ಸಂಕಲನ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಸುತ್ತಮುತ್ತಲಿನ ವಿದ್ಯಮಾನಗಳ ಬಗ್ಗೆ ಬರೀ ಮಾತನಾಡುವುದು, ಒಂದಷ್ಟು ಲೇಖನ ಬರೆಯುವುದಕ್ಕೆ ಮಾತ್ರವೇ ಕವಿ, ಸಾಹಿತಿ ಸೀಮಿತವಾಗಬಾರದು. ನೇರವಾಗಿ ಹೋರಾಟದಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.

ಮಹಾತ್ಮ ಗಾಂಧೀಜಿಯವರು ಕೈಗಾರಿಕಾ ಕ್ರಾಂತಿಯ ಆರಂಭದಲ್ಲೇ ಹೇಳಿದ್ದ, ಆಧುನಿಕ ನಾಗರಿಕತೆಯು ಭಾರತದ ನಿಜವಾದ ಶತ್ರು ಎಂಬ ಮಾತು ನಿಜವಾಗುತ್ತಿದೆ. ಈಗ ಆಧುನಿಕ ವಿಕೃತಿ ಹೆಚ್ಚಾಗುತ್ತಿದೆ. ಮನಸ್ಸುಗಳು ದೂರವಾಗುತ್ತಿವೆ. ಮನಸ್ಥಿತಿ ಹಾಳಾಗುತ್ತಿದೆ. ಹೆತ್ತ ತಂದೆ-ತಾಯಿ ವೃದ್ಧಾಶ್ರಮದ ಪಾಲಾಗುತ್ತಿದ್ದಾರೆ. ಶಿಕ್ಷಣ ವ್ಯವಸ್ಥೆಯೇ ಕುಸಿದು ಹೋಗುತ್ತಿದೆ.

ಜಾತಿ-ಉಪಜಾತಿಗಳು ಎಲ್ಲವನ್ನೂ ಆಳುತ್ತಿವೆ. ಅಂತಹ ಎಲ್ಲ ವಿಕೃತಿಗಳು ತೊಲಗಬೇಕು ಎಂದು ಬಾಯಿ ಮಾತಲ್ಲಿ ಹೇಳುವುದಕ್ಕಿಂತಲೂ ಸಾಹಿತಿ, ಕವಿಗಳು ನಿಜವಾಗಿ ತೊಲಗಿಸುವ ನಿಟ್ಟಿನಲ್ಲಿ ಹೋರಾಟದಲ್ಲಿ ಭಾಗವಹಿಸಬೆಕು ಎಂದು ತಿಳಿಸಿದರು.

ಈಚೆಗೆ ನಡೆದ ಕೆಲ ಘಟನೆಗಳು ಸಮಾಜ ಎತ್ತ ಸಾಗುತ್ತಿದೆ. ಯಾವುದಕ್ಕೆ ಯಾವ ರೀತಿ ಪ್ರತಿಕ್ರಿಯಿಸುತ್ತದೆ, ಸ್ಪಂದಿಸುತ್ತದೆ ಎಂದು ಭಯ ಮೂಡಿಸುವಂತಿದೆ. ಗಂಗಾ ಶುದ್ಧೀಕರಣಕ್ಕೆ ಒತ್ತಾಯಿಸಿ ಜ್ಞಾನ ಸ್ವರೂಪಾನಂದ ಸ್ವಾಮೀಜಿ 126 ದಿನ ಉಪವಾಸ ಮಾಡಿದ್ದರು. ಖುದ್ದು ಪ್ರಧಾನಿಗಳಿಗೆ ಪತ್ರ ಬರೆದಿದ್ದರು. ಆದರೂ, ಯಾವ ಪ್ರಯೋಜನವಾಗಲಿಲ್ಲ. ಕೊನೆಗೆ ಅವರು ಉಪವಾಸವಿದ್ದೇ ಸತ್ತು ಹೋದರು.

Advertisement

ಪ್ರಧಾನಿಯವರು ಯಾವ ಮಾತೂ ಹೇಳಲಿಲ್ಲ. ಕವಿಗಳು, ಸಾಹಿತಿಗಳು ಸಹ ಜ್ಞಾನ ಸ್ವರೂಪಾನಂದ ಸ್ವಾಮೀಜಿ ಸಾವಿಗೆ ಸ್ಪಂದಿಸಲೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಶಬರಿ ಮಲೈಸ್ವಾಮಿ ಅಯ್ಯಪ್ಪ ದೇವಸ್ಥಾನಕ್ಕೆ ಎಲ್ಲಾ ವಯೋಮಾನದ ಮಹಿಳೆಯರು ಪ್ರವೇಶಿಸಬಹುದು ಎಂದು ಸರ್ವೋಚ್ಚ ನ್ಯಾಯಾಲಯ ಘನವಾದ ತೀರ್ಪು ನೀಡಿದೆ. ಅಂತಹ ತೀರ್ಪಿನ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯ ಸ್ವರೂಪ ಗಾಬರಿ ಹುಟ್ಟಿಸುವಂತಿದೆ. ರಾಜಕೀಯ ಪಕ್ಷವೊಂದು ಮಹಿಳಾ ಹೋರಾಟಗಾರ್ತಿಯರಿಗೆ ಪ್ರಾಯೋಜಕತ್ವ ವಹಿಸಿಕೊಂಡಿದೆ. ಶಬರಿಮಮಲೈ ಸ್ವಾಮಿ ಅಯ್ಯಪ್ಪನ ದೇವಸ್ಥಾನ ಪ್ರವೇಶಿಸಲಿಕ್ಕೆ ಮಹಿಳೆಯರೇ ಮಹಿಳೆಯರಿಗೆ ಅಡ್ಡಿ ಉಂಟು ಮಾಡುತ್ತಿರುವುದು ನಿಜಕ್ಕೂ ಗಂಭೀರವಾಗಿ ಯೋಚಿಸಬೇಕಾದ ವಿಚಾರ ಎಂದು ತಿಳಿಸಿದರು.

