Advertisement

ಸಾಧಕರು ಇನ್ನಷ್ಟು ಸಾಧನೆ ಮಾಡಲಿ: ಪೇಜಾವರ ಶ್ರೀ

01:47 AM May 15, 2019 | Team Udayavani |

ಉಡುಪಿ: ಸಾಧಕರು ತಮ್ಮ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಲಿ ಎಂಬ ಹಾರೈಕೆಯೊಂದಿಗೆ ಪ್ರತೀ ವರ್ಷ ಜನ್ಮನಕ್ಷತ್ರದಂದು ಸಮ್ಮಾನಿಸುವ ಕಾರ್ಯಕ್ರಮ 20 ವರ್ಷದಿಂದ ನಡೆಯುತ್ತಿದೆ. ಮಾಧವ, ಮಧ್ವ, ಮಾನವ ಈ ಮೂರು ಮಕಾರಗಳಲ್ಲಿ ಮಮಕಾರ ಹೊಂದಿದ್ದು, ಇವರ ಸೇವೆಗೆ ಕೃಷ್ಣನ ಅನುಗ್ರಹ ಇರಲಿ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.

Advertisement

ಕೃಷ್ಣ ಮಠದ ರಾಜಾಂಗಣದಲ್ಲಿ ಮಂಗಳವಾರ ಪರ್ಯಾಯ ಪಲಿಮಾರು ಮಠ, ಪೇಜಾವರ ಅಧೋಕ್ಷಜ ಮಠದ ವತಿಯಿಂದ ಪೇಜಾವರ ಶ್ರೀಗಳ ಜನ್ಮನಕ್ಷತ್ರದ ಅಂಗವಾಗಿ ವಿವಿಧ ಕ್ಷೇತ್ರಗಳ ಸಾಧಕರಿಗೆ ವಿಜಯಶ್ರೀ, ಶ್ರೀ ರಾಮವಿಠಲ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಸಂಗೀತ ಮತ್ತು ಸಾಹಿತ್ಯ ಭಾರತದ ಉತ್ತಮ ಕಲೆ, ಯಕ್ಷಗಾನ ಕರಾವಳಿ ಯಲ್ಲಿ ಮಾತ್ರ ಕಾಣಬಹುದಾದ ವಿಶಿಷ್ಟ ಕಲೆಯಾಗಿದ್ದು, ಈ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಗೌರವಿಸಲಾಗಿದೆ. ಮಣಿಪಾಲದ ವಿಜಯನಾಥ ಶೆಣೈ ಸಾಂಸ್ಕೃತಿಕ ಕ್ಷೇತ್ರಕ್ಕೆ ಅನನ್ಯ ಕೊಡುಗೆ ಸಲ್ಲಿಸಿದ್ದು, ಪ್ರಾಚೀನ ಶಿಲ್ಪಕಲೆಗಳ ಸಂರಕ್ಷಣೆ ಮಹತ್ವದ ಕೆಲಸವಾಗಿದೆ. ಹೀಗಾಗಿ ಉಡುಪಿಯಲ್ಲಿ ಅವರ ನೆನಪು ಚಿರಸ್ಥಾಯಿ ಎಂದರು.

ಪ್ರಶಸ್ತಿ ಪುರಸ್ಕೃತರು
ಶ್ರೀರಾಮವಿಠಲ ಪ್ರಶಸ್ತಿಯನ್ನು ಉದಯವಾಣಿಯ ಹಿರಿಯ ಛಾಯಾಚಿತ್ರ ಪತ್ರಕರ್ತ ಆಸ್ಟ್ರೋ ಮೋಹನ್‌ (ಛಾಯಾಚಿತ್ರಗ್ರಹಣ), ಕೆ. ರಾಘವೇಂದ್ರ ರಾವ್‌ (ಶಾಸ್ತ್ರೀಯ ಸಂಗೀತ), ಪಿ. ಲಕ್ಷ್ಮೀನಾರಾಯಣ ಭಟ್‌ (ಪಾಕಶಾಸ್ತ್ರ), ಎಚ್‌. ಶಾಂತರಾಜ ಐತಾಳ (ಸಾಹಿತ್ಯ), ದಿವಾಕರ್‌ ರೈ ಸಂಪಾಜೆ, ಬೇಗಾರು ಶಿವಕುಮಾರ್‌, ಶಶಿಕಾಂತ ಶೆಟ್ಟಿ ಕಾರ್ಕಳ, ಚಂದ್ರಶೇಖರ ಧರ್ಮಸ್ಥಳ (ಯಕ್ಷಗಾನ), ಸುಬ್ರಹ್ಮಣ್ಯ ರಾವ್‌ (ಚಿತ್ರಕಲೆ), ಉಡುಪಿ ಜನಾರ್ದನ್‌ (ವಾದ್ಯಸಂಗೀತ), ಡಾ| ಜಯಂತ ಭಟ್‌ (ವೈದ್ಯಕೀಯ), ಲಕ್ಷ್ಮೀ ಗುರುರಾಜ್‌ (ನೃತ್ಯ) ಅವರಿಗೆ ನೀಡಿ ಸಮ್ಮಾನಿಸಲಾಯಿತು. ಪ್ರಶಸ್ತಿಯು 10,000 ರೂ. ನಗದು ಮತ್ತು ಪ್ರಶಸ್ತಿ ಪತ್ರ ಒಳಗೊಂಡಿದೆ.

ಪೇಜಾವರ ಶ್ರೀಗಳ ಪಾದಕಾಣಿಕೆ ಯಲ್ಲಿ ಸಂಗ್ರಹವಾದ ಮೊತ್ತದಲ್ಲಿ ವೈದ್ಯಕೀಯ ನೆರವು ಹಸ್ತಾಂತರಿಸ ಲಾಯಿತು. ಜಾಂಬವತೀ ಕಲ್ಯಾಣ ಯಕ್ಷಗಾನ ಪ್ರದರ್ಶನಗೊಂಡಿತು. ವಾಸುದೇವ ಭಟ್‌ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next