Advertisement

ಶಿಕ್ಷಕರು ಮಾತೃಭಾಷೆ ಉಳಿಸಲಿ: ಕಂಬಾರ

10:56 AM Aug 24, 2018 | Team Udayavani |

ಬೆಂಗಳೂರು: ಇಂಗ್ಲಿಷ್‌ ಭಾಷೆ ಕಲಿಕೆಗೆ ಸರ್ಕಾರ ಮುಂದಾಗಿರುವುದು ಆರೋಗ್ಯಕರ ಬೆಳವಣಿಗೆಯಲ್ಲ. ಶಿಕ್ಷಣ ವ್ಯವಸ್ಥೆಯಲ್ಲಿ ಪಶುಗಳನ್ನು ಸೃಷ್ಟಿಸುವ ಕೆಲಸ ಯಾವತ್ತೂ ಆಗಬಾರದು ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ. ಚಂದ್ರಶೇಖರ ಕಂಬಾರ ಸಲಹೆ ನೀಡಿದರು.

Advertisement

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕರ್ನಾಟಕ ಸಾಮಾನ್ಯಜ್ಞಾನ ಅಕಾಡೆಮಿ ಗುರುವಾರ ಹಮ್ಮಿಕೊಂಡಿದ್ದ “ಕನ್ನಡ ಸಿರಿ ಮತ್ತು ಅತ್ಯುತ್ತಮ ಉಪನ್ಯಾಸಕ’ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಮಾತನಾಡಿದ ಅವರು, ಶಿಕ್ಷಕರು ಮಾತೃ ಭಾಷೆ ಉಳಿಸದಿದ್ದರೆ ಅದರ ಬೆಳವಣಿಗೆ ಸಾಧ್ಯವಿಲ್ಲ ಎಂದರು.
 
ಭಾಷಾ ವಿಚಾರದಲ್ಲಿ ಸರ್ಕಾರ ಯಾವುದೇ ನೀತಿಯನ್ನು ರೂಪಿಸಿ, ಜಾರಿಗೆ ತರಲಿ. ಆದರೆ, ಶಿಕ್ಷಕರು ಮಾತ್ರ ಮಕ್ಕಳಿಗೆ ಮಾತೃಭಾಷೆ ಕಲಿಕೆಯನ್ನು ಮುಂದುವರಿಸಬೇಕು. ಮಾತೃಭಾಷೆ ಉಳಿಯುವುದು ಕೇವಲ ಶಿಕ್ಷಕರಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು.

ಬ್ರಿಟಿಷರ ಕಾಲಾವಧಿಯಲ್ಲಿ ನೊಂದವರಿಗೆ ನ್ಯಾಯ ನೀಡುತ್ತಿದ್ದ ಶಿಕ್ಷಕನಿಗೆ ಇತ್ತೀಚಿನ ದಿನಗಳಲ್ಲಿ ರಾಜಕಾರಣಿಗಳು ಏಕವಚನದಲ್ಲಿ ಮಾತನಾಡುತ್ತಿದ್ದಾರೆ. ಇದು ಸಲ್ಲದು. ಈ ರೀತಿಯ ನಡವಳಿಕೆಗಳು ಮರುಕಳಿಸುತ್ತಲೇ ಇದ್ದು, ಶಿಕ್ಷಕರು ಈ ಬಗ್ಗೆ ಪ್ರತಿಭಟಿಸದೇ ಇರುವುದು ನೋವು ತಂದಿದೆ ಎಂದರು.

ಶಿಕ್ಷಣ ಅಂದರೆ ಕೇವಲ ರ್‍ಯಾಂಕ್‌ ನೀಡುವ ವ್ಯವಸ್ಥೆ ಅಲ್ಲ. ವಿದ್ಯಾರ್ಥಿಗಳಲ್ಲಿ ಆಲೋಚನಾ ಶಕ್ತಿ ಮತ್ತು ಸೃಜನಶೀಲತೆ ಬೆಳೆಸುವುದು ಇದರ ತಿರುಳಾಗಿದೆ. ನಾವು ಏನು ಮಾಡುತ್ತಿದ್ದೇವೆ ಎಂಬುವುದನ್ನು ಶಿಕ್ಷಕರು ಆತ್ಮವಿಮರ್ಶೆ ಮಾಡಿಕೊಂಡು ವಿದ್ಯಾರ್ಥಿಗಳ ಕಲಿಕೆಯತ್ತ ಗಮನ ಹರಿಸಲಿ ಎಂದು ಕಿವಿಮಾತು ಹೇಳಿದರು. 

ಕೇಂದ್ರದ ಕಾನೂನು ವಿರೋಧಿಸಿ: ಕವಿ, ರಾಜ್ಯಸಭಾ ಸದಸ್ಯ ಎಲ್‌. ಹನುಮಂತಯ್ಯ ಮಾತನಾಡಿ, ಕೇಂದ್ರ ಸರ್ಕಾರ ಶಿಕ್ಷಣ ವ್ಯವಸ್ಥೆಯಲ್ಲಿ ಹೊಸ ಕಾನೂನನ್ನು ಜಾರಿಗೊಳಿಸಲು ಹೊರಟಿದೆ. 5 ಹಾಗೂ 9ನೇ ತರಗತಿಗಳಲ್ಲಿ ವಿದ್ಯಾರ್ಥಿಗಳನ್ನು ಅನುತ್ತೀರ್ಣ ಮಾಡಬಹುದು ಎಂಬ ಕಾನೂನು ರೂಪಿಸಲು ಮುಂದಾಗಿದೆ. ಇದು ಜಾರಿಗೆ ಬಂದರೆ ವಿದ್ಯಾರ್ಥಿಗಳು ಪ್ರಾಥಮಿಕ ಹಂತದಲ್ಲೇ ಮಕ್ಕಳು ಶಿಕ್ಷಣದಿಂದ ದೂರವಾಗುವ ಸಾಧ್ಯತೆ ಇದೆ. ಈ ಬಗ್ಗೆ ಶಿಕ್ಷಣ ತಜ್ಞರು ದನಿ ಎತ್ತಬೇಕು ಎಂದು ಒತ್ತಾಯಿಸಿದರು. 

Advertisement

ಇತ್ತೀಚಿನ ದಿನಗಳಲ್ಲಿ ಮಕ್ಕಳು ಇಂಗ್ಲಿಷ್‌ ಶಾಲೆಗಳತ್ತ ಗುಳೆ ಹೋಗುತ್ತಿದ್ದು, ಈ ಪರಿಸ್ಥಿತಿ ಹೀಗೆ ಮುಂದುವರೆದಲ್ಲಿ ಮುಂದಿನ 5 ವರ್ಷದಲ್ಲಿ 20 ಸಾವಿರ ಸರಕಾರಿ ಶಾಲೆಗಳನ್ನು ಮುಚ್ಚಿ ಹೋಗುವ ಸಾಧ್ಯತೆ ಇದೆ. ಕನ್ನಡ ಮಾಧ್ಯಮದಲ್ಲಿ ಓದಿದರೆ ಭವಿಷ್ಯವಿಲ್ಲ ಎಂಬ ಸ್ಥಿತಿಯನ್ನು ಪೋಷಕರೆ ನಿರ್ಮಾಣ ಮಾಡುತ್ತಿದ್ದು, ಇದು ಒಳ್ಳೆಯ ಬೆಳವಣಿಗೆಯಲ್ಲ. ಹೀಗಾಗಿ, ಸರ್ಕಾರ ಏಕರೂಪ ಶಿಕ್ಷಣ ವ್ಯವಸ್ಥೆ ಜಾರಿಗೆ ತರಬೇಕು ಎಂದರು.

ಇದೇ ವೇಳೆ ಕರ್ನಾಟಕ ಮಾಧ್ಯಮ ಅಕಾಡೆಮಿ ಕಾರ್ಯದರ್ಶಿ ಎಸ್‌. ಶಂಕರಪ್ಪ, ಬೆಂಗಳೂರು ನಗರ ಸಹಾಯಕ ಪೊಲೀಸ್‌ ಆಯುಕ್ತ ಎಸ್‌.ಟಿ. ಸಿದ್ದಲಿಂಗಪ್ಪ ಅವರಿಗೆ “ಕನ್ನಡ ಸಿರಿ’ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಉಪನ್ಯಾಸಕರಿಗೆ “ಉತ್ತಮ ಉಪನ್ಯಾಸಕ’ ಪ್ರಶಸ್ತಿಗಳನ್ನ ಪ್ರದಾನ ಮಾಡಲಾಯಿತು. ಸಾಹಿತಿ ಎಲ್‌.ಎನ್‌.ಮುಕುಂದರಾಜ್‌, ಹೊ.ನ.ನೀಲಕಂಠೇಗೌಡ, ಅಕ್ಕೂರು ಬಸವರಾಜ್‌ ಮತ್ತಿತರರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next