ಮೂಡಲಗಿ: ಮೇ. 20ರೊಳಗೆ ತಾಲೂಕು ಮಟ್ಟದ ಕಚೇರಿಗಳು ಬರಬೇಕಲ್ಲದೇ ಅಧಿಕಾರಿಗಳ ನೇಮಕವಾಗಬೇಕು. ಇಲ್ಲವಾದರೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ತಾಲೂಕಾ ಸಮಿತಿಯಿಂದ ಸತ್ಯಾಗ್ರಹ ಮಾಡಲಾವುದು ಎಂದು ರಮೇಶ ಉಟಗಿ ಎಚ್ಚರಿಕೆ ನೀಡಿದರು.
ರವಿವಾರ ಗುರ್ಲಾಪೂರ ಪ್ರವಾಸಿ ಮಂದಿರದಲ್ಲಿ ಮೂಡಲಗಿ ತಾಲೂಕಾ ಹೋರಾಟ ಸಮಿತಿ ಸದಸ್ಯರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2018ರಲ್ಲಿ ಮೂಡಲಗಿ ತಾಲೂಕು ಕೇಂದ್ರವೇನೋ ಆಗಿದೆ. ಆದರೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಸೌಲಭ್ಯಗಳನ್ನು ಕಲ್ಪಿಸಲಾಗಿಲ್ಲ. ಕೋರ್ಟ್, ತಹಶೀಲ್ದಾರ, ತಾಲೂಕು ಪಂಚಾಯತ ಇಓ, ಸಿಟಿಪಿಓ ಇಲಾಖೆ ತಾಲೂಕು ಮಟ್ಟದ ಅ ಧಿಕಾರಿಗಳನ್ನು ಹೊರತು ಪಡಿಸಿದರೆ ಇತರೆ ಯಾವುದೇ ಇಲಾಖೆಯ ತಾಲೂಕು ಕಚೇರಿಗಳು ಇಲ್ಲ ಎಂದು ಅಸಮಾಧನ ವ್ಯಕ್ತಪಡಿಸಿದರು.
ತಾಲೂಕು ರಚನೆಯಾಗಿ ಸುಮಾರು 4 ವರ್ಷಗಳು ಕಳೆದರೂ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಅಬಕಾರಿ ನಿರೀಕ್ಷಕರ ಕಚೇರಿ, ಜಿಪಂ ಉಪವಿಭಾಗ, ಉಪನೋಂದಣಿ ಕಚೇರಿ, ಅಗ್ನಿಶಾಮಕ ಠಾಣೆ ಸೇರಿದಂತೆ ಅನೇಕ ಕಚೇರಿಗಳು ಬಂದಿಲ್ಲ. ಇದರಿಂದ ಗ್ರಾಮಗಳ ಜನರು ಸಣ್ಣ ಪುಟ್ಟ ದಾಖಲೆಗಳಿಂದ ಹಿಡಿದು ಎಲ್ಲ ಕೆಲಸಗಳಿಗೂ ಈಗಲೂ ಗೋಕಾಕಗೆ ಅಲೆದಾಡುವುದು ತಪ್ಪಿಲ್ಲ ಎಂದರು.
ಲಕ್ಕಣ್ಣ ಸವಸುದ್ದಿ ಮಾತನಾಡಿ, ತಾಲೂಕು ಕೇಂದ್ರವಾಗಿ ಘೋಷಣೆಯಾಗಿ ವರ್ಷಗಳೇ ಗತಿಸಿದರೂ ಅಂದುಕೊಂಡಷ್ಟು ಕಾಯಕಲ್ಪ ಸಿಕ್ಕಿಲ್ಲ. ತಾಲೂಕಿನಲ್ಲಿ ಕೃಷಿಕರೇ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ರೈತರಿಗೆ ಬೇಕಾಗುವ ಕೃಷಿ ಇಲಾಖೆ, ಉಪನೋಂದಣಿ ಕಚೇರಿ ತ್ವರಿತವಾಗಿ ಆಗಬೇಕು. ಇತರೆ ನೂತನ ತಾಲೂಕುಗಳು ಈಗಾಗಲೇ ಅಭಿವೃದ್ಧಿಯಾಗಿದ್ದು, ತಾಲೂಕು ಕೇಂದ್ರವಾಗಿರುವ ಮೂಡಲಗಿ ಪಟ್ಟಣದ ಅಭಿವೃದ್ಧಿಯಾಗದೇ ಇರುವುದು ವಿಪರ್ಯಾಸದ ಸಂಗತಿಯಾಗಿದೆ. ಅಭಿವೃದ್ದಿ ಕಾರ್ಯಗಳು ಮಾಧ್ಯಮಗಳಲ್ಲಿ ಮಾತ್ರ ಆಗಿದೆ ಹೊರತು ಇಲ್ಲಿ ಆಗಿಲ್ಲ ಎಂದು ಶಾಸಕರ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು.
ಭೀಮಪ್ಪ ಹಂದಿಗುಂದ ಹಾಗೂ ಎಮ್ ಎಸ್ ಪಾಟೀಲ ಮಾತನಾಡಿ, ಶಾಸಕ ಬಾಲಚಂದ್ರ ಜಾರಕಿಹೊಳಿಯವರು ತಾಲೂಕಿಗೆ ಬರಬೇಕಾದ ಇಲಾಖೆಗಳನ್ನು ಮೇ 20ರ ಒಳಗೆ ಪ್ರಾರಂಭಿಸಿ ಜನತೆಗೆ ಅನುಕೂಲ ಮಾಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಗುರುನಾಥ ಗಂಗನ್ನವರ, ಲಿಂಗರಾಜ ಅಂಗಡಿ, ದುಂಡಪ್ಪ ಜಾಡರ, ಅವ್ವಪ್ಪ ತುಪಳೆ ಹಾಗೂ ಅನೇಕರು ಉಪಸ್ಥಿತರಿದ್ದರು.