ಈಚೆಗೆ ಶಾಲೆಗಳಿಗಿಂತಲೂ ದೇವಸ್ಥಾನಗಳ ನಿರ್ಮಾಣ ಹೆಚ್ಚಾಗುತ್ತಿದೆ. ದೇವಸ್ಥಾನ ನಿರ್ಮಿಸಿ, ಕಳಸ ಇಡಲಿಕ್ಕಾಗಿಯೇ ಧಾರ್ಮಿಕ ವರ್ಗದವರು ಇದ್ದಾರೆ. ಭಕ್ತಾದಿಗಳು ಸಹ ಹೆಚ್ಚೆಚ್ಚು ದೇಣಿಗೆ ನೀಡುವರು ಇದ್ದಾರೆ. ಸರ್ಕಾರಿ ಶಾಲೆ ಬಿದ್ದು ಹೋಗುತ್ತಿದ್ದರೂ ನೋಡದ ಕೆಲ ಶಿಕ್ಷಕರು ಸಹ ದೇವಸ್ಥಾನ ಕಟ್ಟಲಿಕ್ಕೆ ಗಮನ ನೀಡುವರು ಇದ್ದಾರೆ. ಇಂತಹ ಎಲ್ಲ ತಲ್ಲಣಗಳಿಗೆ ಅಪರಿಮಿತ ಶಕ್ತಿ ಹೊಂದಿರುವ ಕಾವ್ಯ, ಸಾಹಿತ್ಯ ಹೆಚ್ಚು ಸ್ಪಂದಿಸುವ ಮುಖೇನ ಸಾಮಾಜಿಕ ಜಾಗೃತಿಗೆ ಕಾರಣವಾಗಬೇಕು ಎಂದು ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್‌ ಮಾಜಿ ಅಧ್ಯಕ್ಷ ಪ್ರೊ| ಎಸ್‌.ಬಿ. ರಂಗನಾಥ್‌ ಮಾತನಾಡಿ, ಈಗ ಅಭಿವ್ಯಕ್ತಿ ಸ್ವಾತಂತ್ರ್ಯಾಕ್ಕೆ ಕಠೊರ ಪ್ರಹಾರ ನಡೆಸಲಾಗುತ್ತಿದೆ. ರಾಜಕೀಯ, ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ಭಯದ ವಾತಾವರಣ ಕಂಡು ಬರುತ್ತಿದೆ. ಎಲ್ಲಾ ಕಡೆ ಅಸಹಿಷ್ಣುತೆ ಢಾಳಾಗಿಯೇ ಇದೆ. ಇಂತಹ ಕಾಲಘಟ್ಟದಲ್ಲಿ ಸಾಹಿತ್ಯ ವಲಯ ಸಮಾಜದ ಸಾಕ್ಷಿಪ್ರಜ್ಞೆಯಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು.

ಸಾಹಿತಿ ಡಾ| ಆನಂದ ಋಗ್ವೇದಿ ಕವನ ಸಂಕಲನ ಕುರಿತು ಮಾತನಾಡಿದರು. ಸಾಹಿತಿ ಡಾ| ಎ.ಬಿ. ರಾಮಚಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ| ಎಚ್‌. ಎಸ್‌. ಮಂಜುನಾಥ್‌ ಕುರ್ಕಿ, ಶಿಕ್ಷಣ ಇಲಾಖೆ ನಿವೃತ್ತ ಸಹ ನಿರ್ದೇಶಕ ಡಿ.ಕೆ. ಶಿವಕುಮಾರ್‌,
ಡಯಟ್‌ ಪ್ರಾಚಾರ್ಯ ಎಚ್‌.ಕೆ. ಲಿಂಗರಾಜ್‌, ತೇಜಸ್‌ ಜಿ.ಎಲ್‌. ವಡ್ನಾಳ್‌, ಲಕ್ಷ್ಮಿದೇವಮ್ಮ ಇತರರು ಇದ್ದರು. ಅಜಯ್‌ ಪ್ರಾರ್ಥಿಸಿದರು. ಜಿ. ಗೋವಿಂದಪ್ಪ ಸ್ವಾಗತಿಸಿದರು. ರೇವಣಸಿದ್ದಪ್ಪ ಅಂಗಡಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next