ಬೆಂಗಳೂರಿನ ಯುವತಿ ಮೇಲಿನ ಆ್ಯಸಿಡ್ ದಾಳಿ ಪ್ರಕರಣದ ಆರೋಪಿ ನಾಗೇಶ್ನನ್ನು ಬಂಧಿಸಿರುವುದು ಸರಿಯಷ್ಟೇ. ಈತ 16 ದಿನಗಳ ಬಳಿಕ ತಮಿಳುನಾಡಿನಲ್ಲಿ ಸೆರೆ ಸಿಕ್ಕಿದ್ದು, ಈತನ ಬಂಧನ ಕಾರ್ಯಾಚರಣೆ ನಡೆಸಿದ ಪೊಲೀಸರಿಗೆ ಶ್ಲಾಘನೆ ಉಲ್ಲೇಖಾರ್ಹ.
ಇಂಥ ಘೋರ, ಅಮಾನವೀಯ ಆ್ಯಸಿಡ್ ದಾಳಿ ಪ್ರಕರಣಕ್ಕೆ ಮಹಿಳೆಯರೇ ತುತ್ತಾಗುತ್ತಿರುವುದನ್ನು ನೋಡಿದರೆ ಸಮಾಜ ಇನ್ನೂ ಪುರುಷರ ವಾಂಛೆ ಹಾಗೂ ಅಹಂಗಳ ನಡುವೆಯೇ ಗಿರಕಿ ಹೊಡೆ ಯುತ್ತಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಆ್ಯಸಿಡ್ ದಾಳಿಯಂಥ ಘಟನೆ ಗಳ ವಿರುದ್ಧ ಎಷ್ಟೇ ಕಠಿನ ಕ್ರಮಗಳಿಗೆ ಮುಂದಾಗಿದ್ದರು, ಇಂಥ ದುರುಳ ಘಟನೆಗಳನ್ನು ಸಂಪೂರ್ಣ ತಹಂಬದಿಗೆ ತರಲು ಸಾಧ್ಯವಾಗದೆ ಇರುವುದು ದುರದೃಷ್ಟಕರ. ಈ ನಿಟ್ಟಿನಲ್ಲಿ ಆಡಳಿತ ಪರ್ಯಾಲೋಚಿ ಸಬೇಕಾದ ಸಂಗತಿ. ಆ್ಯಸಿಡ್ ದಾಳಿಗೆ ತುತ್ತಾದವರಂತೂ ಜೀವನ ಪರ್ಯಂತ ನರಳುತ್ತಲೇ ಇರಬೇಕಾಗುತ್ತದೆ. ಈಗ ಆ್ಯಸಿಡ್ ದಾಳಿಗೆ ತುತ್ತಾಗಿರುವ ಬೆಂಗಳೂರಿನ ಯುವತಿಯ ಸ್ಥಿತಿಯೂ ಹಾಗೆಯೇ ಇದೆ. ಸದ್ಯ ಅಪಾಯದಿಂದ ಪಾರಾಗಿದ್ದರೂ ಇನ್ನೂ ದೀರ್ಘಕಾಲ ಚಿಕಿತ್ಸೆ ಪಡೆಯಬೇಕಾಗಿರುವುದು ಮತ್ತು ಮುಂದೆ ಇದೇ ನೋವು ಕಾರ್ಪಣ್ಯಗಳನ್ನು ಆಕೆ ಹೊತ್ತು ಸಾಗಬೇಕು.
ಈಗ ತಮಿಳುನಾಡಿನಲ್ಲಿ ಬಂಧಿತನಾಗಿರುವ ನಾಗೇಶ್, ಒಂದಷ್ಟು ದಿನ ಜೈಲಿನಲ್ಲಿರುತ್ತಾನೆ. ಕೋರ್ಟ್ನಲ್ಲಿ ಈತನ ವಿರುದ್ಧ ವಿಚಾರಣೆ ನಡೆದು, ಅಂತಿಮ ತೀರ್ಪು ಬೀಳುವುದಕ್ಕೆ ಒಂದಷ್ಟು ದಿನಗಳಾದರೂ ಬೇಕು. ಆದರೆ ನ್ಯಾಯಾಲಯ ತ್ವರಿತಗತಿಯಲ್ಲಿ ತೀರ್ಪು ಪ್ರಕಟಿಸಿ, ಆರೋಪಿಗೆ ತಕ್ಕ ಶಿಕ್ಷೆಯಾಗುವಂತೆ ಮಾಡಿದರೆ ಮಾತ್ರ ಇಂಥ ಪ್ರಕರಣಗಳಿಗೆ ಕಡಿವಾಣ ಹಾಕಲು ಸಾಧ್ಯ.
ರಾಷ್ಟ್ರೀಯ ಅಪರಾಧ ದಾಖಲೆಗಳ ಮಂಡಳಿ ಪ್ರಕಾರ, ದೇಶದಲ್ಲಿ ಪ್ರತೀ ವರ್ಷ 200ರಿಂದ 300ರಷ್ಟು ಕೇಸುಗಳು ದಾಖಲಾಗುತ್ತವೆ. ಕೆಲವೊಮ್ಮೆ ವರ್ಷಕ್ಕೆ ಒಂದು ಸಾವಿರ ಪ್ರಕರಣಗಳು ದಾಖಲಾಗುತ್ತವೆ. ಹಾಗೆಯೇ ಕೆಲವು ಬಾರಿ ಸ್ಥಳೀಯ ಒತ್ತಡಗಳಿಂದಾಗಿ ದೂರು ದಾಖಲಾಗುವುದೇ ಇಲ್ಲ. ಅದರಲ್ಲೂ ಉತ್ತರ ಭಾರತದ ರಾಜ್ಯಗಳಾದ ಉತ್ತರ ಪ್ರದೇಶ, ದಿಲ್ಲಿ, ಬಿಹಾರದಂಥ ರಾಜ್ಯಗಳಲ್ಲಿ ಈ ಆ್ಯಸಿಡ್ ದಾಳಿ ಪ್ರಕರಣಗಳು ಹೆಚ್ಚು. ಇದಕ್ಕೆ ಉದಾಹರಣೆ ಎಂಬಂತೆ ಕಳೆದ ಮೂರು ದಿನಗಳಲ್ಲೇ ಈ ರಾಜ್ಯಗಳಲ್ಲಿ ಎರಡು ಪ್ರಕರಣಗಳು ನಡೆದಿವೆ.
Related Articles
ಆ್ಯಸಿಡ್ ದಾಳಿ ವಿಚಾರದಲ್ಲಿ ಎಲ್ಲ ಸರಕಾರಗಳು ಶೂನ್ಯ ಸಹಿಷ್ಣು ಹೊಂದಿರಬೇಕು. ಇನ್ನೊಬ್ಬರ ಬದುಕು ಹಾಳು ಮಾಡುವ ಉದ್ದೇಶವಿರಿಸಿಕೊಂಡವರು ಮಾನವ ಕುಲದಲ್ಲಿ ಬಾಳುವುದಕ್ಕೆ ಅರ್ಹರೇ ಅಲ್ಲ. ಈಗಿರುವ ಕಾನೂನುಗಳನ್ನು ಬಿಗಿ ಮಾಡಿ ಇಂಥ ಆರೋಪಿಗಳಿಗೆ ಕಠಿನ ಶಿಕ್ಷೆಯಾಗುವುಂತೆ ಮಾಡಲೇಬೇಕು.
ಕರ್ನಾಟಕದಲ್ಲಿ ಆ್ಯಸಿಡ್ ದಾಳಿಯ ಸಂತ್ರಸ್ತರಿಗೆ 10 ಸಾವಿರ ರೂ. ಸಹಾಯಧನ ನೀಡಲು ಮುಂದಾಗಿರುವುದು ಸ್ವಾಗತಾರ್ಹ. ಇವರಿಗೆ ಮನೆ ನಿರ್ಮಾಣಕ್ಕಾಗಿ ಮತ್ತು ಸ್ವಂತ ಉದ್ಯೋಗ ಮಾಡಿಕೊಳ್ಳಲು 5 ಲಕ್ಷ ರೂ. ಸಹಾಯಧನ ನೀಡುತ್ತೇವೆ ಎಂದು ಸರಕಾರ ಘೋಷಿಸಿದೆ. ಈ ಯೋಜನೆಗಳು ಆ್ಯಸಿಡ್ ಸಂತ್ರಸ್ತೆಗೆ ತಲುಪಿದರೆ, ಕಷ್ಟದಲ್ಲಿರುವ ಆಕೆಗೆ ಒಂದಷ್ಟಾದರೂ ಸಹಾಯ ಮಾಡಿದಂತೆ ಆಗುತ್ತದೆ. ಜತೆಗೆ ಇಂಥ ಸಂತ್ರಸ್ತರ ಜತೆಗೆ ಸರಕಾರಗಳಷ್ಟೇ ಅಲ್ಲ, ಎಲ್ಲರೂ ನಿಂತುಕೊಳ್ಳಬೇಕಾದದ್ದು ಜವಾಬ್ದಾರಿ ಕೂಡ.