Advertisement

ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಲಿ

11:47 AM May 19, 2020 | Suhan S |

ಹುನಗುಂದ: ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ. ಇಲ್ಲದಿದ್ದರೆ ಅಮಾನತು ಮಾಡಲಾಗುವುದು ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.

Advertisement

ಸೋಮವಾರ ಪಟ್ಟಣದ ತಹಶೀಲ್ದಾರ್‌ ಕಚೇರಿಯಲ್ಲಿ ಹುನಗುಂದ ಮತ್ತು ಇಳಕಲ್ಲ ಅವಳಿ ತಾಲೂಕಿನ ಕುಡಿಯುವ ನೀರಿನ ಸಮಸ್ಯೆ ಕುರಿತು ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಪಂ ಸಹಾಯಕ ಇಂಜಿನಿಯರ್‌ ಕಾಶೀನಾಥ ಅವರನ್ನು ತರಾಟೆಗೆ ತೆಗೆದುಕೊಂಡರು. ಸುಮಾರು 14 ತಿಂಗಳಿಂದ ಬಹು ಹಳ್ಳಿ ಕುಡಿವ ನೀರಿನ ಯೋಜನೆಯಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 7 ಜನ ಕಾರ್ಮಿಕರ ವೇತನ ನೀಡದೇ ಅವರನ್ನು ಸತಾಯಿಸುತ್ತಿರುವುದು ಹಾಗೂ ಕೆಲೂರು, ಧನ್ನೂರ ಗ್ರಾಮದ ಕುಡಿಯುವ ನೀರಿನ ಕಾಮಗಾರಿಯನ್ನು ಸಮರ್ಪಕವಾಗಿ ಕೈಗೊಳ್ಳದ್ದಕ್ಕೆ ಶಾಸಕರು ಆಕ್ರೋಶಗೊಂಡರು.

ಹುನಗುಂದ ತಾಲೂಕಿನಲ್ಲಿ 73 ಶುದ್ಧ ಕುಡಿಯುವ ನೀರಿನ ಘಟಕದಲ್ಲಿ 51 ಘಟಕಗಳು ಕೆಆರ್‌ಐಡಿಎಲ್‌ ಏಜೆನ್ಸಿಯಿಂದ ನಿರ್ಮಾಣವಾಗಿದೆ. ಅದರಲ್ಲಿ 20ಕ್ಕೂ ಹೆಚ್ಚು ಘಟಕಗಳು ಅನೇಕ ಸಮಸ್ಯೆಯಿಂದ ಕಾರ್ಯಾರಂಭವಾಗಿಲ್ಲ. ಇಳಕಲ್ಲ ತಾಲೂಕಿನಲ್ಲಿ ಏಜೆನ್ಸಿಯಿಂದ 71 ಶುದ್ಧ ಕುಡಿಯುವ ನೀರು ಘಟಕಗಳಲ್ಲಿ 45 ಘಟಕ ನಿರ್ಮಿಸಿದೆ. ಅದರಲ್ಲಿ 26 ಘಟಕಗಳು ಅನೇಕ ಕಾರಣಗಳಿಂದ ಬಂದ್‌ ಆಗಿವೆ. ಇದನ್ನು ಕೇಳಿದ ಶಾಸಕರು, ಕುಡಿಯುವ ನೀರು ಮತ್ತು ಸರಬರಾಜು ಇಲಾಖೆಯ ಸಹಾಯಕ ಅಭಿಯಂತರ ಆರ್‌.ಎಂ ಪುರೋಹಿತರ ಮೇಲೆ ಕೆಂಡಾಮಂಡಲರಾದರು.

ಇನ್ನು 2014ರಲ್ಲಿ ಜಲ ನಿರ್ಮಲ ಯೋಜನೆ ಅಡಿಯಲ್ಲಿ ಐಹೊಳೆ ಗ್ರಾಮದಿಂದ ಕೆಲೂರ ಗ್ರಾಮಕ್ಕೆ ಕುಡಿಯುವ ನೀರಿಗಾಗಿ ಪೈಪ್‌ಲೈನ್‌ ಮಾಡಲಾಗಿತ್ತು ಆದರೆ ನೀರಿನ ಒತ್ತಡಕ್ಕೆ ಪೈಪ್‌ ಒಡೆದುಹೋಗಿವೆ. ಮತ್ತೇ 16 ಲಕ್ಷ ಹಣ ಖರ್ಚು ಮಾಡಿ ಹೊಸ ಪೈಪ್‌ ಹಾಕಿಸಲಾಗಿದ್ದರೂ ಇನ್ನು ನೀರು ಹರಿಯುತ್ತಿಲ್ಲ ಎಂದು ಕೆಲೂರು ಗ್ರಾ.ಪಂ ಪಿಡಿಒ ತಿಳಿಸಿದರು. ಈ ಬಗ್ಗೆ ವರದಿ ಕೊಡುವಂತೆ ಸೂಚಿಸಿದರು.

ಬಹುಹಳ್ಳಿ ಕುಡಿಯುವ ನೀರಿನ ಯೋಜನೆಯಿಂದ ಅನೇಕ ಗ್ರಾಮಗಳಿಗೆ ಇನ್ನು ನೀರು ಹರಿಯುತ್ತಿಲ್ಲ. ಅದನ್ನು ಸರಿಪಡಿಸುವಂತೆ ಸೂಚನೆ ನೀಡಿದರು. ತಹಶೀಲ್ದಾರ್‌ ಬಸವರಾಜ ನಾಗರಾಳ, ತಾಪಂ ಇಒ ಸಿ.ಬಿ. ಮ್ಯಾಗೇರಿ, ಸಿಪಿಐ ಅಯ್ಯನಗೌಡ ಪಾಟೀಲ ಇದ್ದರು.

Advertisement

ಶಾಸಕರಿಗೆ ಪ್ರಸ್ತಾವನೆ: ಧನ್ನೂರ ಗ್ರಾ.ಪಂ ವ್ಯಾಪ್ತಿಯಲ್ಲಿ ಇದ್ದಲಗಿ, ಎಮ್ಮೆಟ್ಟಿಯಲ್ಲಿ ತಲಾ ಒಂದು ಬೋರ್‌ ವೆಲ್‌, ಚಿತ್ತರಗಿ ಆಶ್ರಯ ಕಾಲೋನಿಗೆ ಒಂದು, ಹಿರೇಮಳಗಾವಿ ಆಶ್ರಯ ಕಾಲೋನಿಗೆ ಒಂದು, ಕೂಡಲಸಂಗಮದ ಕೆಂಗಲ್ಲ ಕಡಪಟ್ಟಿಗೆ ಒಂದು ಬೋರ್‌ವೆಲ್‌ ಕೊರೆಸುವಂತೆ ಪಿಡಿಒಗಳು ಶಾಸಕರಿಗೆ ಪ್ರಸ್ತಾವನೆ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next