ಅಫಜಲಪುರ: ತಾಲೂಕಿನಲ್ಲಿ ಸಾಕಷ್ಟು ಮಕ್ಕಳಲ್ಲಿ ಪ್ರತಿಭೆ ಇದೆ. ವಸತಿ ಶಾಲೆ ಮಕ್ಕಳು ಬಹಳಷ್ಟು ಪ್ರತಿಭಾವಂತರಿದ್ದಾರೆ. ಅವರ ಪ್ರತಿಭೆ ಗುರುತಿಸುವ ಕೆಲಸವಾಗಲಿ ಎಂದು ಶಾಸಕ ಮಾಲೀಕಯ್ಯ ಗುತ್ತೇದಾರ ಹೇಳಿದರು.
ತಾಲೂಕಿನ ಚವಡಾಪುರ ಹೊರವಲಯದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಪರಿಶಿಷ್ಟ ಜಾತಿ ವಿದ್ಯಾರ್ಥಿನಿಯರ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಉದ್ಘಾಟಿಸಿ ಅವರು ಮಾತನಾಡಿದರು.
ಚವಡಾಪುರದ ಕಿತ್ತೂರು ರಾಣಿ ಚನ್ನಮ್ಮ ಶಾಲೆ 15.80 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದೆ. ಸಕಲ ಸೌಲಭ್ಯಗಳುಳ್ಳ ಶಾಲೆಯಲ್ಲಿ ಅನುಭವಿ ಶಿಕ್ಷಕರಿದ್ದಾರೆ. ಹೀಗಾಗಿ ಸರಿಯಾಗಿ ತರಬೇತಿ ನೀಡಿ ತಾಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಶಾಲೆ ಹೆಸರು ಗುರುತಿಸುವಂತಾಗಲಿ ಎಂದು ಹೇಳಿದರು.
ಇನ್ನೂ ಶಾಲೆಗೆ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದೆ. ತಾತ್ಕಲಿಕವಾಗಿ ಚಿನ್ಮಯಗಿರಿ ಮಠದಿಂದ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ. ಅನಂತರ ಭೀಮಾ ಬ್ಯಾರೇಜ್‌ನಿಂದ ಶಾಶ್ವತ ವ್ಯವಸ್ಥೆ ಮಾಡಲಾಗುತ್ತದೆ. ಅದಲ್ಲದೆ ಕರ್ಜಗಿಯಲ್ಲಿ 17.5 ಕೋಟಿ ವೆಚ್ಚದ ಮೊರಾರ್ಜಿ ವಸತಿ ಶಾಲೆಗೆ ಮುಂದಿನ ವಾರದಲ್ಲಿ ಅಡಿಗಲ್ಲು ನೆರವೇರಿಸಲಾಗುವುದು ಎಂದು ಹೇಳಿದರು. ಮುಖ್ಯಗುರು ಕಾಶಿನಾಥ ಬಗಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಿಪಂ ಉಪಾಧ್ಯಕ್ಷೆ ಶೋಭಾ ಶಿರಸಗಿ, ತಾಪಂ ಅಧ್ಯಕ್ಷೆ ರುಕ್ಮಿಣಿ ಜಮಾದಾರ, ಸದಸ್ಯ ಬಲವಂತ ಜಕಬಾ, ಮುಖಂಡರಾದ ಸಿದ್ದು ಶಿರಸಗಿ, ಮಲ್ಲಿನಾಥ ಪಾಟೀಲ, ವಿಶ್ವನಾಥ ರೇವೂರ, ಶಿವಪುತ್ರಪ್ಪ ಕರೂರ, ಎಪಿಎಂಸಿ ಅಧ್ಯಕ್ಷ ಶಂಕರಲಿಂಗ ಮೇತ್ರಿ, ಸಾಯಬಣ್ಣ ಜಮಾದಾರ, ಸುಭಾಷ ರಾಠೊಡ, ಬಸವರಾಜ ಸಪ್ಪನಗೋಳ, ಯಶ್ವಂತರಾವ ದಳಪತಿ, ದೇವೇಂದ್ರ ಜಮಾದಾರ, ಗುಂಡು ಬಿಜಾಪುರ, ಚಂದ್ರಶಾ ಜಮಾದಾರ, ಮಹಾಂತೇಶ ಜಮಾದಾರ, ನರೇಂದ್ರ ಭಟ್ ಪೂಜಾರಿ, ಲಕ್ಷ್ಮೀನಾರಾಯಣ, ತಹಶೀಲ್ದಾರ ಇಸ್ಮಾಯಿಲ್ ಮುಲ್ಕಿಸಿಪಾಯಿ ಇದ್ದರು. ವೆಂಕಟೇಶ ಪಾಟೀಲ ನಿರೂಪಿಸಿದರು.