Advertisement

ಪ್ರತ್ಯೇಕ ಧರ್ಮ ವಿಚಾರವಾಗಿ ನಿಲುವು ಸ್ಪಷ್ಟಪಡಿಸಲಿ

04:06 PM Oct 22, 2018 | |

ಬಳ್ಳಾರಿ: ವೀರಶೈವ-ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಪಕ್ಷ ಮೊದಲು ತನ್ನ ನಿಲುವು ಏನೆಂಬುದನ್ನು ಸ್ಪಷ್ಟಪಡಿಸಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ವಿಧಾನಪರಿಷತ್‌ ಸದಸ್ಯ ಎನ್‌. ರವಿಕುಮಾರ್‌ ಒತ್ತಾಯಿಸಿದರು. 

Advertisement

ನಗರದ ಬಿಜೆಪಿ ಕಚೇರಿಯಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೀರಶೈವ-ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಪಕ್ಷದ ಮುಖಂಡರು ಒಬ್ಬೊಬ್ಬರು ಒಂದೊಂದು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಹಾಗಾಗಿ ಪ್ರತ್ಯೇಕ ಧರ್ಮಕ್ಕೆ ಸಂಬಂಧಿಸಿದಂತೆ ಮೊದಲು ಕಾಂಗ್ರೆಸ್‌ ಪಕ್ಷ ತನ್ನ ನಿಲುವು ಏನು? ಎಂಬುದನ್ನು ಸ್ಪಷ್ಟಪಡಿಸಬೇಕು. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್‌ ಕ್ಷಮೆ ಕೇಳಿದ ಮಾತ್ರಕ್ಕೆ ಪಾಪ ಪರಿಹಾರವಾಗಲ್ಲ ಎಂದರು.

ಕಾಂಗ್ರೆಸ್‌ ಪಕ್ಷದಲ್ಲಿ ಮುಖಂಡರ ನಡುವೆ ಅಸಮಾಧಾನದ ಬೆಂಕಿ ಹೊತ್ತಿ ಉರಿಯುತ್ತಿದ್ದು, ಒಡೆದ ಮನೆಯಾಗಿದೆ. ಸಚಿವ ಡಿ.ಕೆ. ಶಿವಕುಮಾರ್‌ ಒಂದು ಹೇಳಿದರೆ, ಸಚಿವ ರಮೇಶ್‌ ಜಾರಕಿಹೊಳಿ ಮತ್ತೂಂದು ಹೇಳಿಕೆ ನೀಡುತ್ತಾರೆ. ಇದರಿಂದ ಕಾಂಗ್ರೆಸ್‌ ಮುಖಂಡರಲ್ಲಿ ಭಿನ್ನಾಭಿಪ್ರಾಯಗಳಿಗೆ ಎಂಬುದು ಸ್ಪಷ್ಟವಾಗುತ್ತದೆ. ಡಿ.ಕೆ. ಶಿವಕುಮಾರ್‌ ಅವರು, ಜಾರಕಿಹೊಳಿ ಬ್ರದರ್ಸ್‌ ಅವರನ್ನು ಪಕ್ಷದಲ್ಲಿ ಬೆಳೆಯಲು ಬಿಡುತ್ತಿಲ್ಲ ಎಂದು ಹೇಳಿದರು. 

ಕಾಂಗ್ರೆಸ್‌ ಪಕ್ಷ ಹಿಂದಿನಿಂದಲೂ ಡಾ| ಬಿ.ಆರ್‌. ಅಂಬೇಡ್ಕರ್‌ ಅವರನ್ನು ಸೇರಿದಂತೆ ಹಿಂದುಳಿದವರನ್ನು ಬೆಳೆಯಲು ಬಿಡದೇ ತುಳಿಯುತ್ತಿದೆ. ಹಿಂದುಳಿದವರ ನಾಯಕ ಶಾಸಕ ಬಿ. ಶ್ರೀರಾಮುಲು ಅವರನ್ನು ಸಹ ಮುಗಿಸಲು ಇಡೀ ಸರ್ಕಾರವೇ ಜಿಲ್ಲೆಗೆ ಬಂದು ಠಿಕಾಣಿ ಹೂಡಲಿದೆಯಾದರೂ, ಅದು ಅಸಾಧ್ಯ ಎಂದರು.

ಕಾಂಗ್ರೆಸ್‌ ಮುಖಂಡರು, ಜಿಲ್ಲೆಗೆ ಶ್ರೀರಾಮುಲು ಅವರ ಕೊಡುಗೆ ಏನು? ಎಂದು ಪ್ರಶ್ನಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಜಿಲ್ಲೆಯಲ್ಲಿ ಏನೇನು ಅಭಿವೃದ್ಧಿ ಕೆಲಸಗಳಾಗಿವೆ ಎಂಬುದು ಇಲ್ಲಿನ ಜನರಿಗೆ ಗೊತ್ತಿದೆ. ಸಾವಿರಾರು ಕೋಟಿ ರೂ. ಅನುದಾನ ನೀಡಿದ ಕೊಡುಗೆ ಬಿಜೆಪಿಗೆ ಸಲ್ಲುತ್ತದೆ. ಹೈಕ, ಉತ್ತರ ಕರ್ನಾಟಕ ಭಾಗ ಅಭಿವೃದ್ಧಿಯಾಗಿದ್ದು, ರಸ್ತೆ, ಶೌಚಾಲಯದ ಅಭಿವೃದ್ಧಿ ಕ್ರಾಂತಿಯಾಗಿದ್ದು ಬಿಜೆಪಿ ಅಧಿಕಾರವಧಿಯಲ್ಲಿ ಎಂದು ಹೇಳಿದರು.

Advertisement

ಕಾಂಗ್ರೆಸ್‌ ಮುಖಂಡರಿಗೆ ಉತ್ತರ ಕರ್ನಾಟಕದ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ. ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಜಿಲ್ಲೆಗೆ ಘೋಷಿಸಿದ್ದ 3300 ಕೋಟಿ ರೂ. ಪ್ಯಾಕೇಜ್‌ ಹಣ ಎಲ್ಲಿ ಹೋಯ್ತು? ಈ ಹಣದಲ್ಲಿ ನಯಾಪೈಸೆ ಜಿಲ್ಲೆಯ ಅಭಿವೃದ್ಧಿಗೆ ಖರ್ಚು ಮಾಡಿಲ್ಲ. ಕಾಂಗ್ರೆಸ್‌ ನೇತಾರರು ತಮ್ಮ ಅಭಿವೃದ್ಧಿ ಮಾಡಿಕೊಂಡಿದ್ದಾರೆ ಹೊರತು ಜಿಲ್ಲೆಯನ್ನು ಅಭಿವೃದ್ಧಿ ಪಡಿಸಿಲ್ಲ ಎಂದು ಆರೋಪಿಸಿದರು.

12 ವರ್ಷಗಳ ಬಳಿಕ ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಒಂದಾಗಿದ್ದು, ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಮತ್ತು ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಸಿಎಂ ಆಗಲು ಅವಕಾಶ ನೀಡಬಾರದು ಎಂಬ ಉದ್ದೇಶದಿಂದ ಒಂದಾಗಿದ್ದೇವೆ ಎಂದು ಹೇಳಿಕೆ ನೀಡುವ ಅವರಿಗೆ ನಾಚಿಕೆಯಾಗಬೇಕು. ಹಿಂದೆ ಎಲ್‌.ಆರ್‌. ಶಿವರಾಮೇಗೌಡರ ವಿರುದ್ಧ ಪಾದಯಾತ್ರೆ ನಡೆಸಿ ರೌಡಿ ಎಂದು ಕರೆದಿದ್ದ ಜೆಡಿಎಸ್‌ನವರು ಇಂದು ಮಂಡ್ಯಾ ಲೋಕಸಭೆ ಕ್ಷೇತ್ರದ ಟಿಕೆಟ್‌ ನೀಡಿ ಕಣಕ್ಕಿಳಿಸಿದ್ದಾರೆ ಎಂದರು.

27ಕ್ಕೆ ಬಿಎಸ್‌ವೈ ಬಳ್ಳಾರಿಗೆ: ವಿಧಾನಪರಿಷತ್‌ ಮಾಜಿ ಸದಸ್ಯ ಮೃತ್ಯುಂಜಯ ಜಿನಗಾ ಮಾತನಾಡಿ, ಬಳ್ಳಾರಿ ಲೋಕಸಭೆ ಉಪಚುನಾವಣೆ ನಿಮಿತ್ತ ಬಿಜೆಪಿ ಅಭ್ಯರ್ಥಿ ಜೆ. ಶಾಂತಾ ಅವರ ಪರ ಪ್ರಚಾರ ನಡೆಸಲು ಪಕ್ಷ ರಾಜ್ಯ ಮುಖಂಡರು ಜಿಲ್ಲೆಗೆ ಆಗಮಿಸಲಿದ್ದಾರೆ. ಅ. 27 ರಂದು ಬಳ್ಳಾರಿಗೆ ಜಿಲ್ಲೆಗೆ ಆಗಮಿಸಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅಂದು ಬೆಳಗ್ಗೆ ಸಂಡೂರು, ಸಂಜೆ ಬಳ್ಳಾರಿ ನಗರದಲ್ಲಿ ಪ್ರಚಾರ ನಡೆಸಲಿದ್ದಾರೆ ಎಂದರು.
 
 ಕೆ.ಎಸ್‌. ಈಶ್ವರಪ್ಪ ಅ. 26ಕ್ಕೆ ಹಡಗಲಿ, ಹಗರಿಬೊಮ್ಮನಹಳ್ಳಿ, 27ಕ್ಕೆ ವಿಜಯನಗರ, ಕುರುಗೋಡು, ಬಳ್ಳಾರಿ ನಗರ, ಸಂಸದೆ ಶೋಭಾ ಕರಂದ್ಲಾಜೆ ಅ. 25ಕ್ಕೆ ಹೊಸಪೇಟೆಯಲ್ಲಿ ಬೆಳಗ್ಗೆ ಮಹಿಳಾ ಸಮಾವೇಶ, ಮಧ್ಯಾಹ್ನ ಬಳ್ಳಾರಿಯಲ್ಲಿ ಕಾರ್ಯಕರ್ತರ ಸಭೆ ನಡೆಸಲಿದ್ದಾರೆ. ಕೇಂದ್ರ
ಸಚಿವ ರಮೇಶ್‌ ಜಿಗಜಿಣಗಿಯವರು ಅ. 25 ರಿಂದ 30ರ ವರೆಗೆ ಜಿಲ್ಲೆಯಲ್ಲೇ ಪ್ರಚಾರ ನಡೆಸಲಿದ್ದಾರೆ. ಶಾಸಕ ಸಿ.ಟಿ.ರವಿ ಸೇರಿದಂತೆ ಹಲವಾರು ಮುಖಂಡರು ಉಪಚುನಾವಣೆ ನಿಮಿತ್ತ ಆಗಮಿಸಿ ಪ್ರಚಾರ ನಡೆಸಲಿದ್ದಾರೆ ಎಂದರು.

ಶಾಸಕ ಜಿ.ಸೋಮಶೇಖರರೆಡ್ಡಿ ಮಾತನಾಡಿ, ಕಾಂಗ್ರೆಸ್‌ ಮುಖಂಡರು ಉಪಚುನಾವಣೆಯಲ್ಲಿ ಗೆಲ್ಲಲು ಏನೇ ರಣತಂತ್ರ ರೂಪಿಸಿದರೂ, ರಾಜ್ಯ ಸರ್ಕಾರದ ಸಚಿವರು, ಶಾಶಕರೆಲ್ಲರನ್ನು ಜಿಲ್ಲೆಗೆ ಕರೆತಂದು ಪ್ರಚಾರ ನಡೆಸಿದರೂ, ಬಿಜೆಪಿ ಅಭ್ಯರ್ಥಿ ಗೆಲುವು ನಿಶ್ಚಿತ. ನೂರು ಜನ ಇರುವ ಕೌರವರಿಗಿಂತ ಐದು ಜನರಿದ್ದ ಪಾಂಡವರೇ ಗೆಲ್ಲೋದು ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ, ಕಾರ್ಯದರ್ಶಿ ಮುರಹರಿಗೌಡ, ರಾಮಚಂದ್ರಯ್ಯ, ತಾಪಂ ಸದಸ್ಯ ಜಡೇಗೌಡ, ಮಹಿಳಾ ಮೋರ್ಚಾದ ಸುಗುಣ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next