ರಾಣಿಬೆನ್ನೂರ: “ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಾಕತ್ತಿದ್ದರೆ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಬರಲಿ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸವಾಲು ಹಾಕಿದರು. ಸೋಮವಾರ ನಗರಸಭೆ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಬಿಜೆಪಿ ಪರಿವರ್ತನಾ ಯಾತ್ರೆ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯಮಂತ್ರಿಗಳೇ, ನೀವು ಅಧಿಕಾರಕ್ಕೆ ಬಂದು ನಾಲ್ಕೂವರೆ ವರ್ಷ ಕಳೆದು ಚುನಾವಣೆ ಹತ್ತಿರ ಬಂದಾಗ “ಸಾಧನಾ ಸಮಾವೇಶ’ದ ಹೆಸರಲ್ಲಿ ಪಕ್ಷದ ಪ್ರಚಾರ ಮಾಡುತ್ತ ಹೊರಟಿದ್ದೀರಿ. ನಿಮಗೆ ತಾಕತ್ತಿದ್ದರೆ ವಿಧಾನಸಭೆ ವಿಸರ್ಜನೆ ಮಾಡಿ ಫೆಬ್ರವರಿ, ಮಾರ್ಚ್‌ನಲ್ಲಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ ಎಂದರು.
ಮಾತಾಡಿದರೆ ಸಾಕು. ನಮ್ಮದು ಅರಸು ಆಡಳಿತ ಎಂದು ಹೇಳಿಕೊಂಡು ತಿರುಗುತ್ತೀರಿ. ದೇವರಾಜ ಅರಸು ನಂತರ ನಾನೇ ಎರಡನೇ ದೇವರಾಜ ಅರಸು ಎಂದು ಹೇಳುತ್ತೀರಿ. ವಾಸ್ತವದಲ್ಲಿ ನೀವು ಮರಳು, ಮಣ್ಣು ಮಾರುವಂತಹವರಿಗೆ ರಕ್ಷಣೆ ನೀಡುವ ಮೂಲಕ ಅರಸು ಅವರಿಗೆ ಅವಮಾನ ಮಾಡಿದ್ದೀರಿ. ಅರಸು ಅವರಂಥ ಮಹಾನಾಯಕರನ್ನು ಹೋಲಿಸಿಕೊಳ್ಳಲು ನಿಮಗೆ ನಾಚಿಕೆಯಾಗಬೇಕು ಎಂದರು.
ಹಣ, ಜಾತಿ, ಧರ್ಮದ ನಡುವೆ ಜಗಳ ಹಚ್ಚಿ ಸಿದ್ದರಾಮಯ್ಯ ಮತ್ತೆ ಅಧಿಕಾರಕ್ಕೆ ಬರುವ ಭ್ರಮೆಯಲ್ಲಿದ್ದಾರೆ. ದೇಶದಲ್ಲಿ ಭ್ರಷ್ಟಾಚಾರ, ದೌರ್ಜನ್ಯ, ಶೋಷಣೆ, ಕಳ್ಳತನ, ಸುಲಿಗೆಯಲ್ಲಿ ರಾಜ್ಯವನ್ನು ನಂ.1 ಸ್ಥಾನಕ್ಕೆ ತಂದಿದ್ದಾರೆ. ಕಮೀಷನ್ ಏಜೆಂಟ್ ಆಗಿ ವರ್ತಿಸುವ ಮೂಲಕ ಅಂಬಾನಿಗಿಂತ ಹೆಚ್ಚು ಹಣ ಸಂಪಾದಿಸುವ ದಂಧೆ ಆರಂಭಿಸಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ಧಾಳಿ ನಡೆಸಿದರು.
ಈ ಹಿಂದೆ ಬಿಜೆಪಿ ಅಧಿಕಾರ ಇದ್ದಾಗ ಒಂದು ಕಣ್ಣಿಗೆ ಬೆಣ್ಣೆ, ಮತ್ತೂಂದು ಕಣ್ಣಿಗೆ ಸುಣ್ಣದಂತೆ ಅಧಿಕಾರ ನಡೆಸಿಲ್ಲ. ಇಂದಿನ ಮುಖ್ಯಮಂತ್ರಿ ಯೋಜನೆಗಳ ಹೆಸರಲ್ಲಿ ಸಮಾಜ ಒಡೆಯುತ್ತಿದ್ದಾರೆ. ಭಾಗ್ಯಲಕ್ಷೀ ಬಾಂಡ್ ಪಡೆಯಲು ತಲೆತಿರುಕ ಕಾನೂನು ತಂದಿದ್ದಾರೆ. ಇಂತಹವರಿಗೆ ತಲೆತಿರುಕ ಎನ್ನದೇ ಬೇರೆ ಏನು ಹೇಳಬೇಕು ಎಂದು ಪ್ರಶ್ನಿಸಿದರು.
ಈ ಹಿಂದೆ ಅಧಿಕಾರದಲ್ಲಿದ್ದ ಯುಪಿಎ ಸರ್ಕಾರ ಕೇಂದ್ರದ ಖಜಾನೆ ಖಾಲಿ ಮಾಡಿತ್ತು. ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಆಡಳಿತಾವಧಿಯಲ್ಲಿ ಖಜಾನೆ ತುಂಬಿಸುವಲ್ಲಿ ಶ್ರಮಿಸಿದ್ದಾರೆ. ಪ್ರಧಾನಿ ಮೋದಿಯವರನ್ನು ನೀವು ತೆಗಳುತ್ತೀರಿ, ಆದರೆ ಅಮೆರಿಕ ಅಧ್ಯಕ್ಷರು ಹಾಡಿ ಹೊಗಳುತ್ತಿದ್ದಾರೆ. ಇಡೀ ಪ್ರಪಂಚವೇ ಪ್ರಧಾನಿ ಮೋದಿ ಸಲಹೆ ಕೇಳುತ್ತಿದೆ ಎಂದರು.
ಮಾಜಿ ಸಚಿವರಾದ ಸಿ.ಎಂ. ಉದಾಸಿ, ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ, ಸಂಸದ ಶಿವಕುಮಾರ ಉದಾಸಿ, ಶಾಸಕರಾದ ಬಿ.ವೈ. ರಾಘವೇಂದ್ರ, ಯು.ಬಿ. ಬಣಕಾರ, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಸಜ್ಜನ, ಮಾಜಿ ಶಾಸಕ ಸುರೇಶಗೌಡ ಪಾಟೀಲ, ರಾಜ್ಯ ಬಿಜೆಪಿ ಕಾರ್ಯದರ್ಶಿ ಎನ್. ರವಿಕುಮಾರ ಇನ್ನಿತರರಿದ್ದರು.