Advertisement

ಲೇಖಕಿಯರಿಗೂ ಜ್ಞಾನಪೀಠ ದೊರೆಯಲಿ

02:33 PM Oct 23, 2017 | |

ದಾವಣಗೆರೆ: ಕನ್ನಡದ ಮಹಿಳಾ ಸಾಹಿತಿ, ಲೇಖಕಿಯರಿಗೆ ಸಾಹಿತ್ಯ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿ ಜ್ಞಾನಪೀಠ ದೊರೆಯುವಂತಾಗಲಿ ಎಂದು ರಾಜ್ಯ ರಸ್ತೆ ಸುರಕ್ಷತೆ ಮತ್ತು ಸಂಚಾರಿ ಆಯುಕ್ತೆ ಡಿ. ರೂಪಾ ಆಶಿಸಿದರು.

Advertisement

ಭಾನುವಾರ ಕುವೆಂಪು ಕನ್ನಡ ಭವನದಲ್ಲಿ ನಡೆದ ಪ್ರಪ್ರಥಮ ಜಿಲ್ಲಾ ಮಟ್ಟದ ಮಹಿಳಾ ಸಾಹಿತ್ಯ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಈವರೆಗೆ ಕನ್ನಡ ಸಾಹಿತ್ಯಕ್ಕೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ 8 ಜ್ಞಾನಪೀಠ ಪ್ರಶಸ್ತಿ ಸಂದಿವೆ. ಮುಂದಿನ ದಿನಗಳಲ್ಲಿ ಕನ್ನಡದ ಮಹಿಳಾ ಸಾಹಿತಿ, ಲೇಖಕಿಯರಿಗೂ ಸಹ ಜ್ಞಾನಪೀಠ ದೊರೆಯುವಂತಾಗಲಿ. ಅದರಲ್ಲೂ ದಾವಣಗೆರೆಯವರಿಗೆ ಸಲ್ಲಲಿ ಎಂದರು. ಈಗಲೂ ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರ ಸಂಖ್ಯೆ ಕಡಿಮೆಯೇ ಇದೆ ಎಂಬ ಕಳಕಳಿ ಹಾಗೂ ಎಲ್ಲ ಕ್ಷೇತ್ರದಂತೆ ಸಾಹಿತ್ಯ ವಲಯದಲ್ಲೂ ಮಹಿಳೆಯರ ಸಂಖ್ಯೆ ಹೆಚ್ಚಾಗಲಿ ಎನ್ನುವ ಕಾಳಜಿ ಅನೇಕರದ್ದಾಗಿದೆ. ಸಾಹಿತ್ಯ ಕ್ಷೇತ್ರದಲ್ಲಿ ಕ್ರಿಯಾತ್ಮಕ ಹಾಗೂ ಕ್ರಾಂತಿಕಾರಿಕ ಬದಲಾವಣೆ ತರುವಂತಾಗುವ ನಿಟ್ಟಿನಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ಮಹಿಳಾ ಸಾಹಿತ್ಯ ಕೃಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು ಎಂದು ಆಶಿಸಿದರು.

ಕೆಲವಾರು ವರ್ಷಗಳ ಹಿಂದೆ ಮಹಿಳೆಯರು ಒಳಗೊಂಡಂತೆ ಅನೇಕರಲ್ಲಿ ಓದುವ ಹವ್ಯಾಸ ಹೆಚ್ಚಿತ್ತು. ಟಿವಿ, ಸಾಮಾಜಿಕ ಜಾಲತಾಣಗಳ ಪ್ರವೇಶದ ನಂತರ ಓದುವ ಹವ್ಯಾಸ ಮಾತ್ರವಲ್ಲ ಕ್ರಿಯಾತ್ಮಕತೆಯೂ ಕಡಿಮೆ ಆಗತೊಡಗಿದೆ. ಇದೇ ಸ್ಥಿತಿ ಮುಂದುವರೆದಲ್ಲಿ ಮುಂದಿನ ದಿನಗಳಲ್ಲಿ ಮಕ್ಕಳು ಪುಸ್ತಕದ ಬದಲಿಗೆ ಟ್ಯಾಬ್‌ಗಳಲ್ಲೇ ಅಭ್ಯಾಸ ಮಾಡುವ ವಾತಾವರಣ ನಿರ್ಮಾಣವಾಗಬಹುದು. ಟಿವಿ, ಸಾಮಾಜಿಕ ಜಾಲತಾಣಗಳಿಂದ ಅಂತರ ಕಾಪಾಡಿಕೊಳ್ಳುವ ಮೂಲಕ ಮಹಿಳೆಯರು ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.

ಈಗಿನ ಆಧುನಿಕ ಕಾಲದಲ್ಲೂ ಸಾಹಿತ್ಯ ಕ್ಷೇತ್ರದಲ್ಲಿ ಕೆಲವು ಮಹಿಳಾ ಸಾಹಿತಿ, ಲೇಖಕಿಯರ ಹೆಸರು ಮಾತ್ರವೇ ಕೇಳಿ ಬರುತ್ತವೆ. ಅದಕ್ಕೆ ಕಾರಣವ ಮಹಿಳೆಯರೇ ಹುಡುಕಿಕೊಳ್ಳಬೇಕಿದೆ. ಮಹಿಳೆಯರು ಸಹ ಆಧುನಿಕತೆ ಮತ್ತು ವೈಜ್ಞಾನಿಕ ಬದಲಾವಣೆಗೆ ಹೆಚ್ಚಿನ ಮಟ್ಟದಲ್ಲಿ ಸಾಹಿತ್ಯ ವಲಯಕ್ಕೆ ಬರಬೇಕು. ಮಹಿಳೆಯರು ಅನುಭವಿಸುತ್ತಿರುವ ಸಂಕಷ್ಟ, ನೋವು, ತೊಳಲಾಟವನ್ನ ಇನ್ನೊಬ್ಬ ಮಹಿಳೆ ಮಾತ್ರವೇ ಚೆನ್ನಾಗಿ ಅರ್ಥ ಮಾಡಿಕೊಳ್ಳುವ ಜೊತೆಗೆ ಸಮಸ್ಯೆಗೆ ಪರಿಹಾರ ಒದಗಿಸಬಲ್ಲವರು. ಈ ದೃಷ್ಟಿಕೋನದಿಂದಲೂ ಮಹಿಳಾ ಸಾಹಿತ್ಯ ಕೃಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಹೊರ ಹೊಮ್ಮಬೇಕು ಎಂದು ತಿಳಿಸಿದರು.

ಹೆಚ್ಚು ಹೆಚ್ಚು ಓದು, ಬರಹದಲ್ಲಿ ತೊಡಗುವುದರಿಂದ ಮನದೊಳಗಿನ ಋಣಾತ್ಮಕ ಚಿಂತನೆ ದೂರವಾಗಿ ಧನಾತ್ಮಕ ಚಿಂತನೆ ಮೈಗೂಡುತ್ತವೆ. ಉತ್ತಮ ವ್ಯಕ್ತಿತ್ವ, ತಮ್ಮತನ, ಕ್ರಿಯಾತ್ಮಕತೆ, ಕ್ರಿಯಾಶೀಲತೆ ವೃದ್ಧಿಸುತ್ತದೆ. ದಾವಣಗೆರೆಯಲ್ಲಿ ನಡೆಯುತ್ತಿರುವ ಮೊಟ್ಟ ಮೊದಲ ಮಹಿಳಾ ಸಾಹಿತ್ಯ ಸಮಾವೇಶ ಒಳ್ಳೆಯ ವೇದಿಕೆಯಾಗಲಿ ಎಂದು ಆಶಿಸಿದರು.

Advertisement

ಮೂರು ಕವನ ಸಂಕಲನ ಬಿಡುಗಡೆಗೊಳಿಸಿದ ಡಾ| ಪ್ರಭಾ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಮಾತನಾಡಿ, ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಓದುವ ಹವ್ಯಾಸ ಬೆಳೆಸಬೇಕು. ಈ ಹವ್ಯಾಸ ಬೆಳೆಸುವ ಕೆಲಸದಲ್ಲಿ ಪೋಷಕರು ಮತ್ತು ಶಿಕ್ಷಕರು ಪ್ರಮುಖ ಪಾತ್ರ ವಹಿಸಬೇಕು. ಪುಸ್ತಕಗಳ ಓದುವಾಗ ಕಳೆಯುವ ಸಮಯ ಧ್ಯಾನ ಮಾಡಿದಂತೆ. ಒತ್ತಡದ ಬದುಕಿನಲ್ಲೂ ಮನಶಾಂತಿ ತಂದು ಕೊಡುವ ಅತ್ಯಮೂಲ್ಯ ವೇಳೆ. ಪ್ರಕಾಶಕರು ಸಹ ಮಹಿಳಾ ಸಾಹಿತಿ, ಲೇಖಕಿಯರ ಕೃತಿಗಳ ಪ್ರಕಟಿಸಿ, ಹೊರ ತರುವ ಮೂಲಕ ಮಹಿಳಾ ಸಾಹಿತ್ಯ ಕ್ಷೇತ್ರದ ಬೆಳವಣಿಗೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಜಾನಪದ ತಜ್ಞ ಡಾ| ಎಂ.ಜಿ. ಈಶ್ವರಪ್ಪ ಮಾತನಾಡಿ, ಮಹಿಳೆಯರು ಕಟಿಬದ್ಧವಾಗಿ ಕುಳಿತು ಅಧ್ಯಯನ ಮಾಡಬೇಕು. ಓದಿದ್ದನ್ನು ಇತರರೊಂದಿಗೆ ಚರ್ಚಿಸಿ, ವೇದಿಕೆಯಲ್ಲಿ ಸಮರ್ಥವಾಗಿ ಮಂಡಿಸಬೇಕು. ಬರವಣಿಗೆಯ ಶ್ರಮವನ್ನು ಮೈಗೂಡಿಸಿಕೊಳ್ಳಬೇಕು
ಎಂದು ಸಲಹೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಡಾ| ಎಚ್‌. ಗಿರಿಜಮ್ಮ ಮಾತನಾಡಿ, ವೇದಗಳ ಕಾಲದಲ್ಲಿ ಮೈತ್ರೇಯಿ, ಗಾರ್ಗಿಯ ನಂತರ 12ನೇ ಶತಮಾನದಲ್ಲಿ ಅಕ್ಕಮಹಾದೇವಿ, ಕಂತಿ, ಸಂಚಿಹೊನ್ನಮ್ಮ ಇತರೆ ಮಹಿಳಾ ಸಾಹಿತಿಗಳು ಕಂಡು ಬಂದರು. 12ನೇ ಶತಮಾನದ ನಂತರ 19ನೇ ಶತಮಾನದವರೆಗೆ ಮಹಿಳಾ ಸಾಹಿತಿ, ಲೇಖಕಿಯರು
ಅಷ್ಟಾಗಿ ಕಂಡು ಬರುವುದಿಲ್ಲ. ಎಂ.ಕೆ. ಇಂದಿರಾ, ತ್ರಿವೇಣಿ, ಆರ್‍ಯಾಂಬ ಪಟ್ಟಾಭಿಯವರಂತವರು ಕಾಣಿಸಿಕೊಂಡರು. ಈಗ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಸಾಹಿತಿಗಳು ಕಂಡು ಬರುತ್ತಿದ್ದಾರೆ ಎಂದು ತಿಳಿಸಿದರು.

ಕಥಾವಸ್ತು ಗಟ್ಟಿತನದಿಂದ ಕೂಡಿರಬೇಕು. ಸಣ್ಣ ಅಂಶವನ್ನೇ ಆಧಾರವಾಗಿಟ್ಟುಕೊಂಡು ಲಾಲಿತ್ಯವಾಗಿ ಬರೆಯುವ ಶೈಲಿ, ತಾಂತ್ರಿಕತೆ ಮೈಗೂಡಿಸಿಕೊಳ್ಳಬೇಕು. ದಿಗಮೆ ಮೂಡಿಸುವಂತಹ ಹೊಸ ವಿಚಾರ ಒಳಗೊಂಡಿರಬೇಕು ಎಂದು ಸಲಹೆ ನೀಡಿದರು. ಬಾಪೂಜಿ ವಿದ್ಯಾಸಂಸ್ಥೆ ನಿರ್ದೇಶಕಿ ಕಿರುವಾಡಿ ಗಿರಿಜಮ್ಮ, ಬಿ.ಆರ್‌. ಶಾಂತಕುಮಾರಿ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ| ಎಚ್‌.ಎಸ್‌. ಮಂಜುನಾಥ್‌ ಕುರ್ಕಿ ಇತರರು ಇದ್ದರು. ಎ.ಸಿ. ಶಶಿಕಲಾ ಶಂಕರಮೂರ್ತಿರವರ ಕಾಡು ಗುಲಾಬಿಗಳ ಕಣಿವೆ, ಎಚ್‌.ಎಸ್‌. ಪುಷ್ಪಾ ಮಂಜುನಾಥ್‌ರವರ ಮತ್ತೆ ಬರುತ್ತೇವೆ, ಎಂ.ಬಿ. ರುದ್ರಮ್ಮನವರ ಸುಜ್ಞಾನ ಕಿರಣ…
ಕವನ ಸಂಕಲನ ಬಿಡುಗಡೆಗೊಂಡವು.

ವಿನೂತನ ಮಹಿಳಾ ಸಂಘದ ಪದಾಧಿಕಾರಿಗಳು ಪ್ರಾರ್ಥಿಸಿದರು. ಶೈಲಜಾ ತಿಮ್ಮೇಶ್‌ ಸ್ವಾಗತಿಸಿದರು. ಗೀತಾ ಬಸವರಾಜ್‌ ನಿರೂಪಿಸಿದರು. ವಿಜಯ ಚಂದ್ರಶೇಖರ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next