ರಾಜ್ಯದಲ್ಲಿ ಹೊಸ ಸರಕಾರ ಅಸ್ತಿತ್ವಕ್ಕೆ ಬಂದ ಮರುದಿನವೇ ಶಕ್ತಿಸೌಧದ ಹೊಸ್ತಿಲಲ್ಲೇ ಮಳೆಯ ಅಬ್ಬರಕ್ಕೆ ಮೊದಲ ಸಾವು ಸಂಭವಿಸಿದೆ. ಹೈದರಾಬಾದ್ ಮೂಲದ ಆರು ಜನರ ಕುಟುಂಬ ಬೆಂಗಳೂರಿಗೆ ಬಂದ ವೇಳೆ ಮಳೆನೀರು ತುಂಬಿಕೊಂಡಿದ್ದ ಕೆ.ಆರ್. ವೃತ್ತದಲ್ಲಿನ ಅಂಡರ್‌ಪಾಸ್ ಮೂಲಕ ಹಾದುಹೋಗುವಾಗ ಆ ಕುಟುಂಬದ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಸರಕಾರ “ಹನಿಮೂನ್ ಮೂಡ್’ಗೆ ಜಾರುವ ಮುನ್ನವೇ ಈ ಘಟನೆ ನಡೆದಿದೆ. ಇದರೊಂದಿಗೆ ಸವಾಲಿನ ದಿನಗಳ ಸೂಚನೆ ಸಿಕ್ಕಿದೆ.
ಮುಂಗಾರು ಇನ್ನೂ ಆರಂಭಗೊಂಡಿಲ್ಲ. ಮಳೆಗಾಲದ ಅವಾಂತರಗಳನ್ನು ಎದುರಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಎಷ್ಟರಮಟ್ಟಿಗೆ ಸಜ್ಜುಗೊಂಡಿದೆ ಎಂಬುದನ್ನು ಈ ಘಟನೆ ಬಯಲುಗೊಳಿಸಿದೆ. ಅಷ್ಟೇ ಅಲ್ಲ, ಸರಕಾರವು ಅಧಿಕಾರಿಗಳಿಗೆ ಚಾಟಿ ಬೀಸದಿದ್ದರೆ ಮುಂದಿನ ದಿನಗಳು ಇನ್ನೂ ಭಯಾನಕ ಆಗಿರಲಿವೆ ಎಂಬ ಎಚ್ಚರಿಕೆಯನ್ನೂ ವರುಣ ನೀಡಿದಂತಿದೆ.
ಹಾಗೆ ನೋಡಿದರೆ ಸರಕಾರದ ಯೋಜನೆ ಪ್ರಕಾರ ಅಂಡರ್‌ಪಾಸ್‌ಗಳು ಮತ್ತು ಎತ್ತರಿಸಿದ ಮಾರ್ಗಗಳ ನಿರ್ಮಾಣದ ಉದ್ದೇಶ ಸುಗಮ ಸಂಚಾರ ಕಲ್ಪಿಸುವುದಾಗಿದೆ. ಆದರೆ ಆ ಅಂಡರ್‌ಪಾಸ್‌ಗಳೇ ಸಾವಿಗೆ ರಹದಾರಿಗಳಾಗುತ್ತಿರುವುದು ವಿಪರ್ಯಾಸ. ಘಟನೆ ನಡೆದ ಸ್ಥಳ ನಗರದ ಹೃದಯಭಾಗ. ವಿಧಾನಸೌಧ, ಬಹುಮಹಡಿ ಕಟ್ಟಡ, ಹೈಕೋರ್ಟ್ ಪಕ್ಕದಲ್ಲೇ ಎನ್ನುವುದು ಗಮನಿಸಬೇಕಾದ ಅಂಶ. ಇನ್ನೂ ವಿಚಿತ್ರವೆಂದರೆ ಕೇವಲ 30 ಮಿ.ಮೀ. ಮಳೆಯಾಗಿದೆ. ಅಷ್ಟಕ್ಕೇ ಇಷ್ಟು ದೊಡ್ಡ ಅವಾಂತರವಾಗಿದೆ. ನೂರಾರು ಮಿಲಿಮೀಟರ್ ಸುರಿದರೆ ಗತಿ ಏನು ಎಂಬ ಪ್ರಶ್ನೆಯನ್ನೂ ಈ ಘಟನೆ ಎತ್ತಿದೆ.
ಕೆ.ಆರ್. ವೃತ್ತದಲ್ಲಿನ ಪ್ರಕರಣ ಮಾತ್ರವಲ್ಲ; ನಗರದ ಪ್ರಮುಖ ರಸ್ತೆಗಳು, ಜಂಕ್ಷನ್‌ಗಳು, ಅಂಡರ್‌ಪಾಸ್‌ಗಳಲ್ಲಿ ಕೂಡ ಸ್ಥಿತಿ ಭಿನ್ನವಾಗಿರಲಿಲ್ಲ. ಅವೆಲ್ಲವೂ ಬಹುತೇಕ ಜಲಾವೃತಗೊಂಡು ವಾಹನ ಸವಾರರು ಪರದಾಡುವಂತಾಗಿದೆ. ವಿಜಯನಗರದ ಶೋಭಾ ಆಸ್ಪತ್ರೆ ಬಳಿ ಸಂಚರಿಸುತ್ತಿದ್ದ ಬಿಎಂಟಿಸಿ ಬಸ್ ಎದುರೇ ಮರವೊಂದು ನೆಲಕಚ್ಚಿದೆ. ಕೂದಲೆಳೆಯಲ್ಲಿ ಅನಾಹುತ ತಪ್ಪಿದೆ. ಹಲವು ಕಾರುಗಳ ಮೇಲೆಯೇ ಮರಗಳು ಬಿದ್ದಿವೆ. ಬೀಳಬಹುದಾದ ಮರಗಳನ್ನು ಗುರುತಿಸಿ ಕಡಿತ ಅಥವಾ ತೆರವು ಕಾರ್ಯ ಮಾಡಬೇಕಾದ ಸಂಬಂಧಪಟ್ಟ ಅಧಿಕಾರಿಗಳು ಏನು ಮಾಡುತ್ತಿದ್ದರು ಎಂಬ ಪ್ರಶ್ನೆಯನ್ನೂ ಎತ್ತುತ್ತದೆ. ಸಿಬಂದಿ ಚುನಾವಣೆ ಕರ್ತವ್ಯದಲ್ಲಿ “ಬ್ಯುಸಿ’ ಆಗಿದ್ದರು ಎಂಬ ಸಿದ್ಧ ಸಬೂಬನ್ನು ಸ್ಥಳೀಯ ಸಂಸ್ಥೆಗಳು ನೀಡಬಹುದು. ಆದರೆ ಹೀಗೆ ನಗರದಲ್ಲಿ ಮಳೆಗೆ ಜನರು ಸಾವನ್ನಪ್ಪು ತ್ತಿರುವುದು ಇದೇ ಮೊದಲಲ್ಲ; ಇದು ಪ್ರತೀ ವರ್ಷದ ಗೋಳು ಆಗಿದೆ. ಒಮ್ಮೊಮ್ಮೆ ಮಳೆಗೆ ರಸ್ತೆ ಗುಂಡಿಬಿದ್ದು, ಮತ್ತೂಮ್ಮೆ ವಾಹನದಲ್ಲಿ ಹೊರಟಾಗ ಮರಬಿದ್ದು, ಇನ್ನೊಮ್ಮೆ ರಾಜಕಾಲುವೆಯಲ್ಲಿ ಕೊಚ್ಚಿಹೋಗುವುದು ಸಾಮಾನ್ಯವಾಗಿದೆ.
ಪ್ರತೀ ಘಟನೆಯಲ್ಲೂ ರಾಜಕಾಲುವೆ ಒತ್ತುವರಿ ತೆರವು ಸದ್ದಾಗುತ್ತದೆ. ಅನಂತರ ಮಿಂಚಿನಂತೆ ಮಾಯವಾಗುತ್ತದೆ. ಈ ಹಿಂದೆ ರಾಜಕಾಲುವೆ ಎರಡೂ ಕಡೆಗಳಲ್ಲಿನ ತಡೆಗೋಡೆಗಳನ್ನು ಎತ್ತರಿಸಲು ಸಾವಿರಾರು ಕೋಟಿ ಸುರಿಯಲಾಗಿದೆ. ಪರಿ ಣಾಮ ಮಾತ್ರ ಗೊತ್ತಿಲ್ಲ. ಹೊಸ ಸರಕಾರ ಚಾಟಿ ಬೀಸುವ ಮೂಲಕ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಬೇಕಿದೆ. ಆಗಾಗ್ಗೆ ಉಂಟಾಗುವ ಇಂಥ ಭಾರೀ ಮಳೆ, ಪ್ರವಾ ಹಕ್ಕೆ ಸರ್ವ ರೀತಿಯಲ್ಲೂ ಆಡಳಿತ ಸಿದ್ಧವಾಗಬೇಕಾಗಿದೆ.