Advertisement

ಶಿಕ್ಷಕರು ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಲಿ

08:51 PM Jan 29, 2020 | Team Udayavani |

ಹಾಸನ: ಶಿಕ್ಷಕರು ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಅವರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ಮಕ್ಕಳಿಗೆ ಪ್ರೌಢಶಾಲಾ ಮಟ್ಟದಲ್ಲಿಯೇ ವಿಜ್ಞಾನದಲ್ಲಿ ತಾನು ಮುಂದಿದ್ದೇನೆ ಎಂಬ ಭಾವನೆ ಬಂದರೆ ಮುಂದೆ ಅವರು ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬಿ.ಎಸ್‌. ಶ್ವೇತಾ ಹೇಳಿದರು.

Advertisement

ನಗರದ ಗಂಧದ ಕೋಠಿ ಆವರಣದಲ್ಲಿರುವ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಜಿಲ್ಲಾ ಪಂಚಾಯತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಹಾಗೂ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಬುಧವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಇನ್ಸ್‌ಪೆಕ್ಟರ್‌ ಅವಾರ್ಡ್‌ ಮಾನಕ್‌ ವಿಜ್ಞಾನ ವಸ್ತು ಪ್ರದರ್ಶನ ಮತ್ತು ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಲಿಕೆ ಎಂಬುದು ನಿರಂತರ ಪ್ರಕ್ರಿಯೆ. ಜೀವಮಾನಡೀ ಕಲಿಯುವುದು ಬಹಳಷ್ಟಿದೆ ಎಂದರು.

ವಿಶೇಷ ಮಾದರಿಗಳ ಪ್ರದರ್ಶನ: ವಸ್ತು ಪ್ರದರ್ಶನವನ್ನು ವೀಕ್ಷಣೆ ಮಾಡಿದ ಅವರು, ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾಗಿರುವ 451 ವಿದ್ಯಾರ್ಥಿಗಳೂ ಕೂಡ ವಿಶೇಷವಾದ ಮಾದರಿಗಳನ್ನು ಮಾಡಿ ಪ್ರದರ್ಶನ ನೀಡಿದ್ದಾರೆ. ಅದರಲ್ಲಿಯೂ ತೈಲ ಸೋರಿಕೆ ಹಾಗೂ ಏರ್‌ಕೂಲರ್‌ ಮಾದರಿಗಳು ಪ್ರಶಂಸನೀಯ. ವಿದ್ಯಾರ್ಥಿಗಳು ಇನ್ನೂ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಬೇಕು ಎಂದು ಹೇಳಿ ವಿದ್ಯಾರ್ಥಿಗಳಿಗೆ ಶುಭಕೋರಿದರು.

ಸರ್ಕಾರಿ ಶಾಲೆ ಮಕ್ಕಳು ಪ್ರತಿಭಾವಂತರು: ಅಧ್ಯಕ್ಷತೆ ವಹಿಸಿದ್ದ ಹಾಸನ ತಾಲೂಕು ಪಂಚಾಯಿತಿ ಅಧ್ಯಕ್ಷ ನಿಂಗೇಗೌಡ ಮಾತನಾಡಿ, ಪೋಷಕರು ಇತ್ತೀಚಿನ ದಿನಗಳಲ್ಲಿ ಖಾಸಗಿ ಶಾಲೆಗಳಿಗೆ ಮಾರುಹೋಗುತ್ತಿದ್ದಾರೆ. ಆದರೆ ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳೂ ಸಹ ಪ್ರತಿಭಾವಂತರೇ ಎನ್ನುವುದಕ್ಕೆ ಈ ಕಾರ್ಯಕ್ರಮದಲ್ಲಿ ಮಕ್ಕಳು ಮಾಡಿರುವ ವಿಜ್ಞಾನ ಮಾದರಿಗಳು ಸಾಕ್ಷಿಯಾಗಿವೆ ಎಂದು ಹೇಳಿದರು.

ದೇಶಾದ್ಯಂತ 6ನೇ ತರಗತಿಯಿಂದ 10 ನೇ ತರಗತಿವರೆಗಿನ ವಿದ್ಯಾರ್ಥಿಗಳಿಂದ ವಿನೂತನವಾದ ವಿಜ್ಞಾನ ಮಾದರಿಗಳನ್ನು ಅನ್ವೇಷಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಹಾಸನ ಜಿಲ್ಲೆಯಲ್ಲಿ 451 ವಿದ್ಯಾರ್ಥಿಗಳು ಆಯ್ಕೆಯಾಗಿರುವುದು ಸಂತೋಷದ ವಿಷಯ ಎಂದು ವೀಕ್ಷಕ‌ರಾಗಿ ಆಗಮಿಸಿದ್ದ ಗುಜರಾತಿನ ಮೌನೀಶ್‌ ಗೋಯಾಲ್‌ ಅವರು ತಿಳಿಸಿದರು.

Advertisement

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ‌ ಕೆ.ಎಸ್‌. ಪ್ರಕಾಶ್‌, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ‌ ಕೆ.ಪಿ. ನಾರಾಯಣ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಸೊಮಶೇಖರ್‌, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುರೇಶ್‌ ಹಾಗೂ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವಿಶಿಷ್ಟ ಕಾರ್ಯಕ್ರಮ: ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನ್ಯಾಸಕಿ ಜಯಲಕ್ಷ್ಮೀ ಮಾತನಾಡಿ, ಇನ್ಸ್‌ಪೆಕ್ಟರ್‌ ಅವಾರ್ಡ್‌ ಕಾರ್ಯಕ್ರಮವು ಭಾರತ ಸರ್ಕಾರದ ವಿಶಿಷ್ಟ ಹಾಗೂ ವಿನೂತನ ಕಾರ್ಯಕ್ರಮ. ಈ ಕಾರ್ಯಕ್ರಮವು 2009-10 ನೇ ಸಾಲಿನಲ್ಲಿ ಪ್ರಾರಂಭವಾಗಿ ಇಲ್ಲಿಯವರೆಗೂ ಯಶಸ್ವಿಯಾಗಿ ನಡೆಯುತ್ತಿದೆೆ. ಈ ಕಾರ್ಯಕ್ರಮದ ಮುಖ್ಯ ಉದ್ದೇಶ ವಿದ್ಯಾರ್ಥಿಗಳನ್ನು ಯುವ ಜ್ಞಾನಿಗಳನ್ನಾಗಿಸುವುದಾಗಿದೆ. ವಿದ್ಯಾರ್ಥಿಗಳಲ್ಲಿ ಅನ್ವೇಷಣಾ, ಪ್ರಯೋಗಾತ್ಮಕ ಮನೋಭಾವ ಹಾಗೆಯೇ ವೈಜ್ಞಾನಿಕ ಚಿಂತನೆಯನ್ನು ಮೂಡಿಸುವಂತಹ ಉದ್ದೇಶವನ್ನು ಹೊಂದಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